Shivamogga | Feb 8, 2024 | Kuvempu University ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಹೊರಗುತ್ತಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಇಲ್ಲಿನ ನೌಕರರು ಸಂಬಳ ಪಡೆದಿಲ್ಲ. ಇತ್ತೀಚೆಗೆ ಇದೆ ಕಾರಣಕ್ಕೆ ಪ್ರತಿಭಟನೆ ಸಹ ನಡೆಸಿದ್ದರು. ಆ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆಯು ಈಡೇರಿಲ್ಲ. ಹೀಗಾಗಿ ಹೊರಗುತ್ತಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಆರಂಭಿಸಿದ್ಧಾರೆ.
ಶಂಕರಘಟ್ಟ ದಲ್ಲಿರುವ ಕುವೆಂಪು ವಿವಿ ಆವರಣದಲ್ಲಿಯೇ ಪ್ರತಿಭಟನೆ ನಡೆಸಿ ದಿಕ್ಕಾರ ಕೂಗಿದ ನೌಕರರು ತಮ್ಮ ಸಂಬಳ ಸಿಗುವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಕಳೆದ ನವೆಂಬರ್ ನಿಂದ ಇಲ್ಲಿವರೆಗೂ ಸಂಬಳ ನೀಡಿಲ್ಲ ಎಂದು ನೌಕರರು ಆರೋಪಿಸಿದ್ದಾರೆ. ಅತಿಥಿ ಉಪನ್ಯಾಸಕರು ಸೇರಿದಂತೆ ಹೊರಗುತ್ತಿಗೆಯ ಎಲ್ಲಾ ನೌಕರರಿಗೂ ಇದುವರೆಗೂ ಸಂಬಳವಾಗಿಲ್ಲ. ಈ ಸಂಬಂಧ ಆಡಳಿತ ಮಂಡಳಿ ಸಬೂಬು ಹೇಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಸಂಬಳವಿಲ್ಲದೆ ಒಂದೊಂದು ತಿಂಗಳು ಕಳೆಯುವುದು ದುಸ್ತರವಾಗಿದ್ದು, ಇರುವ ಕೆಲಸವನ್ನು ಬಿಟ್ಟು ಬೇರೆ ಕೆಲಸವನ್ನು ನೋಡಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಕೆಲಸದ ವಿಷಯದಲ್ಲಿ ದಿನವಿಡಿ ದುಡಿಸಿಕೊಳ್ಳುತ್ತಿರುವ ಆಡಳಿತ ಮಂಡಳಿ ವೇತನದ ವಿಚಾರವಾಗಿ ತಾರಮ್ಮಯ ಎನ್ನುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಇಷ್ಟೆ ಅಲ್ಲದೆ ವೇತನವಿಲ್ಲದ ಮನೆ ನಡೆಸುವುದು ಬಹಳ ಕಷ್ಟವಾಗಿದ್ದು ತಮಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
