ಶಿವಮೊಗ್ಗ, ಆಗಸ್ಟ್ 05, malenadutoday news ಸದ್ಯ ಶಿವಮೊಗ್ಗ ನಗರದಲ್ಲಿ ಪೊಲೀಸರು ಪುತ್ಪಾತ್ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸಲು ಪರಿಶ್ರಮ ಹಾಕುತ್ತಿದ್ದಾರೆ. ಅದೇ ರೀತಿ ಶಿವಪ್ಪ ನಾಯಕ ವೃತ್ತದ ಬಳಿ ಫುಟ್‌ಪಾತ್ ಅತಿಕ್ರಮಿಸಿಕೊಂಡಿದ್ದ ಹೂವಿನ ವ್ಯಾಪಾರಿಗಳನ್ನು ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದರು. ಅಲ್ಲದೆ ಇನ್ನಷ್ಟು ಮಂದಿಯನ್ನು ಪುಟ್ಪಾತ್ನಿಂದ ತೆರವುಗೊಳಿಸಲು ಸೂಚನೆ ನೀಡಿದ್ದರು. ಈ ನಡುವೆ ಪೊಲೀಸರ ಕಾರ್ಯಾಚರಣೆಗೆ ಶಾಸಕ ಎಸ್ಎನ್ ಚನ್ನಬಸಪ್ಪ ದಿಢೀರ್ ತಡೆಯೊಡ್ಡಿದ್ದಾರೆ.
ಈ ಬಗ್ಗೆ ವ್ಯಾಪಾರಿಗಳು ಮತ್ತು ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮಂಗಳವಾರ ಹೂವಿನ ಮಾರುಕಟ್ಟೆಗೆ ಭೇಟಿ ನೀಡಿದರು. ಶ್ರಾವಣ ಮಾಸದ ಸಂದರ್ಭದಲ್ಲಿ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹೂವಿನ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರ
ಪಾಲಿಕೆ ವತಿಯಿಂದ ಹೂವಿನ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರವಾಗಿ ಮಳಿಗೆಗಳನ್ನು ಈಗಾಗಲೇ ನಿರ್ಮಿಸಲಾಗಿದ್ದು, ಅದರ ಹಂಚಿಕೆ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗಲಿದೆ. ಮಳಿಗೆಗಳ ಹಂಚಿಕೆಯಾಗುವವರೆಗೂ ಯಾವುದೇ ತೆರವು ಕಾರ್ಯಾಚರಣೆ ಮಾಡದೆ, ತಾತ್ಕಾಲಿಕವಾಗಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
MLA stops Shivamogga footpath clearing