ಶಿವಮೊಗ್ಗ: ನಗರದ ಜವಾಹರಲಾಲ್ ನೆಹರು ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜು (JNNCE) ಕಾಲೇಜಿನ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್ಇಎಸ್) ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್ ಅವರು ಸಂತಸ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿನಿ ಪಾರ್ವತಿ ಸಾಲೇರ. ಸಾಧನೆ ಮಾಡುವುದಕ್ಕಿಂತ ಅದನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಕಷ್ಟಕರ ಎಂಬ ಮಾತನ್ನು ಸುಳ್ಳು ಮಾಡಿದ್ದಾರೆ. ಈ ಹಿಂದೆ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆಯುವುದರ ಜೊತೆಗೆ 6 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದ ಅವರು, ಇದೀಗ ಎಂಬಿಎ (MBA) ವಿಭಾಗದಲ್ಲಿಯೂ ಪ್ರಥಮ ರ್ಯಾಂಕ್ ಹಾಗೂ 4 ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ 25ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮತ್ತು ಬಂಗಾರದ ಪದಕ ನೀಡಿದ್ದಾರೆ. ಈ ಮೂಲಕ ಒಟ್ಟು 10 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಾಲೇಜಿಗೆ ಅಭೂತಪೂರ್ವ ಹೆಮ್ಮೆ ತಂದಿದ್ದಾರೆ ಎಂದರು. ಪಾರ್ವತಿ ಸಾಲೇರ ಸಿದ್ದಪ್ಪ ಅವರ ಮೊಮ್ಮಗಳಾಗಿದ್ದು, ಅವರ ತಾಯಿ ಐಶ್ವರ್ಯ ಸಾಲೇರ ಕೂಡ ಜೆ.ಎನ್.ಎನ್.ಸಿ.ಇ ಹಿರಿಯ ವಿದ್ಯಾರ್ಥಿಯಾಗಿದ್ದು ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್ ಪಡೆದಿದ್ದರು ಎಂದರು .
ತಮ್ಮ ಯಶಸ್ಸಿನ ಕುರಿತು ಮಾತನಾಡಿದ ಪಾರ್ವತಿ ಅವರು, ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಓದಿದ್ದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಇಲ್ಲಿನ ಪ್ರಾಧ್ಯಾಪಕರು ನೀಡಿದ ಬೆಂಬಲ ಮತ್ತು ಕಾಲೇಜಿನಲ್ಲಿರುವ ಶೈಕ್ಷಣಿಕ ನಮ್ಯತೆ (Flexibility) ಈ ಸಾಧನೆಗೆ ಪ್ರಮುಖ ಕಾರಣವೆಂದು ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಈಗಾಗಲೇ ಕೆಲವು ಯೋಜನೆಗಳನ್ನು ರೂಪಿಸಿಕೊಂಡಿರುವುದಾಗಿ ತಿಳಿಸಿದರು.
JNNCE college ಎಂ.ಟೆಕ್ ವಿಭಾಗದಲ್ಲಿ ಸಂಜಯ್ ಎಂ.ವಿ. ಸಾಧನೆ
ಇದೇ ಸಂದರ್ಭದಲ್ಲಿ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಸಂಜಯ್ ಎಂ.ವಿ. ಅವರ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಲಾಯಿತು. ವಿಟಿಯು ನಡೆಸಿದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಎಂ.ಟೆಕ್ ಪದವಿಯಲ್ಲಿ ಸಂಜಯ್ ಅವರು 9.54 ಸಿಜಿಪಿಎ ಗಳಿಸುವುದರೊಂದಿಗೆ ರಾಜ್ಯ ಮಟ್ಟದಲ್ಲಿ 8ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
JNNCE college Parvati Wins Gold Medals



