KARNATAKA NEWS/ ONLINE / Malenadu today/ Jul 6, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮತ್ತೆ ಅಶ್ಲೀಲ ವಿಡಿಯೋ ಹರಿದಾಡ್ತಿದೆ. ಮೇಲಾಗಿ ರಾಜಕೀಯ ಉದ್ದೇಶಕ್ಕಾಗಿ ಇಂತಹ ವಿಡಿಯೋಗಳು ಹರಿದಾಡ್ತಿರುವುದು ಇಲ್ಲಿ ಗಮನಾರ್ಹವಾಗಿದೆ. ಈ ಹಿಂದೆ ಎಬಿವಿಪಿ ಮುಖಂಡನ ವಿಡಿಯೋಗಳು ಹರಿದಾಡಿದ್ದವು. ಈ ಸಂಬಂಧ ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಕಾಂಗ್ರೆಸ್ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಈ ನಡುವೆ ವಿಡಿಯೋ ವಿವಾದ ತಾರಕ್ಕೇರುತ್ತಿರುವಾಗಲೇ ಹಿಂದೂ ಪರ ಸಂಘಟನೆಯ ಮುಖಂಡರು ಖುದ್ದಾಗಿ ದೂರು ನೀಡಿ, ಅಶ್ಲೀಲ ವಿಡಿಯೋದಲ್ಲಿದ್ದ ಯುವಕ ಅರೆಸ್ಟ್ ಆಗುವಂತೆ ಮಾಡಿದ್ದರು. ಪ್ರಕರಣ ಅಲ್ಲಿಗೆ ತಾರ್ಕಿಕ ಅಂತ್ಯ ಕಂಡಿತ್ತು.
ಇದೀಗ ಮತ್ತೊಬ್ಬನ ವಿಡಿಯೋ ತೀರ್ಥಹಳ್ಳಿಯಲ್ಲಿ ಹರಿದಾಡ್ತಿದೆ. ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್ಎಸ್ಯುಐ ನಲ್ಲಿ ಗುರುತಿಸಿಕೊಂಡಿರುವ ಯುವಕನೊಬ್ಬನ ವಿಡಿಯೋ ಇದಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಇದೇ ವಿಚಾರದಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ.
ಮಹಿಳೆಯರಿಗೆ ಬೆದರಿಕೆ ಒಡ್ಡಿ ಮಾನಹಾನಿ ಮಾಡುತ್ತಿದ್ದು, , ಕೋಮು ಸಾಮರಸ್ಯಕ್ಕೆ ಧಕ್ಕೆ ತರಲಾಗುತ್ತಿದೆ. ಹೀಗಾಗಿ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಯುವ ಮುಖಂಡರು ತೀರ್ಥಹಳ್ಳಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಇನ್ನೊಂದೆಡೆ ಈ ಹಿಂದೆ ಬಿಜೆಪಿ ಪರ ಸಂಘಟನೆಯ ಕಾರ್ಯಕರ್ತನ ವಿರುದ್ಧ ಪ್ರತಿಭಟಿಸಿದ ಹಾಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧವೂ ಪ್ರತಿಭಟಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ. ಈ ಸಂಬಂಧ ವಾಟ್ಸ್ಯಾಪ್ ಸಂದೇಶಗಳು ಹರಿದಾಡುತ್ತಿದ್ದು, ಈತನ ವಿರುದ್ಧ ಕಿಮ್ಮನೆಯವರು ಪ್ರತಿಭಟಸಿವುದಿಲ್ಲವೇ ಎಂದು ಪ್ರಶ್ನಿಸಲಾಗುತ್ತಿದೆ.
ತತ್ಸಂಬಂಧ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯೆ ನೀಡಿಲ್ಲವಾದರೂ, ವಿಡಿಯೋ ಹಾಗೂ ಅದರ ಹಿಂದಿನ ರಾಜಕೀಯ ತೀರ್ಥಹಳ್ಳಿಯಲ್ಲಿ ವಿಪರೀತ ಚರ್ಚೆಗೆ ಎಡೆಮಾಡಿಕೊಟ್ಟಿದೆ.
