ವಿಮಾ ಸೌಲಭ್ಯ ನೀಡುವಲ್ಲಿ ಸೇವಾ ನ್ಯೂನತೆ ಎಸಗಿದ ಚೆನ್ನೈ ಮತ್ತು ಶಿವಮೊಗ್ಗದ ಚೋಳ ಎಂಎಸ್ ಜನರಲ್ ಇನ್ಸೂರನ್ಸ್ ಕಂಪೆನಿಗೆ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತಕ್ಕ ಶಾಸ್ತಿ ಮಾಡಿದೆ. ದ್ವಿಚಕ್ರ ವಾಹನ ಸುಟ್ಟು ಹೋದರೂ ವಿಮಾ ಮೊತ್ತ ನೀಡಲು ನಿರಾಕರಿಸಿದ್ದ ಕಂಪೆನಿಗೆ, ದೂರುದಾರರಿಗೆ ಸೂಕ್ತ ಪರಿಹಾರ ಹಾಗೂ ಬಡ್ಡಿ ಪಾವತಿಸುವಂತೆ ಆಯೋಗವು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
Court Orders ಪ್ರಕರಣದ ಹಿನ್ನೆಲೆ
ಶಿವಮೊಗ್ಗದ ಲಷ್ಕರ್ ಮೊಹಲ್ಲಾ ನಿವಾಸಿ ಇರ್ಫಾನ್ ಪಾಷ ಎಂಬುವವರು ತಮ್ಮ ಸುಜುಕಿ ಎಕ್ಸೆಸ್ ದ್ವಿಚಕ್ರ ವಾಹನಕ್ಕೆ ಚೋಳ ಎಂಎಸ್ ಕಂಪೆನಿಯಲ್ಲಿ ವಿಮೆ ಮಾಡಿಸಿದ್ದರು. ದುರದೃಷ್ಟವಶಾತ್, 2024ರ ಅಕ್ಟೋಬರ್ ತಿಂಗಳಿನಲ್ಲಿ ಇವರ ವಾಹನಕ್ಕೆ ಬೆಂಕಿ ತಗುಲಿ ಸಂಪೂರ್ಣವಾಗಿ ಭಸ್ಮವಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ವಾಹನದ ಎಲ್ಲಾ ಅಗತ್ಯ ದಾಖಲೆಗಳನ್ನು ವಿಮಾ ಕಂಪೆನಿಗೆ ಸಲ್ಲಿಸಿ ವಿಮೆ ಮೊತ್ತಕ್ಕೆ ಇರ್ಫಾನ್ ಮನವಿ ಮಾಡಿದ್ದರು. ಆದರೆ, ಕಂಪೆನಿಯು ಈ ಮನವಿಯನ್ನು ಪುರಸ್ಕರಿಸದೆ ವಿಮೆ ಮೊತ್ತ ಪಾವತಿಸಲು ಸತಾಯಿಸಿತ್ತು. ಇದರಿಂದ ನೊಂದ ಇರ್ಫಾನ್ ಪಾಷ ಅವರು ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
Court Orders ದೂರು ದಾಖಲಿಸಿಕೊಂಡ ಆಯೋಗವು ವಾದ-ಪ್ರತಿವಾದಗಳನ್ನು ಆಲಿಸಿ ವಿಮಾ ಕಂಪೆನಿಯು ಸೇವಾ ನ್ಯೂನತೆ ಎಸಗಿರುವುದು ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟ ಹಿನ್ನೆಲೆಯಲ್ಲಿ, ಆಯೋಗವು ದೂರುದಾರರ ಪರವಾಗಿ ತೀರ್ಪು ನೀಡಿದೆ. ವಾಹನದ ಐಡಿವಿ ಮೌಲ್ಯವಾದ 88,053 ರೂಪಾಯಿಗಳನ್ನು ಹಾಗೂ ದೂರಿನ ಖರ್ಚುವೆಚ್ಚವಾಗಿ 10,000 ರೂಪಾಯಿಗಳನ್ನು ವಾರ್ಷಿಕ ಶೇ. 9ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಲಾಗಿದೆ.
ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಆದೇಶ ನೀಡಿದ 45 ದಿನಗಳೊಳಗಾಗಿ ಈ ಹಣವನ್ನು ಪಾವತಿಸಬೇಕು, ಒಂದು ವೇಳೆ ವಿಫಲವಾದರೆ ವಾರ್ಷಿಕ ಶೇ. 12ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು ಎಚ್ಚರಿಕೆ ನೀಡಿದೆ. ಗ್ರಾಹಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಈ ತೀರ್ಪು ಒಂದು ಮೈಲಿಗಲ್ಲಾಗಿದೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.

