NSUI Protest Shivamogga ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಡಿಜಿಟಲ್ ಮೌಲ್ಯಮಾಪನ ಆಧಾರಿತ ಪರೀಕ್ಷಾ ಫಲಿತಾಂಶಗಳಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. (NSUI) ಘಟಕವು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮತ್ತು ಪರೀಕ್ಷಾಂಗ ಕುಲಸಚಿವರಿಗೆ ಮನವಿ ಸಲ್ಲಿಸಿದೆ.
ಎನ್.ಎಸ್.ಯು.ಐ. ಕಾರ್ಯಕರ್ತರ ಪ್ರಕಾರ, ಪ್ರತೀ ಕಾಲೇಜಿನಲ್ಲಿ ಸುಮಾರು 50 ರಿಂದ 60 ವಿದ್ಯಾರ್ಥಿಗಳು 0.5, 0.6, 0.7 ರಂತಹ ಕಡಿಮೆ ಅಂಕಗಳನ್ನು ಪಡೆದು ಅನುತ್ತೀರ್ಣರಾಗಿದ್ದಾರೆ. ಅಲ್ಲದೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದ್ದ ಅನೇಕ ವಿದ್ಯಾರ್ಥಿಗಳು ಸಹ ಅನುತ್ತೀರ್ಣಗೊಂಡಿರುವ ಉದಾಹರಣೆಗಳು ಇವೆ. ಇದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗವು ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಪರೀಕ್ಷಾ ಶುಲ್ಕ ಮತ್ತು ಮರುಮೌಲ್ಯಮಾಪನ ಶುಲ್ಕ ಎಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿಯೂ ಸಹ ಫಲಿತಾಂಶದ ಜೊತೆ ಆಟವಾಡುತ್ತಾ ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡುತ್ತಿರುವುದನ್ನು NSUI ಖಂಡಿಸಿದೆ.
ಈ ಹಿನ್ನೆಲೆಯಲ್ಲಿ ಕೂಡಲೇ ವಿ.ವಿ.ಯ ಕುಲಸಚಿವರು (ಪರೀಕ್ಷಾಂಗ) ಈ ಗೊಂದಲದ ಬಗ್ಗೆ ಗಮನ ಹರಿಸಿ, ಡಿಜಿಟಲ್ ಮೌಲ್ಯಮಾಪನದಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಬೇಕು, ವ್ಯವಸ್ಥಿತ ಪೂರ್ವಸಿದ್ಧತೆಯಿಲ್ಲದೇ ಡಿಜಿಟಲ್ ಮೌಲ್ಯಮಾಪನ ನಡೆಸಲು ಕಾರಣರಾದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಮತ್ತು ಯಾವುದೇ ಶುಲ್ಕ ಪಡೆಯದೆ ಎಲ್ಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಬೇಕು ಎಂದು ಎನ್.ಎಸ್.ಯು.ಐ. ಆಗ್ರಹಿಸಿದೆ. ಒಂದು ವೇಳೆ ವಿಶ್ವವಿದ್ಯಾಲಯವು ತಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಎನ್.ಎಸ್.ಯು.ಐ. ವತಿಯಿಂದ ವಿ.ವಿ. ಬಂದ್‌ನಂತಹ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ಎನ್.ಎಸ್.ಯು.ಐ.ನ ಕಾರ್ಯಾಧ್ಯಕ್ಷರಾದ ರವಿ ಕಟಿಕೆರೆ, ಉಪಾಧ್ಯಕ್ಷರುಗಳಾದ ಆದಿತ್ಯ, ಸುಬಾನ್, ಪ್ರಧಾನ ಕಾರ್ಯದರ್ಶಿಯಾದ ಫರಾಜ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
NSUI Protest Shivamogga


