Kuvempu University : ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಪರೀಕ್ಷೆಗಳ ಡಿಜಿಟಲ್ ಮೌಲ್ಯಮಾಪನವು ಸಂಪೂರ್ಣ ಗೊಂದಲಮಯವಾಗಿದ್ದು, ಪ್ರಕಟಗೊಂಡ ಫಲಿತಾಂಶದಿಂದ ಸಾವಿರಾರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. (NSUI) ಘಟಕವು ಇಂದು ಶಿವಮೊಗ್ಗ ಎಂ.ಆರ್.ಎಸ್. ವೃತ್ತದಲ್ಲಿರುವ ವಿಶ್ವವಿದ್ಯಾಲಯದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.

ವಿಶ್ವವಿದ್ಯಾಲಯವು ಮ್ಯಾನುಯಲ್ ಮೌಲ್ಯಮಾಪನದಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ತಡೆಯುವ ನೆಪವೊಡ್ಡಿ ಡಿಜಿಟಲ್ ಮೌಲ್ಯಮಾಪನ ಪದ್ಧತಿಯನ್ನು ಜಾರಿಗೆ ತಂದಿದೆ. ಆದರೆ, ಈ ಹೊಸ ಪದ್ಧತಿಗೆ ಬೇಕಾದ ಪೂರ್ವಸಿದ್ಧತೆಯನ್ನು ವಿವಿ ಆಡಳಿತವು ನಡೆಸದೇ ಇರುವುದರಿಂದ ಫಲಿತಾಂಶಗಳು ಬೇಕಾಬಿಟ್ಟಿಯಾಗಿ ಬಂದಿವೆ. ಇದರಿಂದ ಪ್ರತಿ ಕಾಲೇಜುಗಳಲ್ಲಿ ಶೇಕಡಾ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದರು. ಮರುಮೌಲ್ಯಮಾಪನಕ್ಕೆ ಒಳಪಡಿಸಿದಾಗ ಕೇವಲ 0, 5, 6 ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಗಳು ಕೂಡ ಉತ್ತೀರ್ಣರಾಗುತ್ತಿರುವುದು ವಿವಿಯ ಪರೀಕ್ಷಾಂಗ ವಿಭಾಗದ ಅವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kuvempu University ಈ ಗೊಂದಲಗಳ ಕುರಿತು ಎನ್.ಎಸ್.ಯು.ಐ. ನಿಯೋಗವು ದಿನಾಂಕ ನವಂಬರ್ 04 ರಂದೇ ಕುಲಪತಿಗಳು ಹಾಗೂ ಪರೀಕ್ಷಾಂಗ ಕುಲಸಚಿವರಿಗೆ ಮನವಿಯನ್ನು ಸಲ್ಲಿಸಿತ್ತು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ನವೆಂಬರ್ 14, 2025ರೊಳಗೆ ಫಲಿತಾಂಶವನ್ನು ಸರಿಪಡಿಸುವ ಭರವಸೆಯನ್ನು ನೀಡಿದ್ದರು. ಆದರೆ, ನೀಡಿದ ಭರವಸೆ ಈಡೇರದೇ ಯಥಾಸ್ಥಿತಿ ಮುಂದುವರಿದಿರುವ ಕುರಿತು ಜಿಲ್ಲಾ ಎನ್.ಎಸ್.ಯು.ಐ. ಘಟಕವು ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಪರೀಕ್ಷಾ ಶುಲ್ಕ ಮತ್ತು ಮರುಮೌಲ್ಯಮಾಪನ ಶುಲ್ಕ ಎಂದು ವಿದ್ಯಾರ್ಥಿಗಳಿಂದ ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಿರುವ ವಿಶ್ವವಿದ್ಯಾಲಯವು, ಇದೀಗ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ. ಕೂಡಲೇ ವಿವಿಯ ಕುಲಪತಿಗಳು ಈ ವಿಷಯದ ಕುರಿತು ಗಮನ ಹರಿಸಬೇಕು. ಡಿಜಿಟಲ್ ಮೌಲ್ಯಮಾಪನದಲ್ಲಿ ಆಗಿರುವ ಎಲ್ಲಾ ಗೊಂದಲಗಳನ್ನು ಪರಿಹರಿಸಬೇಕು ಮತ್ತು ಸೂಕ್ತ ಪೂರ್ವಸಿದ್ಧತೆಯಿಲ್ಲದೇ ಈ ಮೌಲ್ಯಮಾಪನ ನಡೆಸಲು ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಂಘಟನೆಯು ಒತ್ತಾಯಿಸಿದೆ. ಅಲ್ಲದೇ, ವಿಶ್ವವಿದ್ಯಾಲಯವು ಯಾವುದೇ ಶುಲ್ಕವನ್ನು ಪಡೆಯದೇ ಎಲ್ಲಾ ಗೊಂದಲಮಯ ಫಲಿತಾಂಶಗಳನ್ನು ಹೊಂದಿರುವ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಬೇಕು ಎಂದು ಆಗ್ರಹಿಸಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಎನ್.ಎಸ್.ಯು.ಐ. ವತಿಯಿಂದ ಮುಂದಿನ ದಿನಗಳಲ್ಲಿ ವಿವಿ ಬಂದ್ ಸೇರಿದಂತೆ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಈ ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯ, ಕಾರ್ಯಧ್ಯಕ್ಷ ರವಿಕಟಿಕೆರೆ ಸೇರಿದಂತೆ ಚಂದ್ರಾಜಿ ರಾವ್, ಆದಿತ್ಯ, ಸುಭಾನ್, ಫರಾಜ್ ಅಂಜನ್, ಲೋಹಿತ್, ವರುಣ್, ಫರಜ್, ಸಿಂಚನ, ದೀಕ್ಷಾ, ಸ್ಪೂರ್ತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
