Job Fraud :ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ಯುವಕನಿಗೆ ಹಂತ ಹಂತವಾಗಿ 3 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿಕೊಂಡು ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿ ಶಿವಮೊಗ್ಗದ ಸಿ ಇ ಎನ್ ಪೊಲೀಸ್ ಠಾಣೆಯುಲ್ಲಿ ಪ್ರಕರಣ ದಾಕಲಿಸಿದ್ದಾರೆ.
ದೂರುದಾರರು ವಿದೇಶದಲ್ಲಿ ಜನರಲ್ ಕ್ಯಾಟಗರಿ ವರ್ಕ್ (ಆಟೋಮೊಬೈಲ್ ಇಂಜಿನಿಯರಿಂಗ್) ಕೆಲಸಕ್ಕಾಗಿ ಹಲವು ವೆಬ್‌ಸೈಟ್‌ಗಳಲ್ಲಿ ಹುಡುಕುತ್ತಿದ್ದಾಗ, ಅವರಿಗೊಂದು ಅಪರಿಚಿತ ಮೊಬೈಲ್ ಸಂಖ್ಯೆ ಕಾಣಿಸಿದೆ, ಆಗ ಅವರು ಆ ನಂಬರ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ, ಉದ್ಯೋಗ ನೀಡಲು ಕೆಲವು ಪ್ರಕ್ರಿಯೆಗಳಿದ್ದು, ಅದಕ್ಕಾಗಿ ಸುಮಾರು 5 ಲಕ್ಷ ರೂಪಾಯಿಗಳವರೆಗೆ ಖರ್ಚಾಗಲಿದೆ ಅಪರಿಚಿತರು ತಿಳಿಸಿದ್ದಾರೆ.ನಂತರ ಆರೋಪಿಯು ದೂರುದಾರರನ್ನು ಅದೇ ಮೊಬೈಲ್ ಸಂಖ್ಯೆಯಿಂದ ವಾಟ್ಸ್‌ಆಪ್ ಗ್ರೂಪ್ ಒಂದಕ್ಕೆ ಸೇರಿಸಿ, ತಮ್ಮ ರೆಸ್ಯೂಮ್ ಕಳುಹಿಸುವಂತೆ ಹೇಳಿದ್ದಾನೆ. ದೂರುದಾರರು ರೆಸ್ಯೂಮ್ ಕಳುಹಿಸಿದ ಬಳಿಕ, ಪ್ರೋಸೆಸಿಂಗ್ ಶುಲ್ಕ 5,ಲಕ್ಷ ರೂಪಾಯಿ ಇರುವುದಾಗಿ ತಿಳಿಸಿ, ಮೊದಲ ಹಂತದಲ್ಲಿ 3 ಲಕ್ಷ ರೂ. ಕಟ್ಟುವಂತೆ ಹೇಳಿದ್ದಾನೆ.
ಈ ಹಿನ್ನೆಲೆ ದೂರುದಾರರು ಆರೋಪಿಯ ಬ್ಯಾಂಕ್ ಖಾತೆ ಗೆ ಐಎಂಪಿಎಸ್ ಮೂಲಕ 1,00,000 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ನಂತರ ಆರೋಪಿಯು, ಪ್ರಕ್ರಿಯೆ ಪೂರ್ಣಗೊಳಿಸಲು ಬಾಕಿ ಹಣವನ್ನು ತಕ್ಷಣ ಕಟ್ಟುವಂತೆ ಒತ್ತಾಯಿಸಿ, ಹಣ ಕಟ್ಟದಿದ್ದರೆ ಉದ್ಯೋಗದ ಪ್ರಕ್ರಿಯೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಗೆ ಹೆದರಿದ ದೂರುದಾರರು ತಮ್ಮ ಬ್ಯಾಂಕ್ ಖಾತೆಯಿಂದ ಉಳಿದ 2,00,000 ರೂಪಾಯಿಗಳನ್ನು ಸಹ ಹಂತ-ಹಂತವಾಗಿ ವರ್ಗಾಯಿಸಿದ್ದಾರೆ.
ನಂತರ ದೂರುದಾರರಿಗೆ ಅನುಮಾನ ಬಂದಿದ್ದು, ಆರೋಪಿಯ ಮೊಬೈಲ್ ಸಂಖ್ಯೆ ಗೆ ಕರೆ ಮಾಡಿ ಕಟ್ಟಿರುವ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಆಗ ಆರೋಪಿಯು, ತನ್ನ ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ 3 ತಿಂಗಳ ನಂತರ ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಾನೆ. ಆದರೆ, ಸ್ವಲ್ಪ ದಿನಗಳ ಬಳಿಕ ದೂರುದಾರರು ಕರೆ ಮಾಡಿದಾಗ, ಆರೋಪಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದರಿಂದ ಮೋಸ ಹೋಗಿರುವುದು ದೂರುದಾರರಿಗೆ ತಿಳಿದುಬಂದಿದೆ.