Bengaluru Mans Life Saved at Jog Falls from si ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ತಾಣ ಜೋಗ ಜಲಪಾತ. ಈ ತಾಣವನ್ನು ನೋಡಲೆಂದೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಾರೆ. ಈಗಂತೂ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೋಗದಲ್ಲಿ ಹಾಲ್ಗಡಲೇ ಸೃಷ್ಟಿಯಾಗಿದ್ದು, ಕಾರ್ಗಲ್ಲಿನ ಕೊರಕಲುಗಳ ನಡುವೆ ಶ್ವೇತ ಜಲರಾಶಿ ದುಮ್ಮಿಕ್ಕುವ ದೃಶ್ಯ, ಜೀವನ ಚೈತನ್ಯವನ್ನೇ ನೀಡುತ್ತದೆ.
ಇದರ ನಡುವೆ ಮಾಡಿಕೊಂಡ ಅಥವಾ ವಿಧಿ ನೀಡಿದ ಜಂಜಾಟದಲ್ಲಿ ಬದುಕು ಕಗ್ಗಂಟಾಗಿಸಿಕೊಂಡು ಜೀವನ ಉತ್ಸಾಹವನ್ನು ಕಳೆದು ಸಾವೇ ಉತ್ತಮ ಎಂದು ಸೋತು ಜೋಗದ ಶರಾವತಿಯಲ್ಲಿ ಜೀವ ಕಳೆದುಕೊಳ್ಳಲು ಕೆಲವರು ಬರುತ್ತಿದ್ದಾರೆ. ಅಂತಹವರನ್ನ ಇಲ್ಲಿನ ಸ್ಥಳೀಯರು, ಅವರ ಹಾವಭಾವಗಳಲ್ಲಿಯೇ ಗಮನಿಸಿ ಜೀವ ಉಳಿಸುತ್ತಾರೆ. ಹೀಗೆ ಸ್ಥಳೀಯರ ಮುಂಜಾಗ್ರತೆಯಿಂದ ಎಲ್ಲಿಂದಲೋ ಬಂದವರು ಜೀವ ಉಳಿದ ಬಗ್ಗೆ ಹಲವಾರು ಕಥೆಯಿದೆ. ಅಂತಹ ಒಂದು ಕಥೆ ಇವತ್ತಿನ ಮಲೆನಾಡು ಟುಡೆ ವಾರದ ಸ್ಟೋರಿಯಲ್ಲಿದೆ.
ಆಗಸ್ಟ್ 27, ಗಣಪತಿ ಹಬ್ಬ. ಎಲ್ಲರು ಗಣಪನನ್ನು ಮನೆಗೆ ತಂದು ಹಬ್ಬ ಆಚರಿಸುತ್ತಿದ್ದರೇ, ಅತ್ತ ಜೋಗಕ್ಕೆ ಬಂದಿದ್ದ ಬೆಂಗಳೂರು ಮೂಲದ ಉದ್ಯಮಿ ಜೀವಕ್ಕೆ ಕೊನೆಯ ವಿದಾಯ ಹೇಳಲು ಮುಂದಾಗಿದ್ದ. ಬೇಸತ್ತ ಜೀವನದಲ್ಲಿ, ಕೈ ಸೋತಿದ್ದ ಆತನಿಗೆ ವಿಧಿಯು ಸಾಕಷ್ಟು ತೊಂದರೆಗಳನ್ನು ಬೇಧಿಸಲಾಗದ ಸವಾಲಾಗಿ ನೀಡಿತ್ತು. ಹಾಗೂ ಬಿದ್ದ ಏಟಿಗೆ ಜೀವ ಹೋಗಿದ್ದೆ ಗೊತ್ತಾಗಬಾರದು ಅಂತಾ ಜೋಗದ ಸೂಸೈಡ್ ಪಾಯಿಂಟ್ಗಳನ್ನು ಹುಡುಕಿಕೊಂಡು ಬಂದಿದ್ದ. ಹೀಗೆ ಬಂದವನು ಕೊನೆಗೆ ಮಲೆನಾಡಿಗರ ಔದಾರ್ಯಕ್ಕೆ ಕಣ್ತುಂಬಿಕೊಂಡು ತನ್ನ ಮನೆ ಬೆಂಗಳೂರನ್ನು ಸೇರಿದ್ದ.
ಬೆಂಗಳೂರಿನ ಉದ್ಯಮಿ ಗಣೇಶ (ಇದು ನಿಜ ಹೆಸರಲ್ಲ) ಜೋಗಕ್ಕೆ ಬರುವ ಮೊದಲು 20 ದಿನಗಳ ಹಿಂದೆ ಬೆಂಗಳೂರು ಬಿಟ್ಟಿದ್ದ. ಬದುಕಿಗೆ ವಿಮುಖನಾಗಿ ವಿವಿಧ ಕಡೆಯಲ್ಲಿ ಸುತ್ತಾಡಿ ಬೀದಿ ಬದಿಯಲ್ಲಿ ಮಲಗಿ ಎದ್ದು, ದಾರಿ ಕಂಡ ಕಡೆಗಳಲ್ಲಿ ಓಡಾಡಿದ್ದ. ಆನಂತರ ಮನೆಯಿಂದ ತಂದಿದ್ದ ಸಣ್ಣ ಬ್ಯಾಗ್ನೊಂದಿಗೆ ಜೋಗಕ್ಕೆ ಬಂದಿಳಿದಿದ್ದ. ಅಲ್ಲಿ ಆಟೋ ಚಾಲಕನೊಬ್ಬನ ಬಳಿ ಜೋಗ ಜಲಪಾತದ ಬಗ್ಗೆ ವಿಚಾರಿಸಿದ್ದ, ಈತನ ಮಾತುಕತೆ ಕೇಳಿದ ತಕ್ಷಣವೇ ಪ್ರತಿನಿತ್ಯ ಜೋಗಕ್ಕೆ ಬರುವ ಸಾವಿರಾರು ಪ್ರವಾಸಿಗರನ್ನು ಕಂಡಿದ್ದ ಆಟೋ ಚಾಲಕನಿಗೆ ಅನುಮಾನ ಮೂಡಿದೆ.

ಅಲ್ಲದೆ ಜೋಗದಲ್ಲಿ ಎತ್ತರದ ಸ್ಟಾಟ್ಗಳು ಎಲ್ಲಿದೆ ಎಂದು ಕೇಳಿದ್ದ ಗಣೇಶನ ಮಾತು, ಇವ ಜೋಗ ನೋಡಲಿಕ್ಕೆ ಬಂದವನಲ್ಲ, ಜೋಗದಲ್ಲಿ ಬೀಳಲಿಕ್ಕೆ ಬಂದವನು ಎಂಬುದು ಖಾತರಿಯಾಗಿತ್ತು. ಹಾಗಾಗಿ ತಕ್ಷಣವೇ ಕಾರ್ಗಲ್ನಲ್ಲಿ ಎಸ್ಐ ಎಚ್ ಎನ್ ನಾಗರಾಜ್ರಿಗೆ ಫೋನ್ ಮಾಡಿ, ಸಾರ್ ವಿಷಯ ಹೀಗಿಗೆ, ಈಥರಕ್ಕೆ ಈಥರ ಎಂದು ತಿಳಿಸಿದ್ದ. ಆ ಕಡೆಯಲ್ಲಿ ಮಾಹಿತಿ ಕೇಳಿದ ನಾಗರಾಜ್ರಿಗೆ ವಿಷಯ ಅರ್ಥವಾಗಿತ್ತು.
ಕ್ಷಣವೂ ವ್ಯರ್ಥ ಮಾಡದ ಎಸ್ಐ ನಾಗರಾಜ್, ಬೆಂಗಳೂರಿನಿಂದ ಬಂದಿದ್ದ ಗಣೇಶನನ್ನು ಸ್ಟೇಷನ್ಗೆ ಕರೆದೊಯ್ದರು. ಅಲ್ಲಿ ಊಟ ಮಾಡಿ ಬ್ರದರ್ ಎಂದು ಆತ್ಮೀಯವಾಗಿ ತಿಳಿಸಿದರು. ಆನಂತರ, ನೀವಿಲ್ಲಿಗೆ ಏಕೆ ಬಂದಿದ್ದೀರಿ ಎಂಬುದು ಗೊತ್ತಾಗಿದೆ. ನಿಮ್ಮೆ ಸಮಸ್ಯೆ ಏನು? ನನ್ನೊಂದಿಗೆ ನಿಮ್ಮ ದುಃಖ ನೋವು ಭಾವನೆಗಳನ್ನು ಹಂಚಿಕೊಳ್ಳಬಹುದು. ನಿಮ್ಮ ಮಾತು ಕೇಳಲು ನಾನು ಸಿದ್ಧನಿದ್ದೇನೆ ಎಂದರು. ಸಾಮಾನ್ಯವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ಕಿವಿ ಬೇಕಿರುತ್ತದೆ. ಆದರೆ ಬಹುತೇಕ ಸಂದರ್ಬದಲ್ಲಿ ಸಮಸ್ಯೆಗಳನ್ನು ಹೇಳಿಕೊಂಡಾಗ, ಅದನ್ನು ಆಡಿಕೊಳ್ಳುವ ಅಥವಾ ಹೇಳಿದವರ ಸಮಸ್ಯೆಗಿಂತಲೂ ತಮ್ಮದು ದೊಡ್ಡ ಸಮಸ್ಯೆ ಎನ್ನುವಂತಹ ಮಾತುಗಳೇ ಎದುರಿಗೆ ಬರುತ್ತದೆ. ಆದರೆ ಇಲ್ಲಿ ಎಸ್ಐ ಜಸ್ಟ್ ಕಿವಿಯಾಗಿದ್ದರು. ಗುಡಿಯಲ್ಲಿ ಭಕ್ತನ ಮೌನ ಪ್ರಾರ್ಥನೆಯನ್ನು ಕೇಳುವ ದೇವರಂತೆ.
Bengaluru Mans Life Saved at Jog Falls from si
ಯಾವಾಗ ಎಸ್ಐಯವರು ಒಬ್ಬ ಮಿತ್ರನಂತೆ ಮಾತನಾಡಿಸಿದರೋ, ಗಣೇಶ್ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾನೆ. ವ್ಯಾಪಾರದಲ್ಲಿ ನಷ್ಟ, ಸಂಸಾರದಲ್ಲಿ ಬಿರುಕು, ತಂದೆ ತಾಯಿಯ ಅನಾರೋಗ್ಯ, ಬದುಕಿನ ಸವಾಲು ಕಷ್ಟ ನೋವಿನ ಬಗ್ಗೆ ದುಃಖ ತೋಡಿಕೊಂಡಿದ್ದಾನೆ.
ಸಾಲಗಾರ ಕಾಟ ವಿಪರೀತವಾಗಿ ಖಿನ್ನತೆಗೊಳಗಾಗಿ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದೇನೆ ಎಂದು 40 ವರ್ಷದ ವ್ಯಕ್ತಿ ಹೇಳಿದಾಗ ಆತನಿಗೆ ದೈರ್ಯ ತುಂಬಿದ ಎಸ್ಐ, ಆತನಿಂದಲೇ ಅವರ ತಾಯಿಯ ನಂಬರ್ ಪಡೆದು ಫೋನ್ ಮಾಡಿ ತಮ್ಮ ಮಗ ಹೀಗೊಂದು ನಿರ್ಧಾರ ಮಾಡಿದ್ದಾನೆ. ಆತನಿಗೆ ದೈರ್ಯ ತುಂಬಿ ಎಂದು ಸಲಹೆ ಕೊಟ್ಟು ಗಣೇಶನ ಜೊತೆ ಮಾತನಾಡಿಸಿದ್ದಾರೆ.
ತಾಯಿಯ ಧ್ವನಿ ಗಣೇಶನ ಮನಸ್ಸನ್ನ ಬದಲಾಯಿಸಿದೆ. ಅಂತಿಮವಾಗಿ 2 ಸಾವಿರ ರೂಪಾಯಿ ಕೊಟ್ಟು, ಬೆಂಗಳೂರು ಬಸ್ ಹತ್ತಿಸಿ ಗಣೇಶನನ್ನು ಬೀಳ್ಗೊಟ್ಟಿದ್ದರು ಎಸ್ಐ. ಹೀಗೆ ಬೆಂಗಳೂರು ಸೇರಿದ ಉದ್ಯಮಿ ಗಣೇಶ್ ಎಸ್ಐಗೆ ಕರೆ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ. ಜೋಗದಲ್ಲಿ ಆಗಾಗ ನಡೆಯುವ ಇಂತಹ ಕಥೆಗಳು, ಜಲಧಾರೆಯ ರೌದ್ರತೆಯ ಸುದ್ದಿಗಳ ನಡುವೆಯು ಸದ್ದು ಮಾಡುತ್ತವೆ
Bengaluru Mans Life Saved at Jog Falls from si
Jog Falls suicide attempt, Shivamogga police, Bengaluru businessman suicide, auto driver saves life, SI Nagaraj, Shoaib Mohammed, depression and debt, ಜೋಗ ಜಲಪಾತ, ಶಿವಮೊಗ್ಗ ಸುದ್ದಿ, ಆತ್ಮಹತ್ಯೆ ಯತ್ನ, ಪೊಲೀಸ್ ರಕ್ಷಣೆ, ಆಟೋ ಚಾಲಕ, ಬೆಂಗಳೂರು ಉದ್ಯಮಿ, Bengaluru Mans Life Saved at Jog Falls from si