ಶಿವಮೊಗ್ಗ ಮಹಿಳೆಯೊಬ್ಬರಿಗೆ ಇಂಗ್ಲೆಂಡ್ ದೇಶದಲ್ಲಿ ವೈದ್ಯನೆಂದು ನಂಬಿಸಿ ಫೇಸ್‌ಬುಕ್‌ನಲ್ಲಿ ಚಾಟಿಂಗ್ ಮಾಡಿ, ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.
ಶಿವಮೊಗ್ಗದ ಮಹಿಳೆಯೊಬ್ಬರ ಫೇಸ್‌ಬುಕ್‌ಗೆ ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬನ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ರಿಕ್ವೆಸ್ಟ್ ಒಪ್ಪಿಕೊಂಡ ಬಳಿಕ ವ್ಯಕ್ತಿಯು ಮಹಿಳೆ ಜತೆ ಚಾಟಿಂಗ್ ನಡೆಸಿದ್ದಾನೆ. ಈ ವೇಳೆ ತಾನೊಬ್ಬ ವೈದ್ಯನೆಂದು ಹೇಳಿಕೊಂಡಿದ್ದಾನೆ. ನಂತರ, ಇಂಗ್ಲೆಂಡ್‌ನಿಂದ ಅಮೂಲ್ಯ ಚಿನ್ನಾಭರಣ ಉಡುಗೊರೆ ಕಳುಹಿಸುವುದಾಗಿ ಚಾಟಿಂಗ್‌ನಲ್ಲಿ ತಿಳಿಸಿದ್ದಾನೆ.
ತದನಂತರ, ಮೇ 16ರಂದು ಮಹಿಳೆಯ ಮೊಬೈಲ್ ನಂಬರ್‌ಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ, ತಾನು ಏರ್‌ಪೋರ್ಟ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಮಹಿಳೆ ಹೆಸರಿನಲ್ಲಿ ಕೊರಿಯರ್ ಬಂದಿದ್ದು ಅದಕ್ಕೆ ಒಂದಿಷ್ಟು ಚಾರ್ಜ್ ಆಗಲಿದೆ ಎಂದು ತಿಳಿಸಿದ್ದಾನೆ.
ಇದನ್ನು ನಂಬಿದ ಮಹಿಳೆ ಮೇ 16 ರಿಂದ 20ರ ವರೆಗೆ ವಿವಿಧ ಹಂತದಲ್ಲಿ ಒಟ್ಟು 6.50 ಲಕ್ಷರೂ. ವರ್ಗಾಯಿಸಿದ್ದಾಳೆ. ನಂತರ, ಚಾಟಿಂಗ್ ಮಾಡಿದ ವ್ಯಕ್ತಿ ಹಾಗೂ ಏರ್‌ಪೋರ್ಟ್ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದವರು ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದ್ದು, ಮಹಿಳೆಯು ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ
