SHIVAMOGGA | Jan 11, 2024 | ಆ ಕಡೆ ಹೋದರೆ, ಸಾಗರ ಶಾಸಕರು ಅಂತಾರೆ, ಈ ಕಡೆಗೆ ತೀರ್ಥಹಳ್ಳಿ ಎಂಎಲ್ಎ ಎನ್ನುತ್ತಾರೆ. ಎರಡು ಕ್ಷೇತ್ರಕ್ಕೆ ಸೇರಿರೋ ಹೊಸನಗರದ ಜನಪ್ರತಿನಿಧಿ ಯಾರು ಅಂತಾ ಕೇಳುವ ಸ್ಥಿತಿಗೆ ರಾಜಕೀಯ ವ್ಯವಸ್ಥೆ ಹೊಸನಗರ ವನ್ನು ತಂದಿಟ್ಟಿದೆ. ಹೀಗಾಗಿ, ಹೊಸನಗರಕ್ಕೊಬ್ಬರು ಶಾಸಕರು ಬೇಕು. ಹೊಸನಗರ ವಿಧಾನಸಭಾ ಕ್ಷೇತ್ರವಾಗಬೇಕು ಎಂಬ ಹೋರಾಟ ಮತ್ತೆ ಹೊಸದಾಗಿ ಆರಂಭವಾಗಿದೆ.
ಈ ವೇಳೆ ವಿಧಾನಸಭಾ ಕ್ಷೇತ್ರ ಪಡೆದೇ ತಿರಬೇಕು, ಇದು ನಮ್ಮೆಲ್ಲರ ಶಪಥವಾಗಬೇಕು ಎಂಬ ಘೋಷಣೆ ಕೇಳಿಬಂದಿದೆ. ವಿಧಾನ ಸಭಾ ಕ್ಷೇತ್ರ ಹೋರಾಟ ನಡಿಗೆ ಗ್ರಾಮ ಪಂಚಾಯ್ತಿಗಳ ಕಡೆಗೆ ಅಭಿಯಾನ ಈ ಹೋರಾಟದ ಸಲುವಾಗಿ ಆರಂಭವಾಗಿದ್ದು, ಇದಕ್ಕೆ ಚಾಲನೆಯು ಸಿಕ್ಕಿದೆ.
ಹೊಸನಗರ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಕೈಗೊಂಡ ನಿರ್ಣಯದಂತೆ ಈ ಹೋರಾಟವನ್ನ ರೂಪಿಸಲಾಗಿದೆ. ಹೊಸನಗರ ತಾಲ್ಲೂಕು ವಿವಿಧ ವಿದ್ಯುತ್ ಮತ್ತು ಜಲ ಯೋಜನೆಗಳಿಂದ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಒಂದೆಡೆ ಇಡೀ ನಾಡಿಗೆ ಬೆಳಕು ಕೊಡುವ ಯೋಜನಯಾದರೆ, ಇನ್ನೊಂದೆಡೆ ಪಶ್ಚಿಮ ಘಟ್ಟ. ಹೀಗಾಗಿ ಇಲ್ಲಿ ಜನ ಸಂಖ್ಯೆ ಆಧಾರದಲ್ಲಿ ಕ್ಷೇತ್ರ ವಿಂಗಡಣೆ ಆಗದೆ, ವಿಸ್ತೀರ್ಣ ಮತ್ತು ಬೌಗೋಳಿಕ ಹಿನ್ನಲೆ ಆಧಾರದಲ್ಲಿ ಕ್ಷೇತ್ರ ನೀಡಬೇಕು ಎಂದು ಮುಖಂಡರು ಹೋರಾಟದ ಚಾಲನೆ ವೇಳೆ ಒತ್ತಾಯಿಸಿದ್ದಾರೆ.
ಹರಿದು ಹಂಚಿರುವ ಕ್ಷೇತ್ರವನ್ನು ಮತ್ತೆ ಒಟ್ಟುಗೂಡಿಸುವ ನಿಟ್ಟಿನಲ್ಲಿ ಮಠಾದೀಶರು, ರಾಜಕಾರಣಿಗಳು, ಕಲಾವಿದರು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ರೈತ, ಕಾರ್ಮಿಕರು ಒಂದಾಗಬೇಕಿದೆ ಎಂದು ತಾಲೂಕು ಗ್ರಾಮ ಪಂಚಾಯಿತಿಗಳ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಕರೆ ನೀಡಿದರು.
ಕ್ಷೇತ್ರಕ್ಕೆ ಒಳಪಡುವ ಪ್ರತಿ ಗ್ರಾಮ ಪಂಚಾಯಿತಿಗಳು ಒಕ್ಕೂರಲಿನಿಂದ ಈ ಹೋರಾಟವನ್ನು ಬೆಂಬಲಿಸುತ್ತಿದ್ದೇವೆ. ಅಲ್ಲದೇ ಪ್ರತಿ ಗ್ರಾಮ ಪಂಚಾಯಿತಿಯು ವಿಶೇಷ ಸಾಮಾನ್ಯ ಸಭೆ ಮತ್ತು ಗ್ರಾಮ ಸಭೆಗಳ ಮೂಲಕ ನಿರ್ಣಯ ಕೈಗೊಂಡು ರಾಷ್ಟ್ರಪತಿ, ಚುನಾವಣಾ ಆಯೋಗ, ಪ್ರಧಾನ ಮಂತ್ರಿ, ರಾಜ್ಯಪಾಲರು ಹಾಗೂ ಮುಖ್ಯ ಮಂತ್ರಿಗಳಿಗೆ ಕಳುಹಿಸಿ ಕೊಡುವ ನಿರ್ಣಯವನ್ನು ತಾಲ್ಲೂಕು ಒಕ್ಕೂಟ ಕೈಗೊಂಡಿದೆ ಎಂದು ಒಕ್ಕೂಟದ ಸಂಚಾಲಕ ಹೆಚ್. ಬಿ. ಚಿದಂಬರ ಹೇಳಿದರು.
ಇನ್ನೂ ಈ ಹೋರಾಟಕ್ಕೆ ಸ್ತಬ್ಧಚಿತ್ರ ಇರುವ ರಥದ ಮಾದರಿಯ ವಾಹನ ಸಿದ್ದಪಡಿಸಲಾಗಿದ್ದು, ವಿಧಾನ ಸಭಾ ಕ್ಷೇತ್ರ ಹೋರಾಟ ನಡಿಗೆ ಗ್ರಾಮ ಪಂಚಾಯ್ತಿಗಳ ಕಡೆಗೆ ಅಭಿಯಾನ ವಿವಿಧ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ತೆರಳುತ್ತಿದೆ.
