Araga Jnanendra ಶಿವಮೊಗ್ಗ: ಮತಗಳ್ಳತನದ ಬಗ್ಗೆ ಕಾಂಗ್ರೆಸ್ ಬಹಳ ಹಿಂದಿನಿಂದಲೂ ಇತಿಹಾಸ ಹೊಂದಿದ್ದು, ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಕೂಡ ಮತಗಳ್ಳತನದಿಂದಲೇ ಚುನಾವಣೆಯಲ್ಲಿ ಗೆದ್ದಿದ್ದರು ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ದೇಶದಾದ್ಯಂತ ಪ್ರಚಾರಕ್ಕಾಗಿ “ಮತಗಳ್ಳತನ ಆಗಿದೆ” ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ರಾಯ್ ಬರೇಲಿಯಲ್ಲಿ ರಾಜ್ ನಾರಾಯಣ್ ವಿರುದ್ಧ ಇಂದಿರಾ ಗಾಂಧಿ ಮತಗಳ್ಳತನದಿಂದ ಗೆದ್ದಿದ್ದರು. ಆಗ ಅಲಹಾಬಾದ್ ಹೈಕೋರ್ಟ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಆದರೆ ಇಂದಿರಾ ಗಾಂಧಿಯವರು ಅಧಿಕಾರದಿಂದ ಕೆಳಗಿಳಿಯದೇ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದರು. ರಾಹುಲ್ ಗಾಂಧಿಯವರಿಗೆ 50 ವರ್ಷಗಳ ಹಿಂದಿನ ಈ ಇತಿಹಾಸ ಮರೆತುಹೋಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
Araga Jnanendra : ಕಾಂಗ್ರೆಸ್ ಪ್ರತಿಭಟನೆ ನಾಚಿಕೆಗೇಡಿನ ಸಂಗತಿ
ಈಗ ಕಾಂಗ್ರೆಸ್ಸಿಗರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಚುನಾವಣೆಯಲ್ಲಿ ಮತಗಳ್ಳತನ ಆಗಿದ್ದರೆ, ಅದನ್ನು ಆಕ್ಷೇಪಿಸಲು ತಕ್ಷಣವೇ ಅವಕಾಶವಿತ್ತು. ಚುನಾವಣಾ ಆಯೋಗವು ಬಿಎಲ್ಎ (ಬೂತ್ ಮಟ್ಟದ ಏಜೆಂಟ್) ನೇಮಕಕ್ಕೂ ಅವಕಾಶ ನೀಡಿತ್ತು. ಚುನಾವಣೆ ಮುಗಿದ ಮೂರು ತಿಂಗಳವರೆಗೂ ತಕರಾರು ಸಲ್ಲಿಸಲು ಅವಕಾಶವಿದ್ದರೂ ಅವರು ಮಾಡಲಿಲ್ಲ. ಆದ್ದರಿಂದ ಅವರ ಆರೋಪಗಳು ನಂಬಿಕೆಗೆ ಅರ್ಹವಲ್ಲ ಎಂದು ಜ್ಞಾನೇಂದ್ರ ಟೀಕಿಸಿದರು.
ಇದೇ ವೇಳೆ, ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರ್ಕಾರವೇ. ರಾಹುಲ್ ಗಾಂಧಿ ತಮ್ಮ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದಾರೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ವಿರುದ್ಧದ ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಥವಾ ಸರ್ಕಾರವನ್ನೇ ವಿಸರ್ಜನೆ ಮಾಡಬೇಕು ಎಂದು ಆರಗ ಜ್ಞಾನೇಂದ್ರ ಸವಾಲು ಹಾಕಿದರು. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಘನತೆಯಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.


