ಶಿವಮೊಗ್ಗ ರವೀಂದ್ರ ನಗರ ಕೇಸ್: ತೀರ್ಥಹಳ್ಲಿ ತುಂಗಾ ಕಾಲೇಜಿನಲ್ಲಿ ಕೆಲಸ ಮಾಡ್ತಿದ್ದವ ಅರೆಸ್ಟ್
ಸೆ. 27, ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗದ ರವೀಂದ್ರ ನಗರದಲ್ಲಿ ನಡೆದಿರುವ ಸರಗಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಜಯನಗರ ಪೊಲೀಸರು ಘಟನೆ ನಡೆದ ಕೇವಲ ಹದಿನೈದು (15) ದಿನಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರೀಶ್ ಬಿ. ಎಚ್. ಎಂಬುವವನು ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿ ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸೆಪ್ಟೆಂಬರ್ ಹನ್ನೊಂದು (11) ರಂದು ಈ ಕಳ್ಳತನ ಪ್ರಕರಣ ನಡೆದಿತ್ತು. ಅಂದು ಬೆಳಗ್ಗೆ ಸುಮಾರು 83 ವರ್ಷದ ಶಿವಮೊಗ್ಗದ ರವೀಂದ್ರ ನಗರದ ನಿವಾಸಿಯೊಬ್ಬರು ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಯ ಕೊರಳಲ್ಲಿದ್ದ 25 ಗ್ರಾಂ ತೂಕದ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ (1,50,000 ರೂ.) ಬೆಲೆಬಾಳುವ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ.
ಘಟನೆ ಕುರಿತು ಮಹಿಳೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಗಾಗಿ ಕೂಡಲೇ ಒಂದು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಹರೀಶ್ ಬಿ. ಎಚ್., (39) ರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತ ಶಿವಮೊಗ್ಗದ ರವೀಂದ್ರ ನಗರದ ಆರನೇ (6) ಕ್ರಾಸ್‌ನ ರೇಣುಕಾ ನಿಲಯದ ನಿವಾಸಿಯಾಗಿದ್ದು, ಸ್ವಂತ ಊರು ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಬೇವಿನಹಳ್ಳಿ ಆಗಿದೆ.
ಆರೋಪಿಯ ಬಂಧನದಿಂದ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಹಿಂದೆ ದಾಖಲಾಗಿದ್ದ ಒಟ್ಟು ಮೂರು (3) ಸರಗಳ್ಳತನ ಪ್ರಕರಣಗಳು ಪತ್ತೆಯಾದಂತಾಗಿದೆ. ಈ ಮೂರು ಪ್ರಕರಣಗಳಿಂದ ಒಟ್ಟು ಎಪ್ಪತ್ತೊಂದು (71) ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ಏಳು ಲಕ್ಷದ ಹತ್ತು ಸಾವಿರ ರೂಪಾಯಿ (7,10,000 ರೂ.) ಎಂದು ಅಂದಾಜಿಸಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ್ದ ಮೂವತ್ತು ಸಾವಿರ ರೂಪಾಯಿ (30,000 ರೂ.) ಮೌಲ್ಯದ ಸ್ಪ್ಲೆಂಡರ್ ಬೈಕ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
