ಕೆಎಫ್​ಡಿಗೆ ಹೆಲ್ಪ್​ಲೈನ್! ಸಚಿವರು, ಆರೋಗ್ಯ ಇಲಾಖೆಯಿಂದ ಮಂಗನ ಕಾಯಿಲೆ ಬಗ್ಗೆ ಮಹತ್ವ ಮಾಹಿತಿ! ಇಲ್ಲಿದೆ ಡಿಟೇಲ್ಸ್​

Helpline for KFD! Minister, Health Department give important information about monkey disease Here are the details

ಕೆಎಫ್​ಡಿಗೆ ಹೆಲ್ಪ್​ಲೈನ್!  ಸಚಿವರು, ಆರೋಗ್ಯ ಇಲಾಖೆಯಿಂದ ಮಂಗನ ಕಾಯಿಲೆ ಬಗ್ಗೆ ಮಹತ್ವ ಮಾಹಿತಿ! ಇಲ್ಲಿದೆ ಡಿಟೇಲ್ಸ್​
Helpline for KFD! Minister, Health Department give important information about monkey disease Here are the details

Shivamogga | Feb 10, 2024 |  ಮಂಗನ ಕಾಯಿಲೆ ಬಾಧಿತ ಪ್ರದೇಶದ ಜನರು ಜ್ವರದಂತಹ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡದೇ, ಶೀಘ್ರವಾಗಿ ಚಿಕಿತ್ಸೆ ಪಡೆಯಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಂಗನ ಕಾಯಿಲೆ (ಕೆಎಫ್‍ಡಿ) ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಧು ಬಂಗಾರಪ್ಪ ಹೇಳಿದ್ದೇನು?

ಮಂಗನ ಕಾಯಿಲೆ ಬಗ್ಗೆ ಗಾಬರಿಯಾಗುವುದು ಬೇಡ. ಆದರೆ ಜ್ವರ, ತಲೆನೋವು, ಸ್ನಾಯುಗಳ ನೋವು ಇತ್ಯಾದಿ ಲಕ್ಷಣ ಕಾಣಿಸಿಕೊಂಡಾಗ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಆರಂಭದಲ್ಲೇ ರೋಗ ಲಕ್ಷಣಗಳಿಗೆ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದರು.

ಕೆಎಫ್‍ಡಿ 

1960 ರಿಂದ ಕೆಎಫ್‍ಡಿ ಮಲೆನಾಡಿನ ಸಾಗರ, ಹೊಸನಗರ ತೀರ್ಥಹಳ್ಳಿ ಹಾಗೂ ಘಟ್ಟದ ಭಾಗದಲ್ಲಿ ಇದೆ. ಯಾವುದೇ ಸಾವು ನೋವು ಸಂಭವಿಸಬಾರದು. ಆ ರೀತಿ ಕ್ರಮ ವಹಿಸಲು ಸೂಚಿಸಿದ್ದೇನೆ. ಹಾಗೂ ಕೆಎಫ್‍ಡಿ ಶಾಶ್ವತ ಪರಿಹಾರ ಹಾಗೂ ಲಸಿಕೆ ಬಗ್ಗೆ ಚರ್ಚಿಸಲು ಏಪ್ರಿಲ್ 13 ಮತ್ತು 14 ರಂದು ಅಧಿಕಾರಿಗಳು, ತಜ್ಞರ ತಂಡ ಹಾಗೂ ಶಾಸಕರು, ಆರೋಗ್ಯ ಸಚಿವರೊಂದಿಗೆ ಎರಡು ಹಂತದ ಸಭೆಯನ್ನು ನಡೆಸಲಾಗುವುದು ಎಂದರು.

ಬಾಧಿತ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ನಿಯಮಿತವಾಗಿ ಮನೆ ಮನೆ ಭೇಟಿ ನೀಡಿ ಜ್ವರ ಪ್ರಕರಣಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು. ಪ್ರತಿ ಗ್ರಾ.ಪಂ ಗಳಲ್ಲಿ, ಬಸ್‍ನಿಲ್ದಾಣಗಳಲ್ಲಿ ಜನರಿಗೆ ಕಾಣುವಂತಹ ಕೆಎಫ್‍ಡಿ ಬಗ್ಗೆ ಅರಿವು ಮೂಡಿಸುವ ಪೋಸ್ಟರ್‍ಗಳನ್ನು ಅಂಟಿಸುವುದು, ಕರಪತ್ರಗಳನ್ನು ನೀಡುವ ಕೆಲಸ ಶೀಘ್ರದಲ್ಲೇ ಆಗಬೇಕು. ಈ ಪ್ರದೇಶದ ಜನರಲ್ಲಿ ಹೆಚ್ಚೆಚ್ಚು ಅರಿವು ಮೂಡಿಸಬೇಕು ಎಂದರು.

ಹೆಲ್ಪ್​ಲೈನ್​ ಸಂಖ್ಯೆ  08182-222382 

ಹೆಲ್ಪ್​ಲೈನ್‍ಗೆ ಕರೆ ಮಾಡಿ: ಬಾಧಿತ ಪ್ರದೇಶದಲ್ಲಿ ಜನರಿಗೆ ಜ್ವರ ಇತರೆ ಲಕ್ಷಣಗಳು ಕಂಡುಬಂದಲ್ಲಿ ಶೀಘ್ರವಾಗಿ ಆಸ್ಪತ್ರೆಗೆ ಹೋಗಬೇಕು. ಹಾಗೂ ಹೆಚ್ಚಿನ ಸಹಾಯ ಅಗತ್ಯವಿದ್ದಲ್ಲಿ ಡಿಹೆಚ್‍ಓ ಹೆಲ್ಪ್​ಲೈನ್​  ಸಂಖ್ಯೆಗೆ 08182-222382 ಕರೆ ಮಾಡಿ ಆಂಬುಲೆನ್ಸ್, ಚಿಕಿತ್ಸೆ ಸೇರಿದಂತೆ ಅಗತ್ಯ ಸೇವೆ ಪಡೆಯಬಹುದು. 

ಇದುವರೆಗೆ ಕೆಎಫ್‍ಡಿಯಿಂದ ಮರಣ ಹೊಂದಿದವರಿಗೆ ಯಾವುದೇ ರೀತಿಯ ಸಹಾಯ/ಪರಿಹಾರ ಇರುವುದಿಲ್ಲ. ಫೆ.12 ರಿಂದ ಆರಂಭವಾಗುವ ಸಚಿವ ಸಂಪುಟ ಸಭೆಯಲ್ಲಿ ಪರಿಹಾರ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ಡಿಹೆಚ್​ಓ ಡಾ.ರಾಜೇಶ್ ಸುರಗಿಹಳ್ಳಿ

ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಮಂಗನ ಕಾಯಿಲೆ ವೈರಾಣು ಸೋಂಕಿನ ನಿಂಫ್ ಹಂತದಲ್ಲಿರುವ ಉಣ್ಣಿಗಳು ಕಚ್ಚುವುದರಿಂದ ಹರಡುತ್ತದೆ. 

ಮಂಗನ ಅಸ್ವಾಭಾವಿಕ ಸಾವು ಮಂಗನ ಕಾಯಿಲೆಯ ಕುರಿತಾದ ಎಚ್ಚರಿಕೆ ಗಂಟೆ. ನಂತರ ಮನುಷ್ಯರಿಗೆ ಬರುತ್ತದೆ. 

ಜ್ವರ, ತಲೆನೋವು ಇತರೆ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಬರಬೇಕು. ಇದು ಮೊದಲನೇ ಹಂತ. 

ಈ ಹಂತದಲ್ಲಿ ಸೋಂಕನ್ನು ಗುಣಪಡಿಸಬಹುದು. ಎರಡನೇ ಹಂತದಲ್ಲಿ ಫಿಟ್ಸ್, ನರಸಂಬಂಧಿ ಸಮಸ್ಯೆ, ರಕ್ತಸ್ರಾವ ಉಂಟಾಗುತ್ತದೆ. 

 ಅರಣ್ಯ ಭಾಗದಲ್ಲಿ ಇರುವವರೆಲ್ಲ ಸರ್ಕಾರಿ ಆಸ್ಪತ್ರೆಗಳಿಂದ ನೀಡಲಾಗುವ ಡಿಇಪಿಎ ತೈಲವನ್ನು ಹಚ್ಚಿಕೊಳ್ಳಬೇಕು.

 2022 ರವರೆಗೆ ಕೆಎಫ್‍ಡಿ ನಿಯಂತ್ರಣ ಲಸಿಕೆ ಇತ್ತು. ಇದೀಗ ಹೊಸ ಲಸಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಲಭ್ಯವಾಗಲಿದೆ.

ರಾಜ್ಯದಲ್ಲಿ 70 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆ 25 ಪಾಸಿಟಿವ್ ಪ್ರಕರಣಗಳಿವೆ. 1 ಸಾವು ಸಂಭವಿಸಿದೆ. ಕೆಎಫ್‍ಡಿ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಇತರೆ ಇಲಾಖೆಗಳ ಸಮನ್ವಯದೊಂದಿಗೆ ಕೈಗೊಳ್ಳಲಾಗುತ್ತಿದೆ. 

ಹಾಗೂ ಎಬಿಎಆರ್‍ಕೆ ಅಡಿಯಲ್ಲಿ ಎಂಪಾನೆಲ್ ಆದ ಖಾಸಗಿ ಆಸ್ಪತ್ರೆಯಲ್ಲಿ ಕೆಎಫ್‍ಡಿ ಬಾಧಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ, ಕೆಎಫ್‍ಡಿಗೆ ಲಸಿಕೆ ಅತ್ಯಗತ್ಯವಾಗಿ ಬೇಕು. ಮುಂದೆ ಉಷ್ಣತೆ ಹೆಚ್ಚುತ್ತಿದ್ದಂತೆ ಸೋಂಕು ಹೆಚ್ಚುತ್ತದೆ. 

ಅದನ್ನು ಊಹಿಸಲೂ ಕಷ್ಟ. ಮಲೆನಾಡು ಭಾಗದಲ್ಲಿ ಕೆಎಫ್‍ಡಿ ಬಗ್ಗೆ ಕೋವಿಡ್‍ಗಿಂತ ಹೆಚ್ಚು ಭಯ ಇದೆ. ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಲಸಿಕೆ ನೀಡಬೇಕು. 

ಸಕ್ರಿಯ ಸಮೀಕ್ಷೆ ನಡೆಯಬೇಕು. ದೂರದ ಮಲೆನಾಡಿನ ಹಳ್ಳಿಗಾಡಿನ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು ಹಾಗೂ ಜಾನುವಾರುಗಳಿಗೆ ಲಸಿಕೆ ನೀಡಬೇಕು.

ಬಾಧಿತ ಪ್ರದೇಶಗಳಲ್ಲಿ ಇನ್ನು 2-3 ತಿಂಗಳು ಕಾಲ ಆಂಬುಲೆನ್ಸ್/ಮೊಬೈಲ್ ವಾಹನ ಸೇವೆಯನ್ನು ಒದಗಿಸಿ, ಜ್ವರದಂತಹ ಪ್ರಕರಣಗಳನ್ನು ಶೀಘ್ರವಾಗಿ ಉಪಚರಿಸಲು ಅನುಕೂಲ ಮಾಡಿಕೊಡಬೇಕೆಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲ, ಪಶುಪಾಲನಾ ಇಲಾಖೆ, ಅರಣ್ಯ, ಗ್ರಾಮೀಣಾಭಿವೃದ್ದಿ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆಗಳು ಸಮನ್ವಯದೊಂದಿಗೆ ಕೆಎಫ್‍ಡಿ ನಿಯಂತ್ರಣದಲ್ಲಿ ಸಕ್ರಿಯವಾಗಿ ಕಾರ್ಯನಿರತರಾಗಬೇಕು. ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದರು.

ಸಾಗರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕು ವೈದ್ಯಾಧಿಕಾರಿಗಳು ಮಾತನಾಡಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ಕೆಎಫ್‍ಡಿಗೆ ಚಿಕಿತ್ಸೆ ನೀಡಲು ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಉನ್ನತ ರೆಫರಲ್ ಸೆಂಟರ್‍ಗೆ ಸಾಗಿಸಲು ಉಚಿತ ಆಂಬುಲೆನ್ಸ್ ಸೌಲಭ್ಯ ಮತ್ತು ಔಷಧಿಗಳ ಲಭ್ಯತೆ ಇದೆ ಎಂದರು.

ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ವಿಡಿಎಲ್ ಅಧಿಕಾರಿ ಡಾ.ಹರ್ಷವರ್ಧನ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.