Karnataka Cinema Ticket Price ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ಟಿಕೆಟ್ ದರ: ಎಲ್ಲಾ ಭಾಷೆಯ ಸಿನಿಮಾಗಳಿಗೂ ಅನ್ವಯ: ಎಷ್ಟಿದೆ ಟಿಕೆಟ್ ದರ
ಬೆಂಗಳೂರು: ರಾಜ್ಯದಲ್ಲಿ ಕನ್ನಡ ಚಲನಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಮತ್ತು ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್‌ಗಳ ಬೆಲೆಯನ್ನು ಏಕರೂಪಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಇತ್ತೀಚೆಗೆ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಬಾರದೇ ಇರುವುದರಿಂದ ಹಾಗೂ ಪರಭಾಷಾ ಸಿನಿಮಾಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರದ ಹೊಸ ಆದೇಶದ ಪ್ರಕಾರ, ಯಾವುದೇ ಭಾಷೆಯ ಸಿನಿಮಾಗಳಾಗಿರಲಿ, ಎಲ್ಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನದ ಟಿಕೆಟ್ ದರವನ್ನು ಗರಿಷ್ಠ ₹200ಕ್ಕೆ ನಿಗದಿಪಡಿಸಲಾಗಿದೆ. ಈ ನಿಯಮವು ರಾಜ್ಯದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ಭಾಷೆಯ ಚಲನಚಿತ್ರಗಳಿಗೂ ಅನ್ವಯವಾಗಲಿದೆ.
ಕಳೆದ ಕೆಲವು ಸಮಯದಿಂದ ರಾಜ್ಯದಲ್ಲಿ ಪರಭಾಷಾ ಸಿನಿಮಾಗಳ ಪ್ರದರ್ಶನ ಹೆಚ್ಚಾಗಿದ್ದು, ಕನ್ನಡ ಸಿನಿಮಾಗಳಿಗಿಂತಲೂ ಹೆಚ್ಚಿನ ಗಳಿಕೆ ಮಾಡುತ್ತಿವೆ. ಅಲ್ಲದೆ, ಈ ಪರಭಾಷಾ ಸಿನಿಮಾಗಳ ಟಿಕೆಟ್ ಬೆಲೆಯೂ ವಿಪರೀತವಾಗಿ ಹೆಚ್ಚಾಗಿರುತ್ತಿತ್ತು. ಈ ಅಸಮತೋಲನವನ್ನು ತಡೆಯಲು ಮತ್ತು ಕನ್ನಡ ಚಿತ್ರರಂಗಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಸರ್ಕಾರವು ಈ ಏಕರೂಪದ ದರ ನೀತಿಯನ್ನು ಜಾರಿಗೊಳಿಸಿದೆ.″

