ಶಿವಮೊಗ್ಗ |ಮಲೆನಾಡು ಮತ್ತು ಪಶ್ಚಿಮ ಘಟ್ಟದ ರಾಜ್ಯಗಳಲ್ಲಿ ದಶಕಗಳಿಂದ ಆತಂಕ ಮೂಡಿಸಿರುವ ಮಂಗನ ಕಾಯಿಲೆ ಅಥವಾ ಕ್ಯಸನೂರು ಅರಣ್ಯ ಕಾಯಿಲೆಗೆ (KFD) ಕೊನೆಗೂ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಸಾಧನೆ ಮಾಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಕರ್ನಾಟಕ ಸರ್ಕಾರದ ವಿಶೇಷ ಮನವಿಯ ಮೇರೆಗೆ ಈ ಹೊಸ ಲಸಿಕೆಯನ್ನು ಸಿದ್ಧಪಡಿಸಿದ್ದು, ಇದು ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಹೊಂದಿದೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ಜಂಟಿಯಾಗಿ ಈ ಎರಡು ಡೋಸ್‌ಗಳ ಲಸಿಕೆಯನ್ನು ಅಭಿವೃದ್ಧಿಪಡಿಸಿವೆ.
ಈಗಾಗಲೇ ಪ್ರಾಣಿಗಳ ಮೇಲೆ ನಡೆಸಲಾದ ವಿಷತ್ವ ಮತ್ತು ರೋಗನಿರೋಧಕ ಶಕ್ತಿಯ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದರ ಬೆನ್ನಲ್ಲೇ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಹಸಿರು ನಿಶಾನೆ ನೀಡಿದ್ದು, ಇದೀಗ ಮೊದಲ ಹಂತದ ಮಾನವ ಕ್ಲಿನಿಕಲ್ ಟ್ರಯಲ್‌ಗಳು ಅಧಿಕೃತವಾಗಿ ಪ್ರಾರಂಭವಾಗಿವೆ.
ಒಂದು ವೇಳೆ ಈ ಮೊದಲ ಹಂತದ ಪ್ರಯೋಗಗಳು ಯಶಸ್ವಿಯಾಗಿ ಲಸಿಕೆಯು ಸುರಕ್ಷಿತ ಎಂದು ಸಾಬೀತಾದರೆ, ಮುಂದಿನ ಹಂತದ ಪರೀಕ್ಷೆಗಳನ್ನು ನಡೆಸಿ ಶೀಘ್ರದಲ್ಲೇ ಇದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುತ್ತದೆ.
KFD Vaccine Update Phase 1 Human Trials


