Dasara Holiday Extension : ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 20 ರಿಂದ ಆರಂಭಗೊಂಡು ಇಂದು (ಅಕ್ಟೋಬರ್ 7) ಕೊನೆಗೊಳ್ಳಬೇಕಿದ್ದ ದಸರಾ ರಜೆಯನ್ನು ರಾಜ್ಯ ಸರ್ಕಾರವು ಮತ್ತೆ 10 ದಿನಗಳ ಕಾಲ ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿದೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ದಸರಾ ರಜೆಯನ್ನು ವಿಸ್ತರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘವು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದ ಶಾಲೆಗಳ ದಸರಾ ರಜೆಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಿ ಆದೇಶ ನೀಡಲಾಗಿದೆ.ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 18ರವರೆಗೆ ರಜೆ ಘೋಷಣೆ ಮಾಡಲಾಗಿದೆ
ಈ ನಿರ್ಧಾರಕ್ಕೆ ಮುಖ್ಯ ಕಾರಣವೆಂದರೆ, ರಾಜ್ಯದಲ್ಲಿ ನಡೆಯುತ್ತಿರುವ ಪ್ರಮುಖ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಶಾಲಾ ಶಿಕ್ಷಕರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದು. ಈ ಮೊದಲು ಶಿಕ್ಷಕರನ್ನು ಅರ್ಧ ದಿನ ಸಮೀಕ್ಷೆಗೆ ಮತ್ತು ಅರ್ಧ ದಿನ ಶಾಲೆಗಳಲ್ಲಿ ಪಾಠ-ಬೋಧನೆಗೆ ಬಳಸಿದರೆ, ಎರಡೂ ಕೆಲಸಗಳಿಗೆ ಸರಿಯಾದ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರ ಅಭಿಪ್ರಾಯಪಟ್ಟಿತ್ತು.
ಹೀಗಾಗಿ, ಸಮೀಕ್ಷಾ ಕಾರ್ಯವನ್ನು ಸಮರ್ಪಕವಾಗಿ ಮತ್ತು ಕಾಲಮಿತಿಯೊಳಗೆ ಮುಗಿಸಲು ಅಕ್ಟೋಬರ್ 18 ರವರೆಗೆ ಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸಲಾಗಿದ್ದು, ಈ ಅವಧಿಯಲ್ಲಿ ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ.

