cyber crime ಹೊಸನಗರ: ಯೂಟ್ಯೂಬ್‌ನಲ್ಲಿ ಬಂದ ಹಣ ಹೂಡಿಕೆಯ ಜಾಹೀರಾತನ್ನು ನಂಬಿ, ಸೈಬರ್ ವಂಚಕರ ಬಲೆಗೆ ಬಿದ್ದ ಹೊಸನಗರದ ಮಹಿಳೆಯೊಬ್ಬರು ಬರೋಬ್ಬರಿ 49 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಅತಿ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಸೈಬರ್ ವಂಚಕರು ಈ ಹಣವನ್ನು ಲಪಟಾಯಿಸಿದ್ದಾರೆ.
cyber crime ಘಟನೆ ವಿವರ
ಮಹಿಳೆಯು ತಮ್ಮ ಮೊಬೈಲ್‌ನಲ್ಲಿ ಯೂಟ್ಯೂಬ್ ನೋಡುತ್ತಿದ್ದಾಗ, ಅವರಿಗೆ ಷೇರು ಮಾರುಕಟ್ಟೆ (Stock Trading) ಮಾಹಿತಿ ನೀಡುವ ಜಾಹೀರಾತೊಂದು ಕಾಣಿಸಿಕೊಂಡಿದೆ. ಜಾಹೀರಾತಿನ ಕೆಳಗೆ ನೀಡಲಾಗಿದ್ದ ವಾಟ್ಸಾಪ್ ಗ್ರೂಪ್‌ಗೆ ಸೇರಿಕೊಳ್ಳುವ ಆಯ್ಕೆಯನ್ನು ಮಹಿಳೆ ಕ್ಲಿಕ್ ಮಾಡಿದ್ದಾರೆ.
ನಂತರ ಅವರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ ಸಬ್ಮಿಟ್ ಮಾಡಿದ ತಕ್ಷಣ, ಅವರನ್ನು ಒಂದು ವಾಟ್ಸಾಪ್ ಗುಂಪಿಗೆ ಸೇರಿಸಲಾಗಿದೆ. ಈ ಗುಂಪಿನಲ್ಲಿ ಹೂಡಿಕೆ ಕುರಿತ ಮಾಹಿತಿಯನ್ನು ನೀಡುವ ಒಂದು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಹೆಚ್ಚಿನ ಲಾಭಾಂಶ ನೀಡುವ ಷೇರು ವಹಿವಾಟಿನ ಬಗ್ಗೆ ಸಂದೇಶಗಳ ಮೂಲಕ ಮಾಹಿತಿ ನೀಡಿ, ಹೆಚ್ಚು ಹಣ ಹೂಡಿಕೆ ಮಾಡಲು ಪ್ರೇರೇಪಿಸಲಾಗಿದೆ.ಕಂಪನಿಯ ವ್ಯವಸ್ಥಾಪಕರೆಂದು ಪರಿಚಯಿಸಿಕೊಂಡ ವ್ಯಕ್ತಿ, ವಾಟ್ಸಾಪ್ ಮೂಲಕ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಕಳುಹಿಸಿದ್ದಾರೆ. ಹೆಚ್ಚಿನ ಲಾಭಾಂಶದ ಭರವಸೆಯನ್ನು ನಂಬಿದ ಮಹಿಳೆಯು, ಮೊದಲಿಗೆ ತಮ್ಮ ಪತಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ನಂತರ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 49,15,047 ಹಣವನ್ನು ವಂಚಕರಿಗೆ ವರ್ಗಾಯಿಸಿದ್ದಾರೆ.
ಹಣ ಹೂಡಿಕೆ ಮಾಡಿದ ನಂತರ, ಮಹಿಳೆಯು ತಾವು ಡೌನ್‌ಲೋಡ್ ಮಾಡಿಕೊಂಡಿದ್ದ ಆ್ಯಪ್‌ನಲ್ಲಿ ಹೂಡಿಕೆ ಮಾಡಿದ ಹಣ ಮತ್ತು ಅದರಿಂದ ಬಂದ ಲಾಭಾಂಶ ಸೇರಿ ಮೂರು ಕೋಟಿಗೂ ಅಧಿಕ ಹಣವಿರುವುದಾಗಿ ತೋರಿಸಿದೆ. ಆದರೆ, ಮಹಿಳೆಯು ಹಣವನ್ನು ಹಿಂಪಡೆಯಲು (Withdraw) ಪ್ರಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. ಈ ಕುರಿತು ಕಂಪನಿಯವರನ್ನು ಸಂಪರ್ಕಿಸಿದಾಗ, ಹಣ ವಿತ್‌ಡ್ರಾ ಮಾಡಲು ಶೇ. 15 ರಷ್ಟು ಶುಲ್ಕ ಕಟ್ಟುವಂತೆ ತಿಳಿಸಿದ್ದಾರೆ.
ಆಗ ತಮಗೆ ವಂಚನೆಯಾಗಿರುವುದು ಅರಿತ ಮಹಿಳೆಯು, ತಕ್ಷಣ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

