agriculture Department : ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ದಾಸ್ತಾನು ಎಷ್ಟಿದೆ ಗೊತ್ತಾ | ಕೃಷಿ ಇಲಾಖೆಯ ಮಾಹಿತಿ ಇಲ್ಲಿದೆ ನೋಡಿ
agriculture Department : ಶಿವಮೊಗ್ಗ: ಜಿಲ್ಲೆಯಾದ್ಯಂತ ಉತ್ತಮ ಮುಂಗಾರು ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ, ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಸಮರ್ಪಕ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಶಿವಮೊಗ್ಗ ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಈಗಾಗಲೇ 10,000 ಹೆಕ್ಟೇರ್ (ಶೇ. 75) ಮುಸುಕಿನ ಜೋಳದ ಬಿತ್ತನೆ ಪೂರ್ಣಗೊಂಡಿದೆ. ಭತ್ತದ ಬೇಸಾಯಕ್ಕೆ ಸಿದ್ಧತೆ ನಡೆಸುತ್ತಿರುವ ರೈತರು, ವಿವಿಧ ತಳಿಗಳ ಭತ್ತದ ಬೀಜಗಳನ್ನು ಖರೀದಿಸಿ ಸಸಿ ಮಡಿ ಮಾಡಲು ಮುಂದಾಗಿದ್ದಾರೆ.

ಕೃಷಿ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಪ್ರಸ್ತುತ ರೈತ ಸಂಪರ್ಕ ಕೇಂದ್ರಗಳಲ್ಲಿ 301 ಕ್ವಿಂಟಾಲ್ ಮುಸುಕಿನ ಜೋಳ ಬಿತ್ತನೆ ಬೀಜ, 700 ಕ್ವಿಂಟಾಲ್ ಭತ್ತ, 20 ಕ್ವಿಂಟಾಲ್ ರಾಗಿ ಹಾಗೂ 20 ಕ್ವಿಂಟಾಲ್ ದ್ವಿದಳ ಧಾನ್ಯದ ಬೀಜಗಳು ದಾಸ್ತಾನು ಇವೆ. ಹೀಗಾಗಿ, ಬಿತ್ತನೆ ಬೀಜಕ್ಕೆ ಯಾವುದೇ ಕೊರತೆಯಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ರಸಗೊಬ್ಬರದ ವಿಷಯದಲ್ಲೂ ಜಿಲ್ಲೆಯಲ್ಲಿ ಉತ್ತಮ ದಾಸ್ತಾನು ಇದೆ. ಪ್ರಸ್ತುತ 1,116 ಮೆಟ್ರಿಕ್ ಟನ್ ಯೂರಿಯಾ, 272 ಮೆಟ್ರಿಕ್ ಟನ್ ಡಿಎಪಿ (DAP), 556 ಮೆಟ್ರಿಕ್ ಟನ್ ಎಂಒಪಿ (MOP), 332 ಮೆಟ್ರಿಕ್ ಟನ್ ಎಸ್‌ಎಸ್‌ಪಿ (SSP) ಹಾಗೂ 2,292 ಮೆಟ್ರಿಕ್ ಟನ್ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರಗಳು ಲಭ್ಯವಿವೆ.
ರಸಗೊಬ್ಬರ ಕೊರತೆ ಇಲ್ಲದಿದ್ದರೂ, ರೈತರು ಡಿಎಪಿ ಗೊಬ್ಬರದ ಮೇಲೆ ಮಾತ್ರ ಅವಲಂಬಿತರಾಗದೆ, ಲಭ್ಯವಿರುವ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಸಿ ಉತ್ತಮ ಇಳುವರಿ ಪಡೆಯುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ. ಈ ಕುರಿತು ಎಲ್ಲ ರಸಗೊಬ್ಬರ ಮಳಿಗೆಗಳ ಮುಂದೆ ಅಗತ್ಯ ಪ್ರಚಾರವನ್ನೂ ಕೈಗೊಳ್ಳಲಾಗಿದೆ.
