ಶಿವಮೊಗ್ಗ : ಸದನದಲ್ಲಿ ರಾಜ್ಯಪಾಲರ ನಡೆ ಹಾಗೂ ಹಿಂದೂ ಸಂಗಮ ಕಾರ್ಯಕ್ರಮ ಹಾಗೂ ಮನರೇಗದ ಕುರಿತಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕೇ ಹೊರತು ಒಬ್ಬ ಅಧಿಕಾರಶಾಹಿ ಅಥವಾ ಪಾಳೇದಾರನಂತೆ ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ರೌಂಡ್ ಅಪ್ |ನಾಪತ್ತೆಯಾಗಿದ್ದ ಮಕ್ಕಳು ಪತ್ತೆ| ರೈತನ ಮೇಲೆ ಕರಡಿ ದಾಳಿ|ಚಿನ್ನ ಕದ್ದವನಿಗೆ ಜೈಲು|
ಜಂಟಿ ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಗೌರವಿಸದೆ ಹೊರನಡೆದ ರಾಜ್ಯಪಾಲರ ಕ್ರಮವನ್ನು ಅವರು ಟೀಕಿಸಿದರು. ರಾಷ್ಟ್ರಗೀತೆಯ ಸಂದರ್ಭದಲ್ಲಿ ಗೌರವ ತೋರದೇ ಓಡಿಹೋಗುವುದು ಬಿಜೆಪಿ ಏಜೆಂಟರಂತೆ ವರ್ತಿಸಿದಂತೆ ಎಂದ ಅವರು, ರಾಜ್ಯಪಾಲರನ್ನು ತಡೆಯಲು ಪ್ರಯತ್ನಿಸಿದ ಬಿ.ಕೆ. ಹರಿಪ್ರಸಾದ್ ಅವರ ನಿಲುವನ್ನು ಬೆಂಬಲಿಸಿದರು. ರಾಜ್ಯಪಾಲರು ತಕ್ಷಣವೇ ರಾಜೀನಾಮೆ ನೀಡಿ ಮನೆಗೆ ಹೋಗುವುದು ಸೂಕ್ತ ಎಂದರು.
ನರೇಗಾ (MGNREGA) ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಸರಿಯಾದ ಹಾದಿಯಲ್ಲಿದೆ, ಕೇಂದ್ರ ಸರ್ಕಾರ ಈ ಯೋಜನೆಯನ್ನು ಹಳ್ಳ ಹಿಡಿಸುತ್ತಿದೆ ಎಂದು ದೂರಿದರು. ದೇಶದ 37 ಕೋಟಿ ಜನ ಹಸಿವಿನಿಂದ ಬಳಲುತ್ತಿದ್ದು, ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ನರೇಗಾ ಯೋಜನೆಯಿಂದ ಗಾಂಧೀಜಿಯವರ ಹೆಸರನ್ನು ತೆಗೆದ ಕೇಂದ್ರದ ಕ್ರಮವನ್ನು ಅವರು ಪ್ರಶ್ನಿಸಿದರು.
Kimmane Ratnakar ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ 2800 ಕೋಟಿ ರೂ. ನರೇಗಾ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಸಿವು ಮುಕ್ತ ಭಾರತಕ್ಕೆ ಉದ್ಯೋಗ ಸೃಷ್ಟಿ ಅನಿವಾರ್ಯ, ಇಲ್ಲವಾದಲ್ಲಿ ದೇಶದ ಸ್ಥಿತಿ ಇರಾನ್‌ನಂತೆ ಅಧೋಗತಿಗೆ ತಲುಪಬಹುದು ಎಂಬ ಎಚ್ಚರಿಕೆಯನ್ನು ನೀಡಿದರು. ಹಣಕಾಸು ಸಲಹೆಗಾರರ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕತೆ ಹದಗೆಡುತ್ತಿದೆ ಎಂದು ಕಿಮ್ಮನೆ ಕುಟುಕಿದರು.
ಆರ್.ಎಸ್.ಎಸ್ ಆಯೋಜಿಸುತ್ತಿರುವ ಹಿಂದೂ ಸಂಗಮ ಕಾರ್ಯಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಸಂಘ ಪರಿವಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಏಕತೆಗಾಗಿ ಅಂತರ್ಜಾತಿ ವಿವಾಹಗಳನ್ನು ಇವರು ಪ್ರೋತ್ಸಾಹಿಸುತ್ತಿಲ್ಲವೇಕೆ ಕೇವಲ ರಾಜಕೀಯ ಲಾಭಕ್ಕಾಗಿ ಹಿಂದೂ’ಎನ್ನುವ ಪದವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದೂ ಸಂಗಮದಂತಹ ಅದ್ಧೂರಿ ಕಾರ್ಯಕ್ರಮಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ ರತ್ನಾಕರ್, ದೇಶದ ಹಣ ಲೂಟಿ ಮಾಡಿ ವಿದೇಶಕ್ಕೆ ಓಡಿಹೋದವರಿಂದ ಹಣ ಪಡೆದು ಈ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಆರೋಪಿಸಿದರು.


