Ayanur Manjunath : ಶಿವಮೊಗ್ಗ (ಅಕ್ಟೋಬರ್ 7, 2025): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿಜವಾಗಿಯೂ ಲಿಂಗಾಯತರೇ ಅಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯಿಂದಾಗಿ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಯಡಿಯೂರಪ್ಪ ಅವರು ತಮ್ಮ ಜಾತಿಯ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿ, ಗೊಂದಲ ನಿವಾರಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗಕ್ಕೆ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಬಂದಿದ್ದಾಗ ತಾವು ಭೇಟಿಯಾಗಿದ್ದಾಗಿ ತಿಳಿಸಿದ ಮಂಜುನಾಥ್, ಆ ಸಂದರ್ಭದಲ್ಲಿ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಿಜವಾಗಿಯೂ ಲಿಂಗಾಯತರೇ ಅಲ್ಲ” ಎಂದು ಹೇಳಿದ್ದರು. “ಕಳೆದ 30 ವರ್ಷಗಳಿಂದ ಯಡಿಯೂರಪ್ಪನವರನ್ನು ನೋಡುತ್ತಾ ಬಂದವನಾದ ನನಗೆ ಈ ಮಾತು ಆಶ್ಚರ್ಯ ತಂದಿತು. ನನ್ನ ತಲೆಯಲ್ಲಿಯೇ ಪ್ರಶ್ನೆ ಉದ್ಭವಿಸಿದೆ ಎಂದರೆ, ಸಾಮಾನ್ಯ ಜನರಲ್ಲಿ ಇಂತಹ ಪ್ರಶ್ನೆ ಉದ್ಭವಿಸುವುದು ಸಹಜ” ಎಂದು ಅವರು ಹೇಳಿದರು.
Ayanur Manjunath ಯತ್ನಾಳ್ ಪ್ರಶ್ನೆಗೆ, ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕರಾಗಿರುವ ಸಂಸದರು ಯಾಕೆ ಸುಮ್ಮನಿದ್ದಾರೆ ಎಂದು ಮಂಜುನಾಥ್ ಪ್ರಶ್ನಿಸಿದರು. ಬಿಎಸ್‌ವೈ ಕುಟುಂಬವನ್ನು ವೀರಶೈವ ಲಿಂಗಾಯತರು ಎಂದು ನಂಬಿದ್ದೇವೆ. ಆದ್ದರಿಂದ ಯತ್ನಾಳ್ ಪ್ರಶ್ನೆಗೆ ಸಂಸದರು ಉತ್ತರಿಸಬೇಕು, ಅದನ್ನು ಬಿಟ್ಟು ಸೇತುವೆ, ಬ್ರಿಡ್ಜ್, ಟವರ್ ಬಗ್ಗೆ ಮಾತನಾಡುವುದಲ್ಲ ಎಂದು ಅವರು ಟೀಕಿಸಿದರು.
ವೀರಶೈವ ಮಹಾಸಭಾದ ನಿರ್ದೇಶಕರು ದಾವಣಗೆರೆಯಲ್ಲಿ ಭಾಗಿಯಾಗಿ, ಸಮೀಕ್ಷೆಯ ಇತರೆ ಕಾಲಂನಲ್ಲಿ ಲಿಂಗಾಯತ ಶರ್ಮ ಎಂದು ಬರೆಯಿಸಬೇಕು ಎಂದು ನಿರ್ಣಯಿಸಿದ್ದಾರೆ. ಈ ಬಗ್ಗೆ ಬಿಎಸ್‌ವೈ ಆಗಲಿ ಅಥವಾ ಸಂಸದರಾಗಲಿ ಸ್ಪಷ್ಟನೆ ನೀಡಿಲ್ಲ.ಬಿಜೆಪಿಯಲ್ಲಿದ್ದಾಗ ಒಂದು ಹೇಳಿಕೆ ಮತ್ತು ವೀರಶೈವ ಮಹಾಸಭಾದಲ್ಲಿದ್ದಾಗ ಇನ್ನೊಂದು ನಿಲುವು ತಾಳುವ ಸಂಸದರು ಜಾತಿ ಸಮೀಕ್ಷೆಯಲ್ಲಿ ಯಾವುದನ್ನು ಬರೆಯಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಯನೂರು ಮಂಜುನಾಥ್ ಆಗ್ರಹಿಸಿದರು. ವೀರಶೈವ ಲಿಂಗಾಯತರ ಓಲೈಕೆಗಾಗಿ ನಿಮಗೆ ಬೇರೆ ನಿಲುವು ಇದೆ. ಮಹಾಸಭಾ, ಯಡಿಯೂರಪ್ಪ ಮತ್ತು ಸಂಸದರು ಭಾಗಿಯಾಗಿದ್ದರೂ ‘ಹಿಂದೂ’ ಎಂದು ಬರೆಸಲು ಒತ್ತಾಯಿಸಲಿಲ್ಲ. ಆದರೆ ಈಗ ಬಿಜೆಪಿಗೆ ಬಂದು ವಿಜಯೇಂದ್ರ ಅವರು ‘ಹಿಂದೂ’ ಎಂದು ಬರೆಯುವಂತೆ ಹೇಳುತ್ತಾರೆ. ಮಹಾಸಭಾ ಮತ್ತು ಬಿಜೆಪಿಯಲ್ಲಿ ತಮ್ಮ ನಿಲುವನ್ನು ಗೊಂದಲಗೊಳಿಸಬೇಡಿ ಎಂದು ಅವರು ಸವಾಲು ಹಾಕಿದರು.
Ayanur Manjunath ಸಮೀಕ್ಷೆ ಕುರಿತ ಗೊಂದಲಗಳಿಗೆ ಸ್ಪಷ್ಟನೆ
ರಾಜ್ಯದಲ್ಲಿ ನಡೆಯುತ್ತಿರುವುದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಸಮೀಕ್ಷೆಯಾಗಿದ್ದು, ಇದರಲ್ಲಿ ಕೆಲವು ಪ್ರಶ್ನೆಗಳು ಅಪ್ರಸ್ತುತವಾಗಿರಬಹುದು, ಆದರೆ ವಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ. ಸಮೀಕ್ಷೆಯ ಉದ್ದೇಶದಲ್ಲಿ ಜಾತಿ ಒಂದು ಅಂಶವೇ ವಿನಃ ಪ್ರಧಾನವಲ್ಲ ಎಂದು ಮಂಜುನಾಥ್ ತಿಳಿಸಿದರು.
ರಾಜ್ಯ ಸರ್ಕಾರದ ಸರ್ವೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬ ಸಂಸದರ ಹೇಳಿಕೆಯನ್ನು ಅಲ್ಲಗಳೆದ ಅವರು, ಶೆಡ್ಯೂಲ್ 7 ರಲ್ಲಿ ರಾಜ್ಯ ಸರ್ಕಾರ ಮಾಡಬಾರದು ಎಂದು ಎಲ್ಲಾದರೂ ಸಂವಿಧಾನದಲ್ಲಿದೆಯಾ? ಇದ್ದಿದ್ದರೆ ಹೈಕೋರ್ಟ್ ತಡೆಯಾಜ್ಞೆ ನೀಡುತ್ತಿತ್ತು ಎಂದರು. ಕೇಂದ್ರ ಸಚಿವರಾಗಿ ಪ್ರಹ್ಲಾದ್ ಜೋಶಿ ಅವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲ್ಲ ಎಂದು ಹೇಳಿಕೆ ನೀಡಿರುವುದು ಬೇಜವಾಬ್ದಾರಿಯಾಗಿದೆ. ಆದ್ದರಿಂದ ಅವರ ಮೇಲೆ ಸುಮೋಟೋ ಪ್ರಕರಣ ದಾಖಲಿಸಲು ಕ್ಯಾಬಿನೆಟ್ ಸೂಚಿಸಿದೆ ಎಂದು ಅವರು ತಿಳಿಸಿದರು.
ಸಚಿವ ಮಧು ಬಂಗಾರಪ್ಪ ಅವರನ್ನು ಯಾವುದೇ ಜಾತಿಯ ಕೋಟಾದಲ್ಲಿ ನೇಮಿಸಲಾಗಿಲ್ಲ, ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆ ಉಪಾಧ್ಯಕ್ಷರಾಗಿದ್ದ ಕಾರಣ ಅವರನ್ನು ಮಂತ್ರಿಯನ್ನಾಗಿ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ನೇಮಿಸಿರುವುದು ಯಾವ ಕೋಟಾದಲ್ಲಿ? ಎಂದು ಆಯನೂರು ಮಂಜುನಾಥ್ ಪ್ರಶ್ನಿಸಿದರು. “ಬಿಎಸ್‌ವೈ ಅವರದ್ದು ಹೋರಾಟದ ಹಿನ್ನಲೆಯಲ್ಲಿ ಸಿಎಂ ಆಗಿದ್ದರು. ಆದರೆ ವಿಜಯೇಂದ್ರ ಅವರದ್ದು ಯಾವ ಕೋಟಾ? ಬೇರೆಯವರ ಕೋಟಾ ಬಗ್ಗೆ ಪ್ರಶ್ನಿಸುವ ತಾವು ಮೊದಲು ತಮ್ಮ ಕೋಟಾ ಯಾವುದು ಎಂಬುದನ್ನು ಯೋಚಿಸಬೇಕು” ಎಂದು ಅವರು ಹೇಳಿದರು.
Ayanur Manjunath ಟೋಲ್ ಹೋರಾಟಕ್ಕೆ ಸಂಸದರು ಬೆಂಬಲಿಸಿದ್ದಾರೆ. ಆದರೆ ಟೋಲ್ ಸ್ಥಾಪಿಸಿದವರು ಯಾರು? ನೀವು 4 ಬಾರಿ ಸಂಂಸದರಾಗಿದ್ದೀರ. ನೀವು ಗೊಂದಲದಲ್ಲಿ ಇರಬಾರದು. ಜಾತಿ ಗಣತಿಯಲ್ಲಿ ಗೊಂದಲದ ನಿಲುವು ಹೊಂದಿರುವ ನೀವು ಟೋಲ್ ವಿಚಾರದಲ್ಲೂ ಗೊಂದಲದ ನಿಲುವು ತಾಳುವುದು ಸರಿಯಲ್ಲ ಎಂದರು.
 
 

 
  
  
  
 