Lightning Strike ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಕೆಲಸ ಮಾಡುತ್ತಿದ್ದಾಗಲೇ ಏಕಾಏಕಿ ಸಿಡಿಲು ಬಡಿದು ಎಲೆಕ್ಟ್ರಿಷಿಯನ್ ಒಬ್ಬರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಮೃತರನ್ನು ಕಳಸ ಪಟ್ಟಣದ ನಿವಾಸಿ, 42 ವರ್ಷ ವಯಸ್ಸಿನ ಮಹಮ್ಮದ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ಕಳೆದೊಂದು ವಾರದಿಂದ ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಮಂಗಳವಾರ ರಾತ್ರಿ ಕಳಸ ಪಟ್ಟಣದಲ್ಲಿ ಸಿಡಿಲು ಮಿಂಚಿನೊಂದಿಗೆ ಮಳೆ ಆರಂಭವಾಗಿತ್ತು. ಇದೇ ಸಮಯದಲ್ಲಿ ಮಹಮ್ಮದ್ ಇಸ್ಮಾಯಿಲ್ ಅವರು ವಿದ್ಯುತ್‌ಗೆ ಸಂಬಂಧಿಸಿದ ಕೆಲಸವೊಂದನ್ನು ನಿರ್ವಹಿಸುತ್ತಿದ್ದರು.
ಕೆಲಸದಲ್ಲಿ ನಿರತರಾಗಿದ್ದಾಗಲೇ ಸಿಡಿಲು ಬಡಿದ ಪರಿಣಾಮ ಮಹಮ್ಮದ್ ಇಸ್ಮಾಯಿಲ್ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಕ್ಕಪಕ್ಕದ ಸ್ಥಳೀಯರು ನೆರವಿಗೆ ಧಾವಿಸಿ, ಅಸ್ವಸ್ಥರಾಗಿದ್ದ ಇಸ್ಮಾಯಿಲ್ ಅವರನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

