KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’
ಶಿವಮೊಗ್ಗ: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಜ್ವಲಂತವಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಅದಕ್ಕೆ ಪರಿಹಾರ ಕಂಡುಹಿಡಿಯಲು ಮಾಡಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲು ಅ. ೩೧ ರಂದು ಬೆಂಗಳೂರಿನಲ್ಲಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್‌ಕುಮಾರ್ ಮರೋಳಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ೩೧ರಂದು ಬೆಂಗಳೂರಿನ ವಿಜಯನಗರದ ಆದಿ ಚುಂಚನಗಿರಿ ಸಭಾಂಗಣದಲ್ಲಿ ಜನಪರ ಒಕ್ಕೂಟದ ಈ ಸಮಾಲೋಚನಾ ಸಭೆ ಆಯೋಜಿಸಲಾಗಿದೆ. ಸಂಘಟನೆಯ ಹೋರಾಟದ ದಿಕ್ಕು ದೆಸೆಯ ಚರ್ಚೆ,ಧ್ವಜ ಮತ್ತು ಲೋಗೋ ಲೋಕಾರ್ಪಣೆ ನಡೆಯಲಿದೆ ಎಂದರು.
ಮಲೆನಾಡು ಕರಾವಳಿ ಜನಪರ ಒಕ್ಕೂಟದ ವತಿಯಿಂದ ನಮ್ಮನಾಳುವ ಸರ್ಕಾರಗಳನ್ನು ಎಚ್ಚರಿಸುವ ಸಂವಿಧಾನ ಬದ್ಧ ಹೋರಾಟವು ಸರ್ವ ಧರ್ಮ ಮನೋಭಾವದ ಚಿಂತನೆಯ ಅಡಿಗಲ್ಲು ಆಗಲಿದೆ ಎಂದರು.
ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಮಸ್ಯೆಗಳು ಏಕರೂಪದಲ್ಲಿದೆ. ಮುಖ್ಯವಾಗಿ ಈ ಎಲ್ಲಾ ಜಿಲ್ಲೆಗಳಲ್ಲೂ ಭೂಹಕ್ಕು ಸಮಸ್ಯೆ ನಿರಂತರವಾಗಿದೆ. ಕಲ್ಯಾಣ ಕರ್ನಾಟದ ಸಮಸ್ಯೆಗಳನ್ನು ಸರ್ಕಾರಗಳು ಎಚ್ಚೆತ್ತುಕೊಂಡಂತೆ ನಮ್ಮ ಮಲೆನಾಡು, ಕರಾವಳಿ ಭಾಗದ ಸಮಸ್ಯೆಗಳನ್ನು ಬಗೆಹರಿಸಿ ಸ್ಪಂದಿಸುವಂತೆ ಮಾಡುವುದು ಈ ಹೋರಾಟದ ಗುರಿ ಎಂದರು.
ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದ್ದರೂ ಅವು ಯಾವುವೂ ಜಾರಿಯಾಗುತ್ತಿಲ್ಲ. ವಿವಿಧ ರೀತಿಯ ಪರಿಸರ ಕೇಂದ್ರಿತ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಮಲೆನಾಡಿನಲ್ಲಿ ಹೆಬ್ಬಾಗಿಲಿನಂತೆ ತೆರೆದಿದ್ದರೂ ಅದು ಬಳಕೆಯಾಗುತ್ತಿಲ್ಲ. ಒಬ್ಬ ಆಟೋ ಚಾಲಕನ ಸಮಸ್ಯೆಯಿಂದ ಹಿಡಿದು ರೈತರಾದಿಯಾಗಿ ಹಲವು ಸಮಸ್ಯೆಗಳು ಇವೆ. ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಮಲೆನಾಡಿನ ತರಕಾರಿ ಬೆಳೆಗಳಿಗೆ ಜಾಗತಿಕ ಮನ್ನಣೆ,ಹೈಕೋರ್ಟ್ ಪೀಠ, ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿ, ಕೃಷಿ ಸಮಸ್ಯೆ,ಕಲ್ಯಾಣ ಕರ್ನಾಟಕದಂತೆ ಮಲೆನಾಡು ಕರ್ನಾಟಕ ರೂಪಿಸುವ ಬಗ್ಗೆ, ಮಲೆನಾಡಿನಲ್ಲಿ ವಿಶೇಷ ಕೃಷಿ ವಲಯದ ಬಗ್ಗೆ ಹೀಗೆ ಹಲವು ವಿಚಾರಗಳ ಹಕ್ಕೊತ್ತಾಯ ನಮ್ಮ ಸಂಘಟನೆಯ ಹೋರಾಟವಾಗಲಿದೆ ಎಂದರು.
ಈ ಹೋರಾಟಕ್ಕೆ ಜನ ಕಲ್ಯಾಣದ ಮುಖ್ಯ ವಿಷಯವಾಗಿದ್ದು,ಜನಸಾಮಾನ್ಯರಾಗಲಿ,ಯಾವುದೇ ರಾಜಕೀಯ ಪಕ್ಷದವರಾಗಲಿ ಮುಕ್ತವಾಗಿ ಬರಬಹುದು, ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತ ಹೋರಾಟ ಇದಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ನ್ಯಾಯವಾದಿ ಕೆ ಪಿ ಶ್ರೀಪಾಲ್, ಅನಿಲ್ ಹೊಸಕೊಪ್ಪ, ಫಾದರ್ ವೀರೇಶ್ ಮೊರಾಸ್, ನವೀನ್ ಕರುವಾನೆ, ಕೊರೋಡಿ ಕೃಷ್ಣಮೂರ್ತಿ, ಸುರೇಶ್ ಅರಸಾಳು, ಶ್ರೀಜಿತ್, ನಿವೃತ್ತ ಡಿಎಸ್ಪಿ ಎಂ ಓ ಶಿವಕುಮಾರ್, ನಿವೃತ್ತ ಡಿಎಫ್ ಓ ರವಿಕುಮಾರ್ ಮೊದಲಾದವರಿದ್ದರು.
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ