digital arrest in shivamogga ಶಿವಮೊಗ್ಗದಲ್ಲಿ ‘ಡಿಜಿಟಲ್ ಅರೆಸ್ಟ್’ ನೆಪದಲ್ಲಿ ವೃದ್ಧನಿಗೆ ₹17.60 ಲಕ್ಷ ವಂಚನೆ
Shivamogga news / ಶಿವಮೊಗ್ಗ ನಗರದ ಗಾಂಧಿನಗರ ಬಡಾವಣೆಯಲ್ಲಿ 88 ವರ್ಷದ ವೃದ್ಧರೊಬ್ಬರಿಗೆ ‘ಡಿಜಿಟಲ್ ಅರೆಸ್ಟ್‘ನ ನಾಟಕವಾಡಿ ಬರೋಬ್ಬರಿ ₹17.60 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.ವಾಟ್ಸಾಪ್ ವೀಡಿಯೋ ಕರೆ ಮೂಲಕ ಸಂಪರ್ಕಿಸಿ, ಮುಂಬೈಯ ಕೊಲಾ ಪೊಲೀಸ್ ಠಾಣೆಯ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾರೆ. ನಂತರ, ಅಪರಿಚಿತ ವ್ಯಕ್ತಿಯೊಬ್ಬರ ಫೋಟೋ ಕಳುಹಿಸಿ, ಅವರು ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ ಮತ್ತು ಅವರ ಅಕ್ರಮ ಹಣ ವೃದ್ಧರ ಖಾತೆಗೆ ವರ್ಗಾವಣೆಯಾಗಿದೆ ಎಂದು ನಂಬಿಸಿದ್ದಾರೆ. ಈ ಸಂಬಂಧ ವೃದ್ಧರಿಗೆ ವಾರಂಟ್ ಜಾರಿಗೊಳಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾರೆ.
digital arrest in shivamogga
ನಂತರ ನಕಲಿ ವಾರೆಂಟ್‌ನ ಪಿಡಿಎಫ್ ಪ್ರತಿಯನ್ನು ವಾಟ್ಸಾಪ್‌ಗೆ ಕಳುಹಿಸಿದ ವಂಚಕರು, ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕುವುದಾಗಿ ಹೇಳಿ, ಖಾತೆಯಲ್ಲಿರುವ ಹಣವನ್ನು ತಾವು ನಿರ್ದೇಶಿಸುವ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ತನಿಖೆಯಲ್ಲಿ ನಿರಪರಾಧಿ ಎಂದು ಸಾಬೀತಾದರೆ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾರೆ.

ಇದನ್ನು ನಂಬಿದ ವೃದ್ಧರು ಹಂತಹಂತವಾಗಿ ವಂಚಕರು ನೀಡಿದ ಖಾತೆಗೆ ₹12.30 ಲಕ್ಷ ಮತ್ತು ನಂತರ ₹5.30 ಲಕ್ಷ ಸೇರಿ ಒಟ್ಟು ₹17.60 ಲಕ್ಷ ವರ್ಗಾಯಿಸಿದ್ದಾರೆ. ನಂತರ ಅನುಮಾನಗೊಂಡು ಸಂಬಂಧಿಕರನ್ನು ವಿಚಾರಿಸಿದಾಗ ತಾನು ಮೋಸ ಹೋಗಿರುವುದು ವೃದ್ಧರಿಗೆ ಅರಿವಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ರೀತಿಯ ವಂಚನೆಗಳ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರುವುದು ಅತಿ ಮುಖ್ಯ. ನಿಮಗೆ ಇಂತಹ ಯಾವುದೇ ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳು ಬಂದಲ್ಲಿ, ತಕ್ಷಣವೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.