cyber crime : ಶಿವಮೊಗ್ಗ : ಸುಲಭವಾಗಿ ಹಣ ಗಳಿಸುವ ಆಮಿಷವೊಡ್ಡಿ, ಟೆಲಿಗ್ರಾಂ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಗಳ ಗುಂಪೊಂದು ನಗರದ ಮಹಿಳೆಯೊಬ್ಬರಿಂದ ಬರೋಬ್ಬರಿ 7,20,735.70 ಹಣವನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
cyber crime ಘಟನೆಯ ವಿವರ:
ಶಿವಮೊಗ್ಗದ ಮಹಿಳೆಯೊಬ್ಬರಿಗೆ ಟೆಲಿಗ್ರಾಂನಲ್ಲಿ ಅಪರಿಚಿತ ವ್ಯಕ್ತಿಗಳು ಸಂದೇಶ ಕಳುಹಿಸಿದ್ದು, ನಾವು ಅಮೇಜಾನ್ ನಂತಹ ಪ್ರಸಿದ್ಧ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿದ್ದು, ಪ್ರೀಪೇಯ್ಡ್ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಶೇ. 30ರಷ್ಟು ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿದ್ದರು. ಇದನ್ನು ನಂಬಿದ ಮಹಿಳೆ ಮೊದಲಿಗೆ ವಂಚಕರು ಹೇಳಿದ ಯುಪಿಐ ಐಡಿಗಳಿಗೆ ಸ್ವಲ್ಪ ಹಣ ಹಾಕಿದ ನಂತರ, ಟಾಸ್ಕ್ ಪೂರ್ಣಗೊಳಿಸಿದ್ದಕ್ಕೆ ಲಾಭಾಂಶದ ಹಣವನ್ನು ವಂಚನೆಗೊಳಗಾದವರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಈ ಮೂಲಕ ವಿಶ್ವಾಸ ಗಳಿಸಿದರು.
ನಂತರ ಅಪರಿಚಿತರು ಒಂದು ಲಿಂಕ್ ಕಳುಹಿಸಿ, ಅದನ್ನು ಕ್ಲಿಕ್ ಮಾಡಿದಾಗ ಹೆಚ್ಚಿನ ಲಾಭಾಂಶದ ಹಣ ಕಾಣುವಂತೆ ಮಾಡಿದ್ದಾರೆ. ಇದನ್ನು ನಂಬಿದ ಮಹಿಳೆ ಹೆಚ್ಚು ಲಾಭದ ಆಸೆಯಿಂದ ಹಂತ ಹಂತವಾಗಿ ಅವರು ನೀಡಿದ ವಿವಿಧ ಯುಪಿಐ ಐಡಿಗಳು ಹಾಗೂ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ. ವಂಚನೆಗೆ ಒಳಗಾದವರು ತಮ್ಮ ಹಣವನ್ನು ವಾಪಸ್ ಕೇಳಿದಾಗ, ವಂಚಕರು ನಿಮ್ಮ ಟ್ರೇಡಿಂಗ್ ಖಾತೆಯ ಸಿಬಿಲ್ ಸ್ಕೋರ್ ಕಡಿಮೆಯಾಗಿದೆ’ ಅಥವಾ ‘ಟಾಸ್ಕ್‌ನಲ್ಲಿ ತಪ್ಪು ಆಗಿದೆ’ ಎಂದು ಸಬೂಬು ಹೇಳಿ ಮತ್ತೆ ಹಣ ಹಾಕುವಂತೆ ಮಾಡಿದ್ದಾರೆ. ಕೊನೆಗೆ ಮಹಿಳೆಯ ಬಳಿ ಇದ್ದ ಸಂಪೂರ್ಣ ಹಣ ಖಾಲಿಯಾದಾಗ, ತಾನು ಮೋಸ ಹೋಗಿರುವುದು ಅರಿವಾಗಿದೆ.
ಕೂಡಲೇ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಚರ್ಚಿಸಿ, ಹಣ ವಾಪಸ್ ಬರುವ ನಿರೀಕ್ಷೆಯಲ್ಲಿ ಸ್ವಲ್ಪ ದಿನ ಕಾದು, ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳ ಗುಂಪು ಟೆಲಿಗ್ರಾಂ ಗ್ರೂಪ್‌ಗಳಿಗೆ ಸೇರಿಸುವ ಮೂಲಕ ಮತ್ತು ಟ್ರೇಡಿಂಗ್ ಎಂದು ನಂಬಿಸಿ ಒಟ್ಟು 7,20,735.70 ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆ ಶಿವಮೊಗ್ಗದ ಸಿ ಇ ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

