ಮಲೆನಾಡ ಹಬ್ಬಗಳೇ ಹಾಗೆ, ನೀರಲ್ಲಿ ತೋಯ್ದು, ಕಾಡಲ್ಲಿ ಬೆರೆತು, ಮಣ್ಣಲ್ಲಿ ಮಿಳಿತವಾದ ಹಾಗೆ… ಇಂತಹ ವಿಶಿಷ್ಟ ಸಂಭ್ರಮಗಳ ಪೈಕಿ ಆರಿದ್ರಾ ಮಳೆ ಹಬ್ಬವೂ ಒಂದು.
ಕಳೆದೊಂದು ವಾರದಿಂದ ಬಿಡುವಿಲ್ಲದೇ ಸುರಿಯುತ್ತಿರುವ ಮಳೆ ಪೇಟೆ ಮಂದಿಗೆ ಎಂತದಿದು ಕಿರಿಕಿರಿ ಅನಿಸಬಹುದು. ಆದರೆ ಮಲೆನಾಡ ರೈತರಿಗೆ ಇದು ವರ್ಷದ ದುಡಿಮೆಯ ಮೂಲ. ಈ ಕಾರಣಕ್ಕೆ ಆತ ಮಳೆಯನ್ನು ಸಂಭ್ರಮಿಸುತ್ತಾನೆ. ಅದರಲ್ಲೂ ಆರಿದ್ರಾ ಮಳೆಯನ್ನು ವಿಶೇಷವಾಗಿ ಸಡಗರದಿಂದ ಸ್ವಾಗತಿಸುತ್ತಾನೆ. ಏಕೆಂದರೆ ಆರಿದ್ರಾ ಹೋದರೆ ದರಿದ್ರಾ ಎನ್ನುವ ಗಾದೆ ಮಾತೆ ಇದೆ. ಅಂದರೆ ಆರಿದ್ರಾ ಮಳೆಯಾಗದಿದ್ದರೇ ಆ ವರ್ಷ ಬೆಳೆ ಕಷ್ಟ ಎನ್ನುವ ತಾತ್ಪರ್ಯದಲ್ಲಿ ಈ ಮಾತು ಅನಾದಿ ಕಾಲದಲ್ಲಿ ಹುಟ್ಟಿಕೊಂಡಿದೆ.
ಇನ್ನೂ ಭರಣಿಯಲ್ಲಿ ಉತ್ತು, ಮೃಗಶಿರಾದಲ್ಲಿ ಹರ್ತೆ ಕುಂಟೆ , ಆಲ ಹೊಡೆದು ಬಿತ್ತುವ ಹೊಲದ ಕೆಲಸಗಳನ್ನು ಮುಗಿಸುವ ಹೊತ್ತಿಗೆ ಆರಿದ್ರಾ ಮಳೆ ಆಗಮಿಸುತ್ತದೆ. ಈ ಸಂದರ್ಭದಲ್ಲಿ ಕೆರೆಕಟ್ಟೆಗಳು ತುಂಬಿಕೊಂಡರೆ, ಕೃಷಿಕ ಸಂತುಷ್ಟ. ಈ ಕಾರಣಕ್ಕೆ ಆರಿದ್ರಾ ಮಳೆಯ ಮುಖ್ಯ ಸಮಯದಲ್ಲಿ ಕೃಷಿಕರು ದೇವರನ್ನು ದೈವಗಳನ್ನು ಪೂಜಿಸುವ ಪರಿಪಾಠ ನಡೆದುಕೊಂಡು ಬಂದಿದೆ. ಮಲೆನಾಡಲ್ಲಿ ಈ ಪ್ರವೃತ್ತಿ ತಲೆಮಾರುಗಳಿಂದ ಬಂದಿದೆ. ಅದರಲ್ಲೂ ದೀವರು ಸಮುದಾಯದ ವಿಶಿಷ್ಟ ಆಚರಣೆಗಳಲ್ಲಿ ಆರಿದ್ರಾ ಮಳೆಯ ಹಬ್ಬವು ಭಾಗವಾಗಿ ನಡೆದುಬಂದಿದೆ.
ಹಿಂದಿನವರು ಮಳೆ ಬಂದು ಕೆರೆ ತಂಬುವುದನ್ನ ಗುರುತಿಸಲು ಕಲ್ಲು ನಡುತ್ತಿದ್ದರಂತೆ. ಆ ಕಲ್ಲುಗಳನ್ನು ಗಡಿಯಪ್ಪ ಎಂದೋ! ಕೆರೆಯನ್ನು ಕೆರೆ ಮಾರಿಯೆಂದೋ ಕೂಗಿ ಕರೆದು, ಪ್ರತಿವರ್ಷ ಅವುಗಳನ್ನು ದೇವರೆಂದು ಪೂಜಿಸುವ ಪರಿಪಾಠ ಆರಿದ್ರಾ ಮಳೆ ಹಬ್ಬವಾಗಿ ಕಂಡು ಬರುತ್ತದೆ. ಆದಾಗ್ಯು ಎಲ್ಲ ಕಡೆಗಳಲ್ಲಿ ಇದೇ ಮಾದರಿಯಲ್ಲಿ ಹಬ್ಬ ನಡೆಯದು, ಆಯಾ ಊರಿನ ವಿಶಿಷ್ಟತೆಗಳಿಗೆ ತಕ್ಕಂತೆ ಹಬ್ಬದಲ್ಲಿಯು ಕೆಲವೊಂದು ಮಾರ್ಪಾಡುಗಳು ಆಗುತ್ತವೆ. ಅಂದರೆ ಸೊರಬದಲ್ಲಿ ಕೆರೆಗಳು ಹೆಚ್ಚಿದ್ದು, ಅಲ್ಲಿ ಹಲವು ಹೆಸರುಗಳಿಂದ ಈ ಹಬ್ಬವನ್ನು ಕರೆಯಲಾಗುತ್ತದೆ. ಸಾಗರ ಭಾಗದಲ್ಲಿಯು ಇದೇ ರೀತಿಯ ಆಚರಣೆಗಳಿವೆ. ಬಹುತೇಕ ಕಡೆ ಆರಿದ್ರಾ ಮಳೆ ಹಬ್ಬ ಎಂದೇ ಕರೆಯಲಾಗುತ್ತದೆ. ಸಮೃದ್ಧ ಮಳೆಯಾದಲ್ಲಿ ಬೆಳೆಗೆ ನೀರು ಸಿಕ್ಕು ಬೆಳೆಯು ಉತ್ತಮವಾಗಿ ಸಿಗುತ್ತದೆ. ಆ ನಿಟ್ಟಿನಲ್ಲಿ ಕೊಡುವ ಪ್ರಕೃತಿಯನ್ನು ನೆನೆದು ಹರಸು ನಮ್ಮನು ಎಂದು ಬೇಡಿಕೊಳ್ಳಲಾಗುತ್ತದೆ.
ಚೌಡಿ, ಭೂತ ಸೇರಿದಂತೆ ಪ್ರಕೃತಿಯ ಆರಾದನೆಗಳು ನಡೆಯುವ ಹಬ್ಬವೂ ಮಳೆಯ ನಡುವೆಯೇ ಜೋರು ಸಂಭ್ರಮದಲ್ಲಿ ನಡೆಯುತ್ತದೆ. ಊರ ದೇವರಿಗೆ ವಿಶೇಷ ಪೂಜೆಗಳು ಸಲ್ಲುತ್ತವೆ. ಹಿರಿಯರ ಮಾರ್ಗದರ್ಶನದಂತೆ ಕಿರಿಯರು ಹಬ್ಬದ ಕ್ರಮಗಳನ್ನು ಅನುಸರಿಸುತ್ತಾರೆ. ಒಂದೊಂದು ವಿಭಿನ್ನ ವಿಶಿಷ್ಟಗಳನ್ನು ಒಟ್ಟೊಟ್ಟಿಗೆ ಪ್ರದರ್ಶಿಸುವ ಈ ಹಬ್ಬ ಮಲೆನಾಡಿಗರ ಸಂಸ್ಕತಿಯೇ ಆಗಿದೆ.
ಇನ್ನೂ ಈ ವರ್ಷ ಶಿವಮೊಗ್ಗದಲ್ಲಿ ಹಲವೆಡೆ ಆರಿದ್ರಾ ಮಳೆ ಹಬ್ಬಗಳು ನಡೆಯುತ್ತಿದ್ದು, ಸಾಗರ ತಡಗಳಲೆಯಲ್ಲಿ ನಡೆದ ಹಬ್ಬದ ವಿಡಿಯೋ ಇಲ್ಲಿದೆ ನೋಡಿ!
