Consumer complaint 24 ರೂಪಾಯಿ ಹೆಚ್ಚಿಗೆ ಪಡೆದಿದ್ದಕ್ಕಾಗಿ ಕಂಪನಿಗೆ 25 ಸಾವಿರ ರೂ. ದಂಡ
Consumer complaint ಶಿವಮೊಗ್ಗ :ಗ್ರಾಹಕರಿಂದ ಗರಿಷ್ಠ ಚಿಲ್ಲರೆ ಬೆಲೆ (MRP) ಗಿಂತ 24 ರೂಪಾಯಿ ಹೆಚ್ಚು ಹಣ ಪಡೆದಿದ್ದಕ್ಕಾಗಿ, ಬೆಂಗಳೂರಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಚಹಾ ಪುಡಿ ಪೂರೈಸಿದ ಖಾಸಗಿ ಸಂಸ್ಥೆಗೆ 25,000 ರೂಪಾಯಿ ದಂಡ ವಿಧಿಸಿದೆ.
ಶಿವಮೊಗ್ಗದ ನಿವಾಸಿ ಮೆಹಬೂಬ್ ಮುದಾಸ್ಸಿರ್ ಅವರು 2024ರಲ್ಲಿ ಆನ್‌ಲೈನ್‌ನಲ್ಲಿ ಮೂಲಕ ಒಂದು ಕೆ.ಜಿ. ಚಹಾ ಪುಡಿಯನ್ನು ಖರೀದಿಸಿದ್ದರು. ಉತ್ಪನ್ನದ ಬೆಲೆ 849 ಮತ್ತು ಸಾಗಣೆ ವೆಚ್ಚ 41 ಸೇರಿದಂತೆ ಒಟ್ಟು 890 ಪಾವತಿಸಿದ್ದರು. ಆದರೆ, ಚಹಾಪುಡಿ ಪ್ಯಾಕೇಜ್ ಮೇಲೆ ನಮೂದಾಗಿದ್ದ ಎಂಆರ್‌ಪಿ 825 ಆಗಿತ್ತು. ಅಂದರೆ, ಎಂಆರ್‌ಪಿಗಿಂತ ₹24 ಹೆಚ್ಚುವರಿಯಾಗಿ ವಸೂಲಿ ಮಾಡಲಾಗಿತ್ತು.
ಈ ಕುರಿತು ಮುದಾಸ್ಸಿರ್ ಅವರು ಚಹಾಪುಡಿ ಪೂರೈಸಿದ್ದ ಸಂಸ್ಥೆಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬರದ ಕಾರಣ, ಅವರು ಬೆಂಗಳೂರಿನಲ್ಲಿರುವ ತಾವು ಖರೀದಿಸಿದ್ದ ಆನ್ಲೈನ್ ಕಂಪನಿಯ ಸಿಇಒ, ಹಿರಿಯ ವ್ಯವಸ್ಥಾಪಕರು ಹಾಗೂ ದೆಹಲಿಯ ವಿಜಿ ಫುಡ್ ಮತ್ತು ಕೆಟರರ್ಸ್ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.
ದೂರು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗವು, ಮುದಾಸ್ಸಿರ್ ಅವರ ವಾದವನ್ನು ಪುರಸ್ಕರಿಸಿತು. ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಮತ್ತು ಸದಸ್ಯ ಬಿ.ಡಿ. ಯೋಗಾನಂದ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿತು. ಆನ್ಲೈನ್ ಸಂಸ್ಥೆಯು ದೂರುದಾರರಿಗೆ 890 ಅನ್ನು 2024ರ ಸೆಪ್ಟೆಂಬರ್ 19 ರಿಂದ ವಾರ್ಷಿಕ 9% ಬಡ್ಡಿಯೊಂದಿಗೆ ಹಿಂದಿರುಗಿಸಬೇಕು. ಇಲ್ಲವಾದರೆ, ವಾರ್ಷಿಕ 12% ಬಡ್ಡಿಯನ್ನು ಸೇರಿಸಿ ಪಾವತಿಸಬೇಕಾಗುತ್ತದೆ. ದೂರುದಾರರಿಗೆ ಆದ ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಗಳಿಗಾಗಿ 45 ದಿನಗಳ ಒಳಗಾಗಿ 25,000 ಪಾವತಿಸಬೇಕು. ತಪ್ಪಿದರೆ, ಈ ಮೊತ್ತಕ್ಕೂ ವಾರ್ಷಿಕ 12% ಬಡ್ಡಿಯನ್ನು ಸೇರಿಸಿ ಪಾವತಿಸಬೇಕಾಗುತ್ತದೆ ಎಂಬ ಆದೇಶವನ್ನು ಹೊರಡಿಸಿತು.