malnad news today ಜುಲೈ 02 : ಭತ್ತ ನಟ್ಟಿಯ ನಾಟಿ ಕಥೆ

prathapa thirthahalli
Prathapa thirthahalli - content producer

malnad news today : ಭತ್ತ ನಟ್ಟಿಯ ನಾಟಿ ಕಥೆ

ಓಯ್ ಏಂತದ್ರಿ ಜೂನ್ ಕಳಿತು,  ಏನ್ ಗದ್ದೆಗೆ ಬೀಜ ಹಾಕೋ ಅಂದಾಜ್ ಇಲ್ಲೇನ್ರಿ. ಉಂಟು ಮರಽ ಎಂಥ ಮಾಡೋದು ಒಂದು ಬದಿ ಮಳೆ.. ಮಳೆ ಹಿಡ್ಡಿದ್ದು ಬಿಡೋದೇ ಇಲ್ಲ ಅಂಥದೆ. ಹಿಂಗಾದ್ರೆ ಬೀಜ ಹಾಕಿದ್ದು ಪೂರ  ತೇಲ್ಕೊಂಡು ಹೋಗ್ತಾವಲ್ರಿ ಎಂಥ ಮಾಡೋದು.  ಇದ್ ನಮ್ ಮಲ್ನಾಡಲ್ಲಿ  ರೈತ್ರು ಅವ್ರರರೇ ಮಾತಾಡ್ಕೊಳೊ ಮಾತು. ಒಂದ್ಕಡೆ ನಟ್ಟಿ  ಮಾಡಕ್ಕೆ ಬೀಜ ಹಾಕ್ಬೇಕು. ಕೆಲ್ಸಕ್ಕೆ ಜನ ಸಿಗಲ್ಲ. ಅದ್ರ ಮಧ್ಯ ಜಾನುವಾರು ಮತ್ತೆ ಹಕ್ಕಿಗಳ ಉಪದ್ರ, ನಟ್ಟಿ  ಮಾಡ್ತಾ ಒಂದೆರ್ಡ್ ಕಷ್ಟ ಅಲ್ಲ ಮಾರಽ 

malnad news today  ಸತ್ಯ ಹೇಳ್ಬೇಕಂದ್ರೆ ಈ ಸರ್ತಿ ಮಲ್ನಾಡಲ್ಲಿ ಮಳೆ ಜಾಸ್ತಿನೆ ಆಗ್ತಾದೆ.  ಹಿಂಗ್​ ಮಳೆ ಸುರಿದೆನೆಯಾ ಯಾವ್ದೋ ಕಾಲ ಆಗಿತ್ತು ನೋಡಿ. ಜೂನ್ ತುಂಬೋದ್ರು ಮೊದ್ಲೇ ಡ್ಯಾಮೆಲ್ಲಾ ಭರ್ತಿ ಆಗ್ಯವೇ. ಹೊಳೆ ಬದಿ ಹೋಗ್ಬ್ಯಾಡಿ ಅಂಥ ಅಧಿಕಾರಿಗಳು ಬೇರೆ ಹೇಳ್ಯಾರೆ.  ಇದ್ರು ಮದ್ಯ  ಈ ಮಳೆ ರೈತರಿಗೆ ಗದ್ದೆಗೆ ಬೀಜ ಹಾಕಕ್ಕೆ ಬಿಡ್ತಿಲ್ಲ. ಒಂದು ನಮೂನಿ  ಜಪ್ತಾ ಇದೆ ನೋಡಿ. ಹಾಗೂ ಹೀಗೂ ಬಿಡಕಾಗ್ತದ ಅಂತಾ ಕಾರ್ ಮಳೆಯಲ್ಲಿ ಬೀಜ  ಹಾಕಣ ಅಂತೇಳಿ ಏನೂ ಮಾಡಿ ಗದ್ದೆ ಹೂಡೋ ಟಿಲ್ಲರ್ ಅವ್ನಿಗೆ ದಮ್ಮಯ್ಯ ಹಾಕಿ ಟಿಲ್ಲರ್ ಕರ್ಸುದ್ರೆ, ಟಿಲ್ಲರ್ ಡ್ರೈವರ್ರು  ಅಣ ಗದ್ದೆ ಕಂಪ ಮಾರ್ರೆ (ಹೆಚ್ಚು ಹುಗಿಯುವ ಪ್ರದೇಶ)  ಹೂಡಕ್ಕೆ ಆಗಲ್ಲ ಅಂಥ ಹೇಳೋದೇನ್ರಿ. ಎಂಥಾ ಸಾಯಾದೋ ಏನೋ, ಅಂದ್ಕೊಂಡು ಹೂಟಿ ಮಾಡಿ ಬೀಜ ಹಾಕಿದ್ಮೇಲೆ ಶುರು, ದೇವರ ಇನ್ನೊಂದು ಆಟ 

- Advertisement -

malnad news today : ಜಾನುವಾರು ಹಾಗು ಹಕ್ಕಿಗಳ ಉಪಟಳ

ಯಾವತ್ ಗದ್ದೆಗೆ ಬೀಜ ಬಿಳ್ತದೋ ಅವತ್ತಿಂದ್ಲೇ ನೋಡಿ ಈ ಹಕ್ಕಿಗಳ ಉಪದ್ರ ಶುರು ಆಗ್ತದೆ. ಯಬ್ಬಾ ಈ ಹಕ್ಕಿಗಳ್​ ಕಥೆ ಎಂಥಾ.. ಅವೆಲ್ಲಾ ಎಲ್ಲಿ ಮಾಯ್ಕ್ ಆಗಿರ್ತವೋ, ಎಲ್ಲಿರ್ತವೋ ಏನೋ, ಬಾಕಿ ಟೈಂಲ್ಲಿ  ಒಂದು ಫಟೋ ತೆಗಳಣ ಅಂದ್ರೂ ಕಾಣಲ್ಲ. ಒಂದ್ ಗಿಳಿ,  ಗೀಜಗ (ಇನ್ನೊಂದಿಷ್ಟು ಹಕ್ಕಿ ಹೆಸರು ಬರಿ), ಎಂತೆಂಥದ್ದೋ ಇವೆ. ಹೆಸ್ರೆ  ಬಾಯಿಗೆ ಬರಲ್ಲ. ಆದ್ರೆ ಅಗಿ ಗದ್ದೆ ಕಣ್ಣಿಗ್​ ಬೀಳಂಗಿಲ್ಲ. ಪರುರ್ಸೋತ್​ನಲ್ಲಿ ಇದ್ದವೆಲ್ಲಾ ಯುದ್ಧಕ್ಕೆ ಬಂದಂಗೆ ಬರುತ್ತವೆ. 

ಈ ಹಪ್ಪು ಹಕ್ಕಿಗಳು ಬರೋದು ಬರ್ತವೆ,  ಬಂದ್ರೆ ಸುಮ್ನೆ ಹೋಗ್ತಾವಂಥಾ ಮಾಡಿರಾ. ಮಂತೆಂತಿಲ್ಲ. ಗದ್ದೇಲಿ ಬೀಜ ಹಾಕಿದ್ದನ್ನೆಲ್ಲ ತಿಂತವೆ. ಅಲ್ಲದೆ ಕಾಲಲ್ಲಿ  ಕೆದ್ರಿ  ಕೆದ್ರಿ  ಬಿತ್ತಿದ ಭತ್ತಾ ಪೂರ ಮಣ್ಣಪಾಲ್ ಮಾಡ್ತವೆ. ಎಲ್ಲಿ ಪಿಶಾಚಿಗಳೋ ಏನೋ, ಸಂಬಂಧಿಕರ ಮನಿ ಊಟಕ್ಕೆ ಬಂದಾಗೆ ಬಂದು ತಿಂದ್ಕೊಂಡು ಉಡ್ಕೊಂಡು ಉದರಿಸ್ಕೊಂಡು ಹೋಗ್ತಾವೆ. ಇನ್ನ  ಈ ಉಪದ್ರ ತಪ್ಪಸಣ ಅಂತೇಳಿ  ಬೆಲ್ಚಪ್ಪನ್ನ ( ದೃಷ್ಟಿ ಬೊಂಬೆಯನ್ನು) ಹಾಕಿದ್ರೆ ಅವ್ವು ಬೆಲ್ಚಪ್ಪ ನ  ಮಂಡೆ ಮೇಲೆ ಕೂಕಂಡ್​ ಹೇತ್ ಹೋಗಿರ್ತವೆ.ಹಂಗಾಯ್​, ಬಿತ್ತಿದ ಬೀಜ ಮೊಳಕೆ ಒಡೆದು ಹಸ್ರು ಆಗೋತಂಕ ಒಬ್ಬ ಗದ್ದೆ ಕಾಯಕೆ ಜನ ಮಾಡ್ಬೇಕ್​, ಇಲ್ಲಾ ನಾವೇ ದೊಡ್ಡಜನ ಆಗಿ ಕೂಗ್ ಹಾಕ್ತಾ ಬೆಳಗಿಂದ ಸಾಯಂಕಾಲದ ತನ್ಕ ಕಾಯ್ತಿರಬೇಕು..ಆದರೂ, ಅಗಿ ಕಾಯದ್ರಲ್ಲೂ ಸಣ್ಣ ಖುಷಿ ಇರತ್ ಅಂದೇಳಿ..ಸುಳ್ಳು ಹೇಳುಕಾಗಾ…

malnad news today ಹಕ್ಕಿಗಳನ್ನು ಬೆದರಿಸಲು ಮಾಡಿರುವ ದೃಷ್ಟಿ ಬೊಂಬೆ
malnad news today ಹಕ್ಕಿಗಳನ್ನು ಬೆದರಿಸಲು ಮಾಡಿರುವ ದೃಷ್ಟಿ ಬೊಂಬೆ

ಇರಲಿ, ಕಥಿ ಮುಂದುವರಿಸ್ತೆ, ಎಲ್ಲಾ ಆಯ್ತು ಬೀಜ ಮೊಳಕೆ ಒಡೆದು ಚಿಗುರ್ತಾ ಬಂತು ಇನ್ನೇನ್ ತಲೆ ಬಿಸಿ ಇಲ್ಲ ಅನ್ಕೊಂಡ್ರೆ, ಈ ಗಂಟಿ ಕಾಟ ಶುರು, ಹಸ್ರು ಹಸ್ರು  ಕಾಣಂಗಿಲ್ಲ ಹಕ್ಕಿಗಳು ಆಕಡೆ ಹೋದ್ವು.  ದನಕರಗಳ ಲೂಟಿ ಶುರು ಮಾಡದ್ವು. ಐಬಿಕ್ಸ್​ ಹಾಕಿದ್ರೂ, ಅದನ್ನೆ ಮುರ್ಕೊಂಡು,  ಹಾರ್ಕೊಂಡು, ದಾಟ್ಕೊಂಡು ನುಗ್ತವೆ. ಅದ್ರಲ್ಲು  ಮಲ್ನಾಡ್ ಗಿಡ್ಡಗಳಿಗೆ ಬೇಲಿ ಹಾರಿ ಹೈ ಜಂಪ್​ ಮಾಡದ್ರಲ್ಲಿ ಮೆಡ್ಲು ಗೆಲ್ತವೆ ಕಣ್ರಿ. ಕುತ್ತಿಗೆ ಕುಂಟೆ ಕಟ್ರಿದ್ರೂ , ಕುಳಾಟಿ ಕರಗಳದ್ದು ಜಂಪ್​ ಏನ್​ ಕಮ್ಮಿಯಾಗಲ್ಲ. ಇಷ್ಟಕ್ಕೆ ಮುಗೀತಾ?ಈ ಉಪದ್ರಗಳಿಗೆಲ್ಲಾ ದೇವರ ಹರಕೆ ಕಟ್ಟಿ, ಹಾಗೂ ಹೀಗೂ ಸಸಿ ನಾಟಿಗೆ ರೆಡಿಯಾಯ್ತು ಅಂದ್ಕೊಳಿ.. ಮತ್ತೊಂದು ತಲೆ ಬಿಸಿ ಸುರುವಾಗ್ತದೆ ನೋಡಿ .

malnad news today : ನಮ್ಗೊಂದಿನ ಮುಯ್ಯಾಳ್ ಬರ್ರಿ 

ಇನ್ನೇನು ಸಸಿ ನೆಡಬೇಕು ಅನ್ಕೊಂಡ್ರೆ ಕೆಲ್ಸಕ್ಕೆ ಜನ ಸಿಗಲ್ಲ ಕಂಡ್ರಿ. ಹಿಂದೆಲ್ಲಾ ಮಯ್ಯಾಳ್​ ಸಿಗ್ತಿದ್ರು. ನಮ್ಮನಿಗೆ ಕೆಲಸಕ್ಕೆ ಬಂದ್ರೆ, ಅವರ ಮನಿ ಕೆಲಸಕ್ಕೆ ನಾವ್ ಹೋದ್ರಾಕ್ತಿತ್ತು. ಈಗ ಇದೆಲ್ಲಾ ಇದೆ ಅಂತಾ ಹೇಳುಕಾಗಲ್ಲ. ಧರ್ಮಸ್ಥಳದ ಸಂಘದಲ್ಲಿಯು ಇಲ್ಲಾ ಅಂತಾ ಕಾಣುತ್ತೆ.  ಹಂಗಾಗಿ, ಜನ ನಾಟಿಗೆ ಜನ ಹುಡ್ಕಲೇ ಬೇಕು, ಎಂಟು ಹೆಣ್ಣಾಳ್, ಎರಡು ಗಂಡ್ ಆಳ್​ ಇದ್ರೆ ಕತ್ತಲಾಗುವುದರೊಳಗೆ ಮುಕ್ಕಾಲು ಎಕೆರೆ ಗದ್ದೆ ನಾಟಿ ಮುಗಿಸಬಹುದು. ಆದರೆ ಆಳೇ ಕಾಣುವುದಿಲ್ಲ. ಅದರಲ್ಲಿ ಕೆಲ ಸೀನಿಯರ್​  ಹೆಂಗಸರಿಗೆ ನಾಕ್ ದಿನ ಬಂದು ನಟ್ಟಿ ಮುಗಿಸ್ರಮ್ಮ ಅಂದರೆ,  ವಾರ ತಡ್ಕಳಿ ಬೇರೆ ಕಡೆ ಹೆಸ್ರು ಕೊಟ್ಟಿವಿ ಆಮೇಲೆ ಬಂದು ಮಾಡ್ಕೋಡ್ತೀವಿ ಅಂತಾರೆ. ಅದು ವಾರ ಹೋಗಿ 15 ದಿನ ಆದ್ರೂ ಆಯ್ತು.ಸೀಸನ್​ನಲ್ಲಿ ಜಾಸ್ತಿ ವಿಚಾರಿಸಂಗೂ ಇಲ್ಲ ನೋಡಿ. ‘ಹಂಗೂ ಹಿಂಗೂ ನಟ್ಟಿಗೆ ಜನ ಬಂದ್ರೆ ಇತ್ಲಾಗೆ ಟಿಲ್ಲರ್ ಹೊಡಿಯೋರನ್ನು ರೆಡಿ ಮಾಡೋದು ಮತ್ತೊಂದು ಹರ ಸಾಹಸ ಆಗ್ತದೆ. ಇವ್ರೀಗ್ ಟೈಮ್ ಇದ್ದಾಗ ಅವ್ರಿಗೆ ಟೈಮ್ ಇರಲ್ಲ. ಅವ್ರಿಗೆ ಟೈಮ್ ಇದ್ದಾಗ ಇವ್ರಿಗೆ ಟೈಮ್ ಇರಲ್ಲ.  ಲಾಸ್ಟಿಗೆ ಹೆಂಗೂ ನಟ್ಟಿ ಮುಗಿತದೆ. ರೈತರು ಸತ್ ಹೋಗ್ಲಿ ಮಾರಾಯ ಈ ಗದ್ದೆನು ಬೇಡ ಎಂಥ ಬೇಡ. ಮುಂದಿನ ಸತಿ ಯಿಂದ ಗದ್ದೇನೆ ಮಾಡಲ್ಲ ಅಂತಾ ಹೊಟ್ಟೆಯಲ್ಲಿರುವ ಉಸಿರು ಎಲ್ಲಾ ಸೇರಿ ಒಂದೆ ಸಲ ಮೂಗಲ್ಲಿ ನಿಟ್ಟುಸಿರಾಗಿ ಬಿಡ್ತಾರೆ. ಇದು ಕಥೆ

malnad news today ಗದ್ದೆಯಲ್ಲಿ ನಟ್ಟಿ ಮಾಡುತ್ತಿರುವ ಮಹಿಳೆಯರು
malnad news today ಗದ್ದೆಯಲ್ಲಿ ನಟ್ಟಿ ಮಾಡುತ್ತಿರುವ ಮಹಿಳೆಯರು

ಆಗೆಲ್ಲ ಈ ಪಜೀತಿ ಕಡಿಮೆನೆಯಾ! ಕೂಡ್ ಕುಟುಂಬ, ಮನೆ ತುಂಬಾ ಜನ, ಅವರವರ ಕೆಲ್ಸ ಮಾತು ಕೊಸರಾಗುವ ಮೊದ್ಲೇ ಮುಗಿತಿತ್ತು. ಈಗ ಕಾಲ ಬದಲಾಗದೆ,  ದೊಡ್ ಮಗ ಬೆಂಗ್ಲೂರಲ್ಲಿ ಸಣ್ ಮಗ ಮಂಗ್ಲೂರಲ್ಲಿ ಏನೋ ಓದಿ ಅವ್ರ ಕಾಲ್ ಮೇಲೆ ಅವರ್ ನಿಲ್ತಾರೆ. ಇತ್ತ ಅಪ್ಪಂಗೂ ಕೆಲ್ಸಾ ಮಾಡಕ್ಕೆ ವಯಸ್ಸ್​ ಬಿಡಲ್ಲ. ಹಾಗಾಗಿ ಗದ್ದೆ ಕೆಲಸ ಅದ್ಭುತ ಸಾಹಸದ ಕಾದಂಬರಿ ಥರ ಆಗ್ತಿದೆ ವರ್ಷ ವರ್ಷ..

ಈಗ ಏನೋ ಒಂದ್ ನೂರಲ್ಲಿ 30 ಭಾಗ ಗದ್ದೆ ಮಾಡ್ತಾ ಅದಾರೆ. ಅದೂ ಸಹ ಮನೆಮಟ್ಟಿಗೆ ಮಾಡೋರೇ ಹೆಚ್ಚು.  ರೇಟಿಲ್ಲ , ಕೆಲಸ ಜಾಸ್ತಿ, ಅದು ಇದು ನಡುವೆ, ಅಡಿಕೆ ಬೆಳೆಯ ಅಟ್ರ್ಯಾಕ್ಷನ್​ನಲ್ಲಿ ಊರಿನ  ಗದ್ದೆಗಳೆಲ್ಲಾ ಹೋಗಿ ಈಗ ತೋಟ ಆಗ್ತಾ ಇದಾವೆ. ಹಾಗಾಗಿ, ಈ ವರುಷದ ಭತ್ತ ನಾಟಿಯ ಮಾತುಕಥೆ ಮುಂದಿನ ವರುಷಕ್ಕಿರುತ್ತೋ ಇಲ್ವೋ!?

malnad news today ಓದುಗರೆ, ನಮ್ಮೂರ ಭಾಷೆಯಲ್ಲಿ ನಮ್ಮೂರ ಮಾತುಗಳನ್ನು ನಿಮ್ಮವರೆಗೂ ತಲುಪಿಸುವ ಪ್ರಯತ್ನದಲ್ಲಿ ಇದು ಒಂದು.. ಈ ಪ್ರಯತ್ನ ನಿಮಗೆ ಇಷ್ಟವಾದಲ್ಲಿ ನಿಮ್ಮ ಅಭಿಪ್ರಾಯ ಕಾಮೆಂಟ್ಸ್ ನಲ್ಲಿ ತಿಳಿಸಿ.

 

ಗಬಡಿ ಪ್ರತಾಪ್​

 

Share This Article