24 ದಿನ ಕುಂತಿಯನ್ನು ಕಾಡಿನಲ್ಲಿಟ್ಟುಕೊಂಡು ಮನೆಗೆ ಕಳುಹಿಸಿಕೊಟ್ಟ ಭೂಪ ಯಾರು ? | Malenadu today story / SHIVAMOGGA
ಆತ ಯಾರ ಅಂಕೆಗೂ ರಾಕ್ಷಸ ದೈತ್ಯ ಆಸಾಮಿ. ಅವನ ಮುಂದೆ ನಿಲ್ಲುವುದು ಸಹ ಕಷ್ಟ. ಅಂತವನು ಒಂದಿನ ಇದ್ದಕ್ಕಿದ್ದ ಹಾಗೆ, ಕೆರಳಿ ನಿಂತುಬಿಟ್ಟಿದ್ದ, ತನ್ನ ವ್ಯಾಪ್ತಿಯಲ್ಲಿ ಬಂದಿದ್ದ ದೈತ್ಯ ಸುಂದರಿ ಕುಂತಿಯನ್ನು ತನ್ನೊಡನೆ ಕರೆದೊಯ್ಯದಿದ್ದ.
ಬಲವಂತವಾಗಿ ಕದ್ದೊಯ್ದೋನೋ? ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶನ ಮಾಡಿ ಮೋಹದ ಬಲೆ ಕರೆದೊಯ್ದನೋ ಕಂಡವರು ಇಲ್ಲ.
ಆದರೆ ಹಾಗೆ ಕರೆದುಕೊಂಡು ಹೋದ ಆತ, ರಾವಣ ಸೀತೆಯನ್ನು ಅಶೋಕವನದಲ್ಲಿಟ್ಟಹಾಗೆ, ಬೆಟ್ಟದ ಕಾಡಿನ ತನ್ನ ಬಿಡಾರದಲ್ಲಿ ಕುಂತಿಯನ್ನು ಸುರಕ್ಷಿತವಾಗಿ ಇರಿಸಿ, ಇತ್ತ ದೈತ್ಯ ಸುಂದರಿಯ ಮನೆಯವರು ಮನೆಯ ಸದಸ್ಯೆಗಾಗಿ ಕಾದು ಕುಳಿತರು.
1…2…3…4 ದಿನಗಳು ಕಳೆದವು. ಇನ್ನಾಗದು ಎಂದು ಮನೆಯವರು, ನೆರೆಹೊರೆಯವರು ಎಲ್ಲರು ಕುಂತಿಯನ್ನು ಕರೆತರಲು ಕಾಡಿಗೆ ತೆರಳಿದರು. ಆದರೆ, ಕಾಡಿನ ರಾಜ, ಬಂದವರ ಮೇಲೆಯೇ ಮುಗಿಬಿದ್ದು ಓಡಿಸ ತೊಡಗಿದ.
ಯಾವಾಗ ಕಾಡಿನ ರಾಜನನ್ನು ಸೋಲಿಸಲು ಆಗಲ್ಲವೆಂದು ತಿಳಿಯಿತೋ, ಆಕೆಯ ಮನೆಯ ಕಡೆಯವರು ಕಾಡಿಗೆ ಹೋಗುವುದನ್ನು ನಿಲ್ಲಿಸಿದರು. ಇತ್ತ ಕಾಡಿನ ರಾಜ ಬರೋಬ್ಬರಿ 24 ದಿನಗಳ ಕಾಲ, ಆಕೆಯನ್ನು ತನ್ನೊಂದಿಗೆ ಇರಿಸಿಕೊಂಡು, 25 ದಿನಕ್ಕೆ ಆಕೆಯನ್ನು ಪುನಃ ಮನೆಗೆ ಕಳುಹಿಸಿದ್ದಾನೆ.
24 ದಿನಗಳ ಕಾಡಿನ ವಾಸದ ಬಳಿಕ ಕುಂತಿ ಮರಳಿಗೆ ಗೂಡಿಗೆ ಬಂದಿದ್ದಾಳೆ. ಸಕ್ರೆಬೈಲ್ ಆನೆ ಬಿಡಾರಕ್ಕೆ ಬಂದಿದ್ದಾಳೆ. ಈಕೆಯ ಸ್ನೇಹಕ್ಕೆ ಕಾದಿದ್ದ ಸಹಪಾಠಿಗಳೆಲ್ಲಾ ಹೇಗಿದ್ದಿಯಾ ಅಂತಾ ಮಾತುಕತೆ ನಡೆಸುತ್ತಿದ್ಧಾರೆ.
ವೀಕ್ಷಕರೆ ಇಲ್ಲಿವರೆಗೂ ನಾವು ಹೇಳಿದ್ದು ಸಕ್ರೆಬೈಲ್ ಆನೆಬಿಡಾರದ ವಿಶಿಷ್ಟ ಆನೆ ಕುಂತಿಯ ಕಥೆಯನ್ನು. ಅನೆಗಳ ಬದುಕಿನ ವೈಶಿಷ್ಟತೆಯನ್ನು ಹೇಳುವ ಸಲುವಾಗಿ ಈ ರೀತಿಯಾಗಿ ವಿಶ್ಲೇಷಣೆ ಮಾಡಬೇಕಾಯ್ತು.
ಅಂದಹಾಗೆ ನಾವು ಇಲ್ಲಿ ಹೇಳಿದ ಕಾಡಿನ ರಾಜ ಬೇರೆಯಾರು ಅಲ್ಲ. ಆತ ಶೆಟ್ಟಿಹಳ್ಳಿ ಬೆಟ್ಟದ ಆನೆ. ಆತನಿಗೆ ಕಾಡಿನ ರಾಜ ಎನ್ನುವ ಬಿರುದೇ ಇದೆ. ಇದುವರೆಗೂ ಸಕ್ರೆಬೈಲ್ ಮೂರು ಆನೆಗಳನ್ನು ಕೊಂದಿರುವ ಅಪಕೀರ್ತಿಯು ಇದೆ. ಆದರೆ ಮನುಷ್ಯರಿಗೆ ಈ ಪುಣ್ಯಾತ್ಮ ತೊಂದರೆ ಕೊಟ್ಟ ಉದಾಹರಣೆಗಳು ಕಡಿಮೆ
ಅರಣ್ಯ ಇಲಾಖೆಯು ಸಹ ಕಾಡಾನೆ ಹಾಗೂ ನಾಡಾನೆಗಳ ನಡುವೆ ಕ್ರಾಸಿಂಗ್ ಆದರೆ, ನೈಸರ್ಗಿಕವಾಗಿಯು ಸಮಲೋತನ ಕಾಪಾಡಿಕೊಳ್ಳಬಹುದು ಎಂದು ಕಾಡಿನ ರಾಜನ ಇರುವಿಕೆ ಇದುವರೆಗೂ ಅಡ್ಡಿಯನ್ನು ಮಾಡಿಲ್ಲ.
ಹೀಗೆ ಸ್ವಚ್ಛಂಧವಾಗಿರುವ ಕಾಡಿನ ರಾಜ, ನಾಡಾನೆಗಳ ಸಂಪರ್ಕಕ್ಕೆ ಆಗಾಗ ಬರುತ್ತಲೇ ಇರುತ್ತಾನೆ. ಇನ್ನು ಕುಂತಿ ವಿಷಯಕ್ಕೆ ಬರುವುದಾದರೆ, ಕಾಡಿನ ರಾಜ ಕುಂತಿಯನ್ನು ಕರೆದೊಯ್ದು ಕಾಡಿನಲ್ಲಿ ಮೇಟಿಂಗ್ ನಡೆಸಿದ್ದಾನೆ.
ಸಾಮಾನ್ಯವಾಗಿ ಆನೆಗಳಲ್ಲಿ ಪೈಕಿ ಹೆಣ್ಣಾನೆಗಳನ್ನು ಸೆಳೆಯೋದಕ್ಕೆ ಗಂಡಾನೆಗಳು ಸಮಯ ತೆಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಹೆಣ್ಣಾನೆಗಳು ಗಂಡಾನೆಯನ್ನು ತಿರಸ್ಕರಿಸುವ ಸಾಧ್ಯತೆ ಇರುತ್ತದೆ. ಹಾಗಂತ ಗಂಡಾನೆಗಳು ಸಹ ಏನು ಕಡಿಮೆಯಿರುವುದಿಲ್ಲ.
ಹೆಣ್ಣಾನೆಯನ್ನು ಒಲಿಸಿಕೊಳ್ಳಲು ಕೈಲಾಗುವುದನ್ನೆಲ್ಲಾ ಮಾಡುತ್ತವೆ. ಎದುರು ಬಂದ ಆನೆಯ ವಿರುದ್ಧ ಯುದ್ಧವನ್ನೇ ಹೂಡುತ್ತವೆ. ಹೆಣ್ಣಾನೆಯ ಮೇಲೂ ಬಲಪ್ರಯೋಗ ಮಾಡುತ್ತವೆ. ಇದೆಲ್ಲದಕ್ಕಿಂತಲೂ ಮೊದಲು ಹೆಣ್ಣಾನೆಯನ್ನು ತನ್ನ ಮೂಲಕ ಆಕರ್ಷಿಸುವ ಕೆಲಸವನ್ನು ಮಾಡುತ್ತವೆ.
ಶೆಟ್ಟಿಹಳ್ಳಿಯ ಕಾಡಿನ ರಾಜ ಮಾಡಿದ್ದು ಸಹ ಈ ಕೆಲಸವನ್ನೆ. ಕುಂತಿಯನ್ನು ತನ್ನೊಂದಿಗೆ ಕರೆದೊಯ್ದು ತನ್ನ ವ್ಯಾಪ್ತಿಯಲ್ಲಿರಿಸಿಕೊಂಡು ಅದನ್ನು ಸೆಳೆಯಲು ತನ್ನೆಲ್ಲಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆ. 10 ದಿನಗಳ ಈ ಪ್ರೇಮದ ಆಟದ ಬಳಿಕ, ಮಿಲನ ನಡೆಸಿ 25 ನೇ ದಿನಕ್ಕೆ ಕುಂತಿಯನ್ನು ಬಿಡಾರಕ್ಕೆ ಕಳುಹಿಸಿಕೊಟ್ಟಿದ್ದಾನೆ.
ಇತ್ತ ಸಕ್ರೆಬೈಲ್ ಬಿಡಾರದಲ್ಲಿ ಕುಂತಿಯನ್ನು ಬರಮಾಡಿಕೊಂಡ ಅರಣ್ಯ ಸಿಬ್ಬಂದಿ, ಅದರ ಲಾಲನೆ ಪಾಲನೆ ಮುಂದುವರಿಸಿದ್ದಾರಷ್ಟೆ ಅಲ್ಲದೆ, ಕುಂತಿಯ ಆರೋಗ್ಯದ ಬಗ್ಗೆ ನಿಗಾವಹಿಸಿದ್ದಾರೆ.
ಬರಹ : ವನ್ಯಜೀವಿ
