Homeopathy Service Deficiency ಪಾಸಿಟಿವ್ ಹೋಮಿಯೋಪತಿಗೆ ಸೇವಾ ನ್ಯೂನ್ಯತೆ ಆರೋಪ: ಶಿವಮೊಗ್ಗ ಗ್ರಾಹಕರ ಆಯೋಗದಿಂದ ಪರಿಹಾರಕ್ಕೆ ಆದೇಶ
Shivamogga news : ದಾವಣಗೆರೆಯ ಪಿ.ಜೆ. ಎಕ್ಸ್‌ಟೆನ್ಶನ್‌ನಲ್ಲಿರುವ ಪಾಸಿಟಿವ್ ಹೋಮಿಯೋಪತಿ ಸಂಸ್ಥೆಯ ವಿರುದ್ಧ ಶಿವಮೊಗ್ಗದ ವಿನೋಬನಗರದ ನಿವಾಸಿ ಎಸ್. ಎಂ. ಮಂಜಪ್ಪ ಅವರು ಸಲ್ಲಿಸಿದ್ದ ಸೇವಾ ನ್ಯೂನ್ಯತೆ ದೂರಿನ ಕುರಿತು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ಆದೇಶ ಹೊರಡಿಸಿದೆ. ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆಯೋಗವು ಪಾಸಿಟಿವ್ ಹೋಮಿಯೋಪತಿಗೆ ಸೂಚಿಸಿದೆ.
Homeopathy Service Deficiency
ಕ್ರಾನಿಕ್ ಪ್ಯಾಂಕ್ರಿಯಾಟೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಮಂಜಪ್ಪ ಎಂಬವರಿಗೆ, ಮೂರು ವರ್ಷಗಳ ಚಿಕಿತ್ಸೆ ಮತ್ತು ಔಷಧಿಗಳಿಗಾಗಿ ₹40,000/- ಪಾವತಿಸುವಂತೆ ಹೋಮಿಯೋಪತಿ ಸಂಸ್ಥೆಯು ಭರವಸೆ ನೀಡಿತ್ತು. ಅದರಂತೆ, ದೂರುದಾರರು ದಿನಾಂಕ 2024ರ ಮಾರ್ಚ್ 29 ಮತ್ತು ಏಪ್ರಿಲ್ 01 ರಂದು ₹40,000/- ಹಣವನ್ನು ಪಾವತಿಸಿದ್ದರು. ಆದರೆ, ನಂತರದಲ್ಲಿ ಎದುರುದಾರರು ದೂರುದಾರರಿಗೆ ಯಾವುದೇ ರೀತಿಯ ಚಿಕಿತ್ಸೆ ಅಥವಾ ಔಷಧಿಗಳನ್ನು ಒದಗಿಸಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.


ಹಲವು ಬಾರಿ ಕೇಳಿಕೊಂಡರೂ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡದ ಕಾರಣ, ₹40,000/- ಪಡೆದು, ಮೂರು ವರ್ಷಗಳವರೆಗೆ ಹೋಮಿಯೋಪತಿ ಚಿಕಿತ್ಸೆ/ಔಷಧಿಗಳನ್ನು ನೀಡದೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಹೋಮಿಯೋಪತಿ ಸಂಸ್ಥೆ ಹಣವನ್ನು ಪಡೆದು ಚಿಕಿತ್ಸೆ/ಔಷಧಿಗಳನ್ನು ನೀಡದೆ ಸೇವಾ ನ್ಯೂನ್ಯತೆ ಎಸಗಿದೆ ಎಂದು ತೀರ್ಮಾನಿಸಿದೆ. ಅಲ್ಲದೆ ಈ ಸಂಬಂಧ ದೂರುದಾರರಿಂದ ಪಡೆದ ₹40,000/- ಗಳಿಗೆ ಶೇ.9ರ ಬಡ್ಡಿಯೊಂದಿಗೆ ( ಪೂರ್ಣ ಹಣವನ್ನು ಪಾವತಿಸುವವರೆಗೆ) ನೀಡುವಂತೆ ಆದೇಶಿಸಿದೆ.
ಹೆಚ್ಚುವರಿಯಾಗಿ, ಮಾನಸಿಕ ಹಿಂಸೆಗೆ ಪರಿಹಾರವಾಗಿ ₹8,000 ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ₹5,000 ಗಳನ್ನು ಈ ಆದೇಶವಾದ 45 ದಿನಗಳ ಒಳಗೆ ಪಾವತಿಸಬೇಕು ಎಂದು ಆಯೋಗವು ಸೂಚಿಸಿದೆ. ತಪ್ಪಿದಲ್ಲಿ, ಶೇ.12ರ ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನು ಒಳಗೊಂಡ ಪೀಠವು 2025ರ ಜೂನ್ 30 ರಂದು ಆದೇಶ ನೀಡಿದೆ.