Cyber crime : ಶಿವಮೊಗ್ಗ: ಮನಿ ಲಾಂಡರಿಂಗ್ ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಬೆದರಿಕೆ ಹಾಕಿ, ಸೈಬರ್ ವಂಚಕರು ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 26 ಲಕ್ಷ ಹಣವನ್ನು ವಂಚಿಸಿದ್ದಾರೆ.

Cyber crime ದೂರುದಾರರಿಗೆ ಮೊದಲು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ತಾವು ಬೆಲಿಕಮ್ಯೂನಿಕೇಷನ್ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ನಟಿಸಿದ್ದಾರೆ. ನಂತರ, ದೂರುದಾರರ ಸಿಮ್ ಕಾರ್ಡ್ ಅನ್ನು ಬ್ಲಾಕ್ ಮಾಡುವುದಾಗಿ ಹೆದರಿಸಲಾಗಿದೆ. ಇದರ ಬೆನ್ನಲ್ಲೇ, ಅವರ ಬಳಿ ಇರುವ ಬಹು ಸಿಮ್‌ಗಳಿಂದ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಮನಿ ಲಾಂಡರಿಂಗ್ ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಗಂಭೀರ ಆರೋಪ ಹೊರಿಸಲಾಗಿದೆ. ನಂತರ, ಮತ್ತೊಂದು ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ವಿಡಿಯೋ ಕರೆ ಬಂದಿದೆ. ಈ ಕರೆಯಲ್ಲಿ ಮಾತನಾಡಿದ ವ್ಯಕ್ತಿ, ತಾನು ಮುಂಬೈನ ಕೋಲಾಬಾ ಪೊಲೀಸ್ ಠಾಣೆಯಿಂದ ತನಿಖಾ ಅಧಿಕಾರಿಯೆಂದು ನಟಿಸಿ, ಬಂಧನದ ವಾರಂಟ್ ಮತ್ತು ಅರೆಸ್ಟ್ ಮಾಡುವ ಬೆದರಿಕೆ ಹಾಕಿದ್ದಾನೆ.
ತದನಂತರ, ಮತ್ತೊಬ್ಬ ವಂಚಕ ತಾನು ಇಡಿ ಅಧಿಕಾರಿಯೆಂದು ಪರಿಚಯಿಸಿಕೊಂಡು, ಜಡ್ಜ್ ರವರೊಂದಿಗೆ ಆನ್‌ಲೈನ್ ಮೀಟಿಂಗ್ ಮಾಡಿಸುವುದಾಗಿ ತಿಳಿಸಿದ್ದಾನೆ. ವಿಡಿಯೋ ಕರೆಯಲ್ಲಿ ಭಾಗಿಯಾದ ನ್ಯಾಯಾಧೀಶರ ಸೋಗಿನ ವ್ಯಕ್ತಿ, ತನಿಖೆಗಾಗಿ ಎಫ್‌ಡಿ ಮತ್ತು ಉಳಿತಾಯ ಖಾತೆಯಲ್ಲಿರುವ ಹಣವನ್ನು ‘ಸರ್ಕಾರಿ ಖಜಾನೆ’ ಖಾತೆಗೆ ವರ್ಗಾವಣೆ ಮಾಡುವಂತೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸೂಚಿಸಿದ್ದಾರೆ. ಸೈಬರ್ ವಂಚಕರು ಹಣ ವರ್ಗಾವಣೆಗೆ ನಿರ್ದೇಶಿಸಿ, “ಬ್ಯಾಂಕ್ ಖಾತೆಯ ವ್ಯವಹಾರ ಸರಿಯಾಗಿದ್ದರೆ, ನಿಮ್ಮ ಹಣವು ವಾಪಸ್ ಬರುತ್ತದೆ, ಇಲ್ಲದಿದ್ದರೆ ಬರುವುದಿಲ್ಲ” ಎಂದು ನಂಬಿಸಿದ್ದಾರೆ. ಬ್ಯಾಂಕ್‌ನಲ್ಲಿ ಹಣ ವರ್ಗಾವಣೆ ಬಗ್ಗೆ ಪ್ರಶ್ನಿಸಿದರೆ, “ಪಾರ್ಟನರ್‌ಶಿಪ್‌ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದೇನೆ” ಎಂದು ಹೇಳುವಂತೆ ವಂಚಕರು ಸಲಹೆ ನೀಡಿದ್ದಾರೆ.
ವಂಚಕರ ಸೂಚನೆಯಂತೆ, ಪೀಡಿತ ವ್ಯಕ್ತಿಯು ದಿನಾಂಕ: 03-10-2025 ಮತ್ತು 04-10-2025 ರಂದು ಆರ್‌ಟಿಜಿಎಸ್ (RTGS) ಮೂಲಕ ಹಣವನ್ನು ವರ್ಗಾಯಿಸಿದ್ದಾರೆ. ತಾನು ನಿರಪರಾಧಿ ಎಂದು ಸಾಬೀತಾದರೆ ಹಣ ವಾಪಸ್ ಬರುತ್ತದೆ ಎಂದು ನಂಬಿಸಿ ಭದ್ರತಾ ಬಾಂಡ್ ಸಹ ನೀಡಿದ್ದಾರೆ. ಈ ರೀತಿ, ಪೊಲೀಸ್, ಇಡಿ ಅಧಿಕಾರಿ ಹಾಗೂ ನ್ಯಾಯಾಧೀಶರ ಸೋಗಿನಲ್ಲಿ ವಂಚಕರು ನಡೆಸಿದ ನಂಬಿಕೆ ದ್ರೋಹದಿಂದ ಪೀಡಿತ ವ್ಯಕ್ತಿಯು ಒಟ್ಟು 26,00,000 ಹಣವನ್ನು ಮೋಸದಿಂದ ಕಳೆದುಕೊಂಡಿದ್ದಾರೆ. ನಂತರ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Cyber crime


