ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹೋಟೆಲ್‌ಗಳು ಮತ್ತು ರಸ್ತೆ ಬದಿಯ ತಿಂಡಿಗಾಡಿಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಬಣ್ಣಗಳು ಹಾಗೂ ಟೇಸ್ಟಿಂಗ್ ಪೌಡರ್ ಅನ್ನು ವ್ಯಾಪಕವಾಗಿ ಬಳಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಎನ್.ಎಸ್.ಯು.ಐ. (NSUI) ಕಾರ್ಯಕರ್ತರು ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಹೊಸನಗರ: ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು
ಪಾಲಿಕೆ ಆಯುಕ್ತರಿಗೆ ಈ ಸಂಬಂಧ ಮನವಿ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ಟೇಸ್ಟಿಂಗ್ ಪೌಡರ್ ಬಳಸಿದ ಆಹಾರ ಸೇವನೆಯಿಂದ ಕ್ಯಾನ್ಸರ್‌ನಂತಹ ಭೀಕರ ರೋಗಗಳು ಬರುವ ಸಾಧ್ಯತೆ ಹೆಚ್ಚಿದೆ, ಸರ್ಕಾರದ ಆಹಾರ ಸುರಕ್ಷತಾ ಕಾಯ್ದೆಯನ್ವಯ ಇಂತಹ ಮಾರಕ ವಸ್ತುಗಳ ಬಳಕೆ ನಿಷೇಧವಿದ್ದರೂ, ನಗರದಲ್ಲಿ ಇವುಗಳ ಬಳಕೆ ಅವಿರತವಾಗಿ ನಡೆಯುತ್ತಿದೆ, ನಗರದ ಫುಡ್ ಕೋರ್ಟ್‌ಗಳು, ಚಾಟ್ಸ್ ಸೆಂಟರ್‌ಗಳು ಮತ್ತು ಫುಟ್‌ಪಾತ್ ಮೇಲಿನ ತಿಂಡಿಗಾಡಿಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಕೆಮಿಕಲ್ ಮಿಶ್ರಿತ ಆಹಾರ ಮಾರಾಟವಾಗುತ್ತಿದ್ದರೂ, ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಕರ್ತವ್ಯಲೋಪಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಕೂಡಲೇ ಪಾಲಿಕೆ ಅಧಿಕಾರಿಗಳು ನಗರದ ಎಲ್ಲಾ ಹೋಟೆಲ್ ಮತ್ತು ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಹಾಗೂ ನಿಯಮ ಉಲ್ಲಂಘಿಸಿ ವಿಷಕಾರಿ ರಾಸಾಯನಿಕ ಬಳಸುವವರ ವಿರುದ್ಧ ಭಾರಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ. ನಗರಾಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷರಾದ ಆದಿತ್ಯ, ಸುಭಾನ್ ಹಾಗೂ ಪ್ರಮುಖರಾದ ವರುಣ್ ಪಂಡಿತ್, ಶ್ರೀಕಾಂತ್, ವಿಕ್ರಂ, ಅಭಿಷೇಕ್ ಸೇರಿದಂತೆ ಹಲವು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
NSUI Protest Against Testing Powder and Chemical Food
