Kote marikamba temple : ಶಿವಮೊಗ್ಗ: ನಗರದೇವತೆ ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ 10 ದಿನಗಳ ಕಾಲ ಶರನ್ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿದಿನವೂ ದೇವಿಗೆ ವಿಭಿನ್ನ ಅಲಂಕಾರಗಳನ್ನು ಮಾಡಲಾಗುವುದು. ಸೆಪ್ಟೆಂಬರ್ 22ರಂದು ಶೈಲಪುತ್ರಿ ಅಲಂಕಾರದೊಂದಿಗೆ ಉತ್ಸವ ಪ್ರಾರಂಭವಾಗಲಿದೆ.
ಸೆಪ್ಟೆಂಬರ್ 23ರಂದು ಬ್ರಹ್ಮಚಾರಿಣಿ, 24ರಂದು ಚಂದ್ರಘಂಟಾ, 25ರಂದು ಕೂಷ್ಮಾಂಡ, 26ರಂದು ಸ್ಕಂದಮಾತಾ, 27ರಂದು ಕಾತ್ಯಾಯಿನಿ, 28ರಂದು ಅನ್ನಪೂರ್ಣೇಶ್ವರಿ ಮತ್ತು 29ರಂದು ಸರಸ್ವತಿ ಅಲಂಕಾರದಲ್ಲಿ ದೇವಿಯು ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಸೆಪ್ಟೆಂಬರ್ 30ರಂದು ದುರ್ಗಾದೇವಿ ಅಲಂಕಾರ, ಹಾಗೂ ಅಕ್ಟೋಬರ್ 1 ಮತ್ತು 2ರಂದು ಮಹಿಷಾಸುರಮರ್ದಿನಿ ಅಲಂಕಾರದೊಂದಿಗೆ ಉತ್ಸವವು ಸಂಪನ್ನಗೊಳ್ಳಲಿದೆ. ಈ ಉತ್ಸವದ ಅವಧಿಯಲ್ಲಿ ಪ್ರತಿದಿನ ದೇವಿಗೆ ಅಭಿಷೇಕ, ಅರ್ಚನೆ, ಪಾರಾಯಣ, ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ಇರುತ್ತದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ತಿಳಿಸಿದ್ದಾರೆ.
ಸೆಪ್ಟೆಂಬರ್ 30ರಂದು ದುರ್ಗಾಷ್ಟಮಿ ಪ್ರಯುಕ್ತ ಸಾಮೂಹಿಕ ಚಂಡಿಕಾ ಹೋಮವನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ಬಯಸುವ ಭಕ್ತರು 101 ರೂಪಾಯಿ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದರ ಜೊತೆಗೆ, ಒಂದು ದಿನದ ಸರ್ವ ಸೇವೆಗೆ 1201 ರೂಪಾಯಿ, ಹೂವಿನ ಅಲಂಕಾರ ಸೇವೆಗೆ 1001 ರೂಪಾಯಿ, ಮತ್ತು ಪ್ರಸಾದ ಸೇವೆಗೆ 3000 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಈ ಎಲ್ಲಾ ಸೇವಾ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಭಕ್ತರು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯು ಮನವಿ ಮಾಡಿದೆ.
