Minister Madhu Bangarappa ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ‘ಪೋಸ್ಟ್‌ಮ್ಯಾನ್’ ಎಂದು ಜರಿದಿರುವುದು ಕಾಂಗ್ರೆಸ್ ಪಕ್ಷದ ‘ಗೂಂಡಾ ಸಂಸ್ಕೃತಿಯ ಪ್ರತೀಕ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಕೆ. ಜಗದೀಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ರಾಘವೇಂದ್ರ ಅವರ ಕೊಡುಗೆಯನ್ನು ಸಹಿಸಿಕೊಳ್ಳಲಾಗದೆ ಮಧು ಬಂಗಾರಪ್ಪ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
Minister Madhu Bangarappa ಸಂಸದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಜಗದೀಶ್ ಬಣ್ಣಿಸಿದ್ದಾರೆ. ವಿಮಾನ ನಿಲ್ದಾಣ, ರಿಂಗ್ ರಸ್ತೆಗಳು, ಮೇಲ್ಸೇತುವೆಗಳು, ಸಿಗಂದೂರು ಚೌಡೇಶ್ವರಿ ಸೇತುವೆ, ರೈಲ್ವೆ ಅಭಿವೃದ್ಧಿ ಮತ್ತು ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕುರಿತು ಕೇಂದ್ರ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅವರು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ. ಇಂತಹ ಜನಪರ ಕಾರ್ಯಗಳನ್ನು ಕಂಡು ಸಚಿವ ಮಧು ಬಂಗಾರಪ್ಪನವರಿಗೆ ಅಸಹನೆ ಉಂಟಾಗಿದೆ. ಹೀಗಾಗಿಯೇ ಅವರು ಯಾವುದೇ ಕಾರಣವಿಲ್ಲದೆ ಹೇಳಿಕೆಗಳನ್ನು ನೀಡುವ ಮೂಲಕ ಜಿಲ್ಲೆಯಲ್ಲಿ ತಾವೂ ಇದ್ದೇವೆ ಎಂದು ತೋರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಜಗದೀಶ್ ಟೀಕಿಸಿದರು.
ಸಿಗಂದೂರು ಚೌಡೇಶ್ವರಿ ಸೇತುವೆ ಉದ್ಘಾಟನೆ ಕುರಿತು ಮಾತನಾಡಿದ ಜಗದೀಶ್, ಕೇಂದ್ರ ಭೂಸಾರಿಗೆ ಇಲಾಖೆಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮೊದಲೇ ಮಾಹಿತಿ ನೀಡಿದ್ದರೂ, ರಾಜಕೀಯ ಕಾರಣಗಳಿಗಾಗಿ ಉದ್ಘಾಟನೆಗೆ ಹಾಜರಾಗದಿರುವುದು ಸಚಿವರ ಗಟ್ಟಿತ್ವವನ್ನು ತೋರಿಸುತ್ತದೆ. ಇದರ ಹಿಂದೆ ಸಚಿವ ಮಧು ಬಂಗಾರಪ್ಪನವರ ಕೀಳು ರಾಜಕೀಯ ವರ್ತನೆ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದರು

Minister Madhu Bangarappa ವ್ಯಾಪಾರಸ್ಥರಿಗೆ ನೀಡಿರುವ ನೋಟಿಸ್ ಹಿಂಪಡೆಯದಿದ್ದರೆ ಬಿಜೆಪಿ ಹೋರಾಟ
ರಾಜ್ಯ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಣ್ಣಪುಟ್ಟ ಕ್ಯಾಂಟೀನ್‌ಗಳು, ಗೂಡಂಗಡಿಗಳು ಮತ್ತು ತರಕಾರಿ ಅಂಗಡಿಗಳಿಗೂ ಜಿಎಸ್‌ಟಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡಿದೆ ಎಂದು ಜಗದೀಶ್ ಆಕ್ಷೇಪ ವ್ಯಕ್ತಪಡಿಸಿದರು. ಇದು ಕೇಂದ್ರ ಸರ್ಕಾರದ ನಿರ್ಧಾರವಲ್ಲ, ಬದಲಿಗೆ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಆದರೆ, ರಾಜ್ಯ ಸರ್ಕಾರವು ಜನರನ್ನು ದಾರಿ ತಪ್ಪಿಸಲು ಕೇಂದ್ರದ ಮೇಲೆ ಗೂಬೆ ಕೂರಿಸಲು ಹೊರಟಿದೆ ಎಂದು ಜಗದೀಶ್ ಖಂಡಿಸಿದರು. ಕೂಡಲೇ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಕಳಿಸಿರುವ ನೋಟಿಸ್‌ಗಳನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ, ಬಿಜೆಪಿ ಪಕ್ಷದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಲ್.ಕೆ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
