Jp story : ಆತ ನಂಬಿಕಸ್ತ ಕಾರು ಮಾಲೀಕ ಕಮ್ ಚಾಲಕ. ಯಾವಾಗ ಹೊರಹೋಗಬೇಕಾದರೂ ಆ ಕುಟುಂಬದವರು ಆತನನ್ನೇ, ಆತನ ಕಾರನ್ನೇ ಅವಲಂಬಿಸಿದ್ದರು. ಐದು ವರ್ಷಗಳ ನಂಬಿಕೆಯನ್ನು ಕಾರು ಚಾಲಕ ಉಳಿಸಿಕೊಳ್ಳದಿರುವುದೇ ಈ ಕಥೆಯ ದುರಂತ.
ಹೌದು, ಇದು ಸಿಬಿಐ ನಿವೃತ್ತ ಎಸ್ಪಿ ಗುರು ಪ್ರಸಾದ್ ಅವರ ಸ್ವಂತ ಊರು ಬಳ್ಳಾರಿ. ಬೆಂಗಳೂರಿನಲ್ಲಿ ನಿವೃತ್ತಿ ಬದುಕು ಕಟ್ಟಿಕೊಂಡಿದ್ದಾರೆ. ಗುರು ಪ್ರಸಾದ್ ಯಾವಾಗಲೂ ಬೆಂಗಳೂರಿನಿಂದ ಬಳ್ಳಾರಿಗೆ ಹೋಗುವಾಗ ರಮೇಶ್ ಎಂಬುವನ ಕ್ಯಾಬ್ ಅನ್ನು ಕಳೆದ ಐದು ವರ್ಷಗಳಿಂದ ಬುಕ್ ಮಾಡಿಕೊಂಡು ಹೋಗುತ್ತಿದ್ದರು. ಹೀಗೆ ಬಳ್ಳಾರಿಯಲ್ಲಿ ತಮ್ಮ ಜಮೀನನ್ನು ಮಾರಿ ಹಣ ತರುವ ಸಲುವಾಗಿ 25-08-25 ರಂದು ಬೆಂಗಳೂರಿನಿಂದ ಬಳ್ಳಾರಿಯತ್ತ ರಮೇಶ್ ಕಾರಿನಲ್ಲಿ ಪಯಣ ಬೆಳೆಸಿದ್ದಾರೆ. ಬಳ್ಳಾರಿಯಲ್ಲಿ ಜಮೀನು ಮಾರಿದ ಹಣ ₹97 ಲಕ್ಷವನ್ನು ಗುರು ಪ್ರಸಾದ್ ಕಾರಿನಲ್ಲಿ ಇಟ್ಟುಕೊಂಡು ಪುನಃ ವಾಪಸ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಚಳ್ಳಕೆರೆ ಚೆಕ್ ಪೋಸ್ಟ್ ದಾಟಿ ಪೊಲೀಸ್ ಠಾಣೆ ಸಮೀಪದಲ್ಲಿರುವ ಉಡುಪಿ ಗಾರ್ಡನ್ ಹೋಟೆಲ್‌ನಲ್ಲಿ ಊಟಕ್ಕೆ ಹೋಗಿದ್ದಾರೆ. ಗುರು ಪ್ರಸಾದ್ ಮತ್ತು ಅವರ ಪತ್ನಿ ಊಟಕ್ಕೆ ಸಿದ್ಧವಾಗುವ ಹೊತ್ತಿಗೆ ರಮೇಶ್ ತರಾತುರಿಯಲ್ಲಿ ಊಟ ಮುಗಿಸಿಕೊಂಡು ಕಾರಿನತ್ತ ಬಂದಿದ್ದಾನೆ.
Jp story : ಊಟ ಮುಗಿಸುವ ಹೊತ್ತಿಗೆ ಮೊಬೈಲ್ ಸ್ವಿಚ್ ಆಫ್ ಮಾಡಿದ ಚಾಲಕ
ಗುರು ಪ್ರಸಾದ್ ದಂಪತಿ ಊಟ ಮುಗಿಸಿ ಕಾರಿನತ್ತ ಬರುವಾಗ ಅವರಿಗೆ ಆಘಾತ ಕಾದಿತ್ತು. ಕಾರು ಚಾಲಕ ರಮೇಶ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದ. ಗುರು ಪ್ರಸಾದ್ ಅರ್ಧ ಗಂಟೆ ಕಾಲ ರಮೇಶ್‌ಗಾಗಿ ಹುಡುಕಾಡಿ, ನಂತರ ಚಳ್ಳಕೆರೆ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ.
Jp story : ತಕ್ಷಣ ಅಲರ್ಟ್ ಆದ ಪೊಲೀಸರು: ಫಾಸ್ಟ್‌ಟ್ಯಾಗ್ ಕಟ್
ರಮೇಶ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೊದಲು ಕಾರಿನ ಫಾಸ್ಟ್‌ಟ್ಯಾಗ್ ಮೇಲೆ ಗಮನ ಹರಿಸಿದ ಪೊಲೀಸರಿಗೆ ಪೂರಕ ಮಾಹಿತಿ ಸಿಗುತ್ತದೆ. ಬೆಂಗಳೂರಿನಿಂದ ಬಳ್ಳಾರಿಗೆ ಹೊರಡುವಾಗ ಚಳ್ಳಕೆರೆ ಚೆಕ್ ಪೋಸ್ಟ್ ಬಳಿ ಕಾರಿನ ಫಾಸ್ಟ್‌ಟ್ಯಾಗ್ ಕಟ್ ಆಗಿರುತ್ತದೆ. ವಾಪಸ್ ಹೋಗುವಾಗ ಕಾರು ಚಾಲಕ ಚಳ್ಳಕೆರೆ ಚೆಕ್ ಪೋಸ್ಟ್ ದಾಟದಿರುವುದು ಅನುಮಾನಕ್ಕೆ ಕಾರಣವಾಗುತ್ತದೆ. ಫಾಸ್ಟ್‌ಟ್ಯಾಗ್‌ನ ವಿವರಗಳನ್ನು ತೆಗೆದ ಪೊಲೀಸರು, ಬ್ಯಾಂಕ್ ಅಕೌಂಟ್ ಮೂಲಕ ಬ್ಯಾಂಕಿನ ಸಹಾಯದಿಂದ ಮನೆ ವಿಳಾಸವನ್ನು ಸಂಗ್ರಹಿಸುತ್ತಾರೆ. ರಮೇಶನ ಆಧಾರ್ ಕಾರ್ಡ್ ತೆಗೆದಾಗ ಲೇಪಾಕ್ಷಿ ಊರು ಎಂದು ಗೊತ್ತಾಗುತ್ತದೆ. ಅಲ್ಲಿಂದ ಎರಡು ಮೊಬೈಲ್ ನಂಬರ್‌ಗಳನ್ನು ಪೊಲೀಸರು ಸಂಗ್ರಹಿಸಿ ಫೋನ್ ಮಾಡಿದಾಗ ಆ ನಂಬರ್‌ಗಳು ಸ್ವಿಚ್ ಆಫ್ ಆಗಿರುತ್ತವೆ. ನಂತರ ಎಲ್ಲಾದರೂ ಫಾಸ್ಟ್‌ಟ್ಯಾಗ್ ಕಟ್ ಆಗುತ್ತದೆಯೇ ಎಂದು ಪೊಲೀಸರು ಗಮನಿಸುತ್ತಾರೆ. ಸಿಸಿ ಕ್ಯಾಮೆರಾ ಚೆಕ್ ಮಾಡಲಾಗುತ್ತದೆ. ಚಳ್ಳಕೆರೆ ದಾಟಿದ ನಂತರ ಐದು ಮಾರ್ಗಗಳಿವೆ – ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು, ಹಿರಿಯೂರು ಮತ್ತು ಪಾವಗಡಕ್ಕೆ ಹೋಗಬಹುದಾಗಿದೆ. ಅದರಲ್ಲಿ ಪಾವಗಡದ ಮೂಲಕ ಕಾರು ಸಂಚರಿಸುತ್ತಿರುವ ಮಾಹಿತಿ ಸಿಗುತ್ತದೆ. ತಕ್ಷಣ ಪಾವಗಡ, ತುಮಕೂರು, ಹಿಂದೂಪುರ, ಅನಂತಪುರ ಪೊಲೀಸರಿಗೆ ಎಚ್ಚರಿಕೆ ನೀಡಲಾಗುತ್ತದೆ. ಚಳ್ಳಕೆರೆಯಿಂದ ಇನ್ಸ್‌ಪೆಕ್ಟರ್ ಕುಮಾರ್ ಕಾರು ಹೋದ ಮಾರ್ಗವನ್ನು ಹಿಂಬಾಲಿಸಿಕೊಂಡು ಹೋಗುತ್ತಾರೆ.
Jp story : ಕಾರಿನ ಜಿಪಿಎಸ್‌ಗೆ ಮೊರೆಹೋದ ಪೊಲೀಸರು
ಆರೋಪಿ ರಮೇಶ್‌ನನ್ನು ಹಿಡಿಯಲು ಪೊಲೀಸರು ಕಾರಿನಲ್ಲಿರುವ ಜಿಪಿಎಸ್‌ಗೆ ಮೊರೆ ಹೋಗುತ್ತಾರೆ. ಅದಕ್ಕಾಗಿ ಆರ್.ಟಿ.ಓ.ವನ್ನು ಸಂಪರ್ಕಿಸಿದಾಗ ಕಾರಿನಲ್ಲಿ ಎರಡು ಜಿಪಿಎಸ್ ಇರುವುದು ತಿಳಿಯುತ್ತದೆ. ಕಾರಿನಲ್ಲಿದ್ದ ಮುಖ್ಯ ಸಂಪರ್ಕವನ್ನು ರಮೇಶ್ ಕಟ್ ಮಾಡಿರುತ್ತಾನೆ. ಆದರೆ ಉಪ-ಸಂಪರ್ಕವು ಚಾಲನೆಯಲ್ಲಿರುತ್ತದೆ.
ಉಪ-ಸಂಪರ್ಕವು ಡೈನಮೋಗೆ ಸಂಪರ್ಕಗೊಂಡಿರುತ್ತದೆ. ಇದರ ಬಗ್ಗೆ ರಮೇಶ್‌ಗೆ ಜ್ಞಾನ ಇರುವುದಿಲ್ಲ. ಉಪ-ಸಂಪರ್ಕವನ್ನು ಟ್ರ್ಯಾಕ್ ಮಾಡಿಕೊಂಡು ಹೋದ ಇನ್ಸ್‌ಪೆಕ್ಟರ್ ಕುಮಾರ್ ಅವರ ತಂಡಕ್ಕೆ ಹಿಂದೂಪುರ ಜಿಲ್ಲೆಯ ಬರ್ಗಿ ಎಂಬ ಹಳ್ಳಿಯಲ್ಲಿ ಸಂಜೆ 7.30ರ ಹೊತ್ತಿಗೆ ಟ್ರ್ಯಾಕ್ ಎಂಡ್ ಆಗಿರುತ್ತದೆ. ಪಾವಗಡ, ಹಿಂದೂಪುರ, ಲೇಪಾಕ್ಷಿಯಿಂದ ಬಂದಿರುವ ಪೊಲೀಸರ ತಂಡ ಇದ್ದರೂ ಕಾರು ಟ್ರ್ಯಾಕ್ ಆಗಿರುವುದಿಲ್ಲ. ಆಗ ಪೊಲೀಸರಿಗೆ ಅನುಮಾನ ಶುರುವಾಗುತ್ತದೆ. ಕಾರು ಚಾಲಕ ಏನಾದರೂ ಉಪ-ಸಂಪರ್ಕ ಜಿಪಿಎಸ್ ಅನ್ನು ಕಟ್ ಮಾಡಿದನೇ ಅಥವಾ ಕಾರು ಚಲಾಯಿಸುವುದನ್ನು ನಿಲ್ಲಿಸಿದ್ದಾನೆಯೇ ಎಂಬ ಅನುಮಾನ ಕಾಡುತ್ತದೆ. ಗಾಡಿ ಆಫ್ ಆಗಿದ್ದರೆ ಯಾವುದಾದರೂ ಒಂದು ಮರೆಯಲ್ಲಿ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತದೆ. ಜಿಪಿಎಸ್ ಕಿತ್ತುಹಾಕುವುದಾಗಿದ್ದರೆ, ಕಾರು ಚಾಲಕ ಚಳ್ಳಕೆರೆಯಲ್ಲೇ ಕಿತ್ತುಹಾಕಬೇಕಿತ್ತು, ನೂರಾರು ಕಿಲೋಮೀಟರ್ ಸಾಗಿದ ನಂತರ ಜಿಪಿಎಸ್ ತೆಗೆಯುವ ದರ್ದು ಅವನಿಗೇಕೆ ಎಂಬ ಅನುಮಾನ ಪೊಲೀಸರನ್ನು ಕಾಡುತ್ತದೆ.
Jp story : ಬೇಸಿಕ್ ಪೊಲೀಸಿಂಗ್‌ಗೆ ಮೊರೆ ಹೋದ ಪೊಲೀಸರು
ಬರ್ಗಿಯಲ್ಲಿ ಕಾರಿನ ಜಿಪಿಎಸ್ ಟ್ರ್ಯಾಕ್ ಕೊನೆಯಾದಾಗ ಪೊಲೀಸರು ಕ್ಷಣಕಾಲ ಖಾಲಿ ಮನಸ್ಸಿನವರಾಗುತ್ತಾರೆ. ಮುಂದೇನು ಮಾಡುವುದು ಎಂದು ಗೊತ್ತಾಗುವುದಿಲ್ಲ. ಆಗ ಪೊಲೀಸರು ಹಳೆಯ ಮಾದರಿಯ ಬೇಸಿಕ್ ಪೊಲೀಸಿಂಗ್‌ಗೆ ಮುಂದಾಗುತ್ತಾರೆ. ಚಳ್ಳಕೆರೆಯಿಂದ ವಾಪಸ್ಸಾಗುವಾಗ ಕಾರು ಚಾಲಕ ರಮೇಶ್ ಯಾರ್ಯಾರಿಗೆ ಫೋನ್ ಮಾಡಿದ್ದ, ಆತನ ಕುಟುಂಬದ ಹಿನ್ನೆಲೆಯನ್ನು ಸಂಗ್ರಹಿಸುತ್ತಾರೆ. ಲೇಪಾಕ್ಷಿಯಲ್ಲಿದ್ದ ಆತನ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆ ಮಾಡುತ್ತಾರೆ. ಕುಟುಂಬಸ್ಥರನ್ನು ವಿಚಾರಣೆಗೊಳಪಡಿಸಿದಾಗ ರಮೇಶ್ ಯಾರಿಗೂ ಫೋನ್ ಮಾಡಿರುವುದಿಲ್ಲ. ಆತ ಕುಟುಂಬಸ್ಥರ ಸಂಪರ್ಕವನ್ನೇ ಮಾಡಿಲ್ಲ. ಅಷ್ಟರಲ್ಲಾಗಲೇ ಬೆಳಗಿನ ಜಾವ ನಾಲ್ಕು ಗಂಟೆಯಾಗಿರುತ್ತದೆ.
Jp story ಇನ್ಸ್‌ಪೆಕ್ಟರ್ ಕುಮಾರ್ ಮತ್ತು ತಂಡ ತಾವಿದ್ದ ಸ್ಥಳದಿಂದ 18 ಕಿಲೋಮೀಟರ್ ದೂರದಲ್ಲಿರುವ ಬರ್ಗಿ ಗ್ರಾಮಕ್ಕೆ ಹೋಗಲು ನಿರ್ಧರಿಸುತ್ತಾರೆ. ಅದೇ ಗ್ರಾಮದಲ್ಲಿ ಜಿಪಿಎಸ್ ಸಂಪರ್ಕ ಕಡಿತಗೊಂಡು ಕಾರು ನಿಂತಿರುತ್ತದೆ. ಪುನಃ ವಾಪಸ್ ಹೋಗೋಣ ಎಂದು ಜೀಪ್ ಹತ್ತಿದ ಕುಮಾರ್‌ಗೆ ಆಘಾತ ಕಾದಿತ್ತು. ಬರ್ಗಿ ಮಾರ್ಗವಾಗಿ ಬರುವಾಗ ಎದುರಿಗೆ ‘ಕೆಎ 51 ಸಿ’ ಎಂಬುದಷ್ಟೇ ನಂಬರ್ ಇರುವ ಕಾರು ಕುಮಾರ್‌ಗೆ ಕಾಣಿಸುತ್ತದೆ. ತಕ್ಷಣ ಇದೇ ಕಾರು ಎಂದು ಖಚಿತಪಡಿಸಿಕೊಂಡ ಕುಮಾರ್ ತಂಡ ಸುಮಾರು 40 ಕಿಲೋಮೀಟರ್ ಬೆನ್ನಟ್ಟಿ ಹೋಗುತ್ತದೆ. ಅತಿಯಾದ ವೇಗದಲ್ಲಿ ಸಾಗುವಾಗ ಗುಂಡಿಯೊಂದು ಅಡ್ಡಬಂದು ಎಲ್ಲರೂ ಅಪಘಾತಕ್ಕೀಡಾಗಬೇಕಾದ ಸನ್ನಿವೇಶ ಕೂಡ ಎದುರಾಗಿತ್ತು. ಕಾರು ಚಾಲಕ ರಮೇಶ್ ಮರಕ್ಕೆ ಗುದ್ದಿದಾಗ ಮುಂದಿನ ಡ್ರೈವರ್ ಡೋರ್ ಲಾಕ್ ಆಗಿರುತ್ತದೆ. ತಕ್ಷಣ ಆತನನ್ನು ಲಾಕ್ ಮಾಡಲಾಗುತ್ತದೆ.
ವಿಚಾರಣೆಗೊಳಪಡಿಸಿದಾಗ, ಪೊಲೀಸ್ ಭಾಷೆಯಲ್ಲಿ ಕೇಳಿದಾಗ, ಅಜ್ಜಿಯ ಮನೆಯಲ್ಲಿ ದುಡ್ಡು ಇಟ್ಟಿರುವುದಾಗಿ ಬಾಯಿಬಿಟ್ಟ. ₹97 ಲಕ್ಷದಲ್ಲಿ ಕೇವಲ ₹3200 ಮಾತ್ರ ಆತ ಖರ್ಚು ಮಾಡಿದ್ದ. ಕೇವಲ 24 ಗಂಟೆಯ ಈ ಸಿನಿಮೀಯ ಕಾರ್ಯಾಚರಣೆಯಲ್ಲಿ ಪೊಲೀಸರು ಯಶಸ್ಸು ಸಾಧಿಸಿದ್ದೇ ಒಂದು ರೋಚಕ ಸಂಗತಿ.
