SHIVAMOGGA | Jan 25, 2024 | ಶಿವಮೊಗ್ಗ ಕೋರ್ಟ್ ಲೈಂಗಿಕ ಕಿರುಕುಳದ ಪೋಸ್ಕೋ ಕೇಸ್ ನಲ್ಲಿ ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಿದೆ.
20 ವರ್ಷ ಶಿಕ್ಷೆ
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯಷ್ಟೆ ಅಲ್ಲದೆ ₹2.20 ಲಕ್ಷ ದಂಡವನ್ನು ಸಹ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ 6 ತಿಂಗಳು ಸಾದಾ ಸೆರೆವಾಸ ಶಿಕ್ಷೆ ನೀಡಿ ಆದೇಶಿಸಿದೆ. ದಂಡದ ಮೊತ್ತದಲ್ಲಿ ₹2 ಲಕ್ಷವನ್ನು ಪರಿಹಾರವಾಗಿ ಯುವತಿಗೆ ಪಾವತಿಸುವಂತೆ ಸೂಚಿಸಿದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ
2021ರಲ್ಲಿ ದಾವಣಗೆರೆ ಮೂಲದ 27 ವರ್ಷದ ಯುವಕ, 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಯುವತಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆಗಿನ ಭದ್ರಾವತಿ ಪೊಲೀಸ್ ಠಾಣೆಯ ಪಿಐ ಚೈತನ್ಯ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಹರಿಪ್ರಸಾದ್ ಮತ್ತು ಶ್ರೀಧರ್ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜೆ.ಎಸ್.ಮೋಹನ್, ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.
