ಯುವನಿಧಿ ಯೋಜನೆ! ಸಿಎಂ ರಿಂದ ಮಹತ್ವದ ಘೋಷಣೆ ! ಶಿವಮೊಗ್ಗದಿಂದಲೇ ಆರಂಭವಾಗಲಿ ಎಂದ ಸಿದ್ದರಾಮಯ್ಯ

Yuvanidhi Scheme Important announcement from CM! Let it start from Shivamogga: Siddaramaiah

ಯುವನಿಧಿ ಯೋಜನೆ!  ಸಿಎಂ ರಿಂದ ಮಹತ್ವದ ಘೋಷಣೆ ! ಶಿವಮೊಗ್ಗದಿಂದಲೇ ಆರಂಭವಾಗಲಿ ಎಂದ ಸಿದ್ದರಾಮಯ್ಯ
Yuvanidhi Scheme Important announcement from CM! Let it start from Shivamogga: Siddaramaiah

SHIVAMOGGA |  Jan 12, 2024  | ಶಿವಮೊಗ್ಗದ ಫ್ರೀಡಂಪಾರ್ಕ್​ನಲ್ಲಿ ನಡೆಯುತ್ತಿರುವ ಯುವನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯರವರು ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕಾರ್ಯಕ್ರಮ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಇದು ಒಂದು ಐತಿಹಾಸಿಕ ದಿನ ಎಂದರು. 

ಒಂದು ಲಕ್ಷಕ್ಕೂ ಹೆಚ್ಚು ಜನರು ಇಲ್ಲಿ ಸೇರಿದ್ದಾರೆ. ಯುವನಿಧಿ ಗ್ಯಾರಂಟಿ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಿದ್ದೇವೆ. ನಾನು ಮತ್ತು ಡಿಕೆ ಶಿವಕುಮಾರ್​ರವರು ಮತ್ತು ಸುರ್ಜೆವಾಲಾರವರು ಚುನಾವಣೆಗಿಂತಲೂ ಮೊದಲು ಪ್ರಣಾಳಿಕೆ ಇಟ್ಟಿದ್ದೆವು. ಅದರಲ್ಲಿ ಮುಖ್ಯವಾಗಿ ಐದು ಗ್ಯಾರಂಟಿ ಘೋಷಣೆ ಮಾಡಿದ್ದವು. ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ , ಯುವನಿಧಿ ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದವು. 

ಪ್ರಣಾಳಿಕೆಯಲ್ಲಿರುವ ಎಲ್ಲಾ ಅಂಶಗಳನ್ನ ಅಧಿಕಾರಕ್ಕೆ ಬರುತ್ತಲೇ ಜಾರಿ ಮಾಡುತ್ತೇವೆ ಎಂದು ಗ್ಯಾರಂಟಿ ಕೊಟ್ಟಿರಲಿಲ್ಲ. ಆದರೆ ಈ ಐದು ಯೋಜನೆ ಬಗ್ಗೆ ನೀಡಿದ್ದೆವು. ಕಾರಣ ಅಂದರೆ, ಇವತ್ತು ನಿರುದ್ಯೋಗ , ರೈತರ ಸಮಸ್ಯೆ ಜಾಸ್ತಿಯಾಗಿದೆ. ಆಹಾರ ಪದಾರ್ಥದ ದರ ಜಾಸ್ತಿಯಾಗಿದೆ.

 ಈ ಸಂದರ್ಭದಲ್ಲಿ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ರೈತ ವರ್ಗದ ಜನರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ  ಶಕ್ತಿ ತುಂಬಬೇಕು. ಅವರಿಗೆ ಕೊಂಡುಕೊಳ್ಳುವ ಶಕ್ತಿ ತುಂಬಬೇಕು. ಬೆಲೆ ಏರಿಕೆ ಆಗಿರುವ ಸಂದರ್ಭದಲ್ಲಿ ಜೀವನ ಸಾಗಿಸುವುದು ಸಹ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ನಾವು ಪ್ರಣಾಳಿಕೆ ಮೂಲಕ ಈ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ತಕ್ಷಣವೆ ಜಾರಿಗೆ ತಂದಿದ್ದೇವೆ ಎಂದ ಸಿದ್ದರಾಮಯ್ಯರವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ  ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎಂದರು. 

ಬಹಳ ಜನ ಯುವನಿಧಿ ಕಾರ್ಯಕ್ರಮ ಯಾಕೆ ಆರಂಭಿಸಿಲ್ಲ ಎಂದು ಕೇಳಿದ್ದರು. ಆದರೆ ನಾವು ಭರವಸೆ ಕೊಡುವಾಗಲೇ 2023 ರಲ್ಲಿ ಪಾಸ್ ಮಾಡಿದ ಪದವಿಧರ ಹಾಗೂ ಡಿಪ್ಲೋಮೋ ವಿದ್ಯಾರ್ಥಿಗಳಿಗೆ ಅವರು 180 ದಿನ ತುಂಬಿದ ಮೇಲೆ ಅವರಿಗೆ  ಆರು ತಿಂಗಳಿನಲ್ಲಿ ಕೆಲಸ ಸಿಗದೇ ಹೋದರೆ ಅಂತಹ ನಿರುದ್ಯೋಗಿ ಯುವಕರಿಗೆ ಯುವನಿಧಿ ಹಣ ನೀಡುತ್ತೇವೆ ಎಂದು ಹೇಳಿದ್ದೆವು. ನಾವು ಅಧಿಕಾರಕ್ಕೆ ಬಂದ ತಕ್ಷಣವೇ ನಾನು ಮತ್ತು ಡಿಕೆಶಿವಕುಮಾರ್ ಹಾಗೂ ಇನ್ನೂ 8 ಜನ ಪ್ರಮಾಣ ಸ್ವೀಕರಿಸಿದ ನಂತರ, ವಿಧಾನಸಭೆಯ ಹಾಲ್​ಗೆ ಬಂದು ಐದು ಗ್ಯಾರಂಟಿಗಳನ್ನ ಜಾರಿ ಮಾಡಿದ್ದೇವೆ. 

ಮೇ ನಲ್ಲಿ ಅಧಿಕಾರಕ್ಕೆ ಬಂದೆವು. ಜೂನ್ 11 ನೇ ತಾರೀಖು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೇವೆ. ಅಲ್ಲಿಂದ ಇಲ್ಲಿವರೆಗೂ 130 ಕೋಟಿ 28 ಲಕ್ಷ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್​ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಹಿಂದೆ ಯಾವ ಕಾಲದಲ್ಲಿಯು ಇಷ್ಟರಮಟ್ಟಿಗೆ ಮಹಿಳೆಯರು ಉಚಿತವಾಗಿ ಪ್ರಯಾಣಿಸಿಲ್ಲ ಎಂದು ಸಿದ್ದರಾಮಯ್ಯರವರು ಅಂಕಿ ಅಂಶಗಳನ್ನು ನೀಡಿದ್ರು. 

ಸಮಾಜದಲ್ಲಿ ನೂರಕ್ಕೆ ಐವತ್ತು ಪರ್ಸೆಂಟ್ ಇರುವ ಮಹಿಳೆಯರು ಕೆಲಸಕ್ಕೆ, ದೇವಸ್ಥಾನಕ್ಕೆ , ಪ್ರವಾಸಕ್ಕಾಗಿ ಹೋಗಲು ಬಸ್​ನಲ್ಲಿ ಉಚಿತವಾಗಿ ಹೋಗಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ, ಗೃಹಜ್ಯೋತಿ ಕಾರ್ಯಕ್ರಮವನ್ನು ಕಲಬುರಗಿಯಲ್ಲಿ ಚಾಲನೆ ನೀಡಿದ್ದೇವೆ. ಒಂದು ಕೋಟಿ ಆರವತ್ತೈದು ಲಕ್ಷ ಕುಟುಂಬಗಳಿಗೆ 200 ಯುನಿಟ್​ ವರೆಗೂ ಫ್ರೀಯಾಗಿ ವಿದ್ಯುತ್​ ನೀಡಿದ್ದೇವೆ. ಅವರು ಯಾರು ಕೂಡ ಬಿಲ್ ಕಟ್ಟ ಬೇಕಾಗಿಲ್ಲ  ಎಂದ ಸಿಎಂ ಸಿದ್ದರಾಮಯ್ಯರವರು ಅನ್ನಭಾಗ್ಯ ಸ್ಕೀಂನಲ್ಲಿ ಗೊಂದಲ ಸೃಷ್ಟಿಸಿದ್ರು. 

10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದೆವು. ಕೇಂದ್ರ ಸರ್ಕಾರ ಕೊಡ್ಲಿಲ್ಲ, ಮಾರುಕಟ್ಟೆಯಲ್ಲಿ ಸಿಗಲಿಲ್ಲ. ಆನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿ ಐದು ಕೆಜಿ ಅಕ್ಕಿ ಬದಲಿಗೆ 170 ರೂಪಾಯಿ ಕೊಡುತ್ತಿದ್ದೇವೆ. ಇದು ಜಾರಿಯಲ್ಲಿದೆ. ಇವತ್ತು, ನಾಳೆ ಮುಂದೆಯು ನಾವು ಕೊಡುತ್ತೇವೆ ಎಂದು ಸಿದ್ದರಾಮಯ್ಯರವರು ಘೋಷಿಸಿದರು. 

ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಿದ್ದೇವು ಎಂದು ಆ ಯೋಜನೆ ಬಗ್ಗೆ ವಿವರಿಸಿದ ಸಿದ್ದರಾಮಯ್ಯ ಆಗಸ್ಟ್ ಒಂದು ಕೋಟಿ 18 ಲಕ್ಷ ಮಹಿಳಾ ಯಜಮಾನಿಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ಯೋಜನೆಯನ್ನ ಜಾರಿಗೆ ತಂದಿದ್ದೇವೆ. ಇದುವೆರೆಗೂ ಯಾರಾದ್ರೂ ಕೊಟ್ಟಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ರು. 

ಇವತ್ತು ಯುವನಿಧಿ ಯೋಜನೆಗೆ ಶಿವಮೊಗ್ಗದಲ್ಲಿ ಜಾರಿಗೆ ತಂದಿದ್ದೇವೆ. 2 ವರ್ಷಗಳ ವರೆಗೂ ಯುವನಿಧಿ ಹಣವನ್ನು ನೀಡುತ್ತೇವೆ. ಅಲ್ಲದೆ ಯುವಕರಿಗೆ ಕೌಶಲ್ಯ ತರಭೇತಿ ನೀಡುತ್ತೇವೆ. ಅಲ್ಲದೆ ಉದ್ಯೋಗ ಮೇಳವನ್ನ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದ್ರು. ಯುವಕರಿಗೆ ಅಗತ್ಯವಿರುವ ಹಾಗೂ ಅವಶ್ಯಕವಾಗಿರುವ ಟ್ರೈನಿಂಗ್​ನ್ನ ನಾವು ಕೊಡುತ್ತೇವೆ ಎಂದ ಸಿದ್ದರಾಮಯ್ಯ ಈ ಯೋಜನೆ ಉದ್ದೇಶ ನಿರುದ್ಯೋಗದ ಸಮಸ್ಯೆ ಬಗೆಹರಿಸಬೇಕು. ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಿ ಅವರು ಭ್ರಮ ನಿರಸನ ಆಗುವುದನ್ನ ತಪ್ಪಿಸಬೇಕು ಎಂದರು.. 

ಇವತ್ತು ಸ್ವಾಮಿ ವಿವೇಕಾನಂದರವರ ಜನ್ಮದಿನ, ಅವರ ಜನ್ಮದಿನದಂದೇ ಯುವನಿಧಿ ಯೋಜನೆ ಜಾರಿಗೆ ತಂದು ಯುವದಿನವನ್ನು ಆಚರಿಸುತ್ತಿದ್ದೇವೆ, 70 ಸಾವಿರ ಜನ ಯುವಕ , ಯುವತಿಯರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ನಾಲ್ಕು ಲಕ್ಷದ 20 ಸಾವಿರ 2022-23 ರಲ್ಲಿ ಪಾಸ್ ಆದ ಯುವಕ-ಯುವತಿಯರಿದ್ದಾರೆ. 3,94,000 ಮಂದಿ ಪದವಿಧರಿದ್ದಾರೆ. ಉಳಿದವರು ಡಿಪ್ಲೋಮೋ ಗ್ರ್ಯಾಜಿಯೇಟ್ಸ್​ ಇದ್ದಾರೆ. ಅವರಲ್ಲಿ ನೋಂದಾಯಿಸಿಕೊಂಡವರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದರು. ಒಂದು ವೇಳೆ 2 ವರ್ಷದೊಳಗೆ ಉದ್ಯೋಗ ಸಿಕ್ಕರೇ, ನಿರುದ್ಯೋಗ ಭತ್ಯೆಯನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸಿದ ಸಿದ್ದರಾಮಯ್ಯವರು ಈ ಮಾಹಿತಿಯು ಯುವಕರಿಗೆ ಸ್ಪಷ್ಟವಾಗಿ ತಲುಪಬೇಕಿದೆ ಎಂದರು. 

ಯಾವ ಧರ್ಮದಲ್ಲಿ ಅನ್ನ ಕೊಡಲ್ಲ, ಅಂತಹ ಧರ್ಮದಲ್ಲಿ ನಂಬಿಕೆಯಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ವಿವೇಕಾನಂದರವರ ಜಯಂತಿ ಆಚರಣೆ ಆರಂಭ ಮಾಡಿದ್ದು ರಾಜೀವ್ ಗಾಂಧಿಯವರ ಕಾಲದಲ್ಲಿ. ಯಾಕೆಂದ್ರೆ ರಾಜೀವ್ ಗಾಂಧಿಯವರಿಗೂ ಯುವಕರ ಮೇಲೆ ಅಪಾರ ಕಾಳಜಿ ನಂಬಿಕೆ ಇತ್ತು. ಆ ಕಾರಣಕ್ಕೆ ವಿವೇಕಾನಂದರ ಜಯಂತಿ ಜಾರಿಗೆ ತಂದಿದ್ದರು. ಆ ಕಾರಣಕ್ಕೆ ಯುವನಿಧಿ ಕಾರ್ಯಕ್ರಮವನ್ನ ವಿವೇಕಾನಂದರ ಜಯಂತಿಯಂದೇ  ಜಾರಿಗೆ ತಂದಿದ್ದೇವೆ. 

ನಿರುದ್ಯೋಗ ಈ ದೇಶದಲ್ಲಿ ಬೆಳಯುತ್ತಿದೆ.2014-15 ರಲ್ಲಿ 5.5 ಪರ್ಸೆಂಟ್ ನಿರುದ್ಯೋಗ ಇತ್ತು. ಇವತ್ತು ನೂರಕ್ಕೆ  10.5 ನಿರುದ್ಯೋಗ ಬೆಳದಿದೆ. ಈ ಸಮಸ್ಯೆ ಬಗೆಹರಿಯುತ್ತಿಲ್ಲ, ಬದಲಾಗಿ ಜಾಸ್ತಿಯಾಗ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯುವನಿಧಿ ಮಾಡಬೇಕೋ ಬೇಡವೋ.. ಮಾಡಬೇಕು ಆ ಕಾರಣಕ್ಕೆ ತೀರ್ಮಾನ ಮಾಡಿ ಯುವನಿಧಿ ಜಾರಿಗೆ ತಂದಿದ್ದೇವೆ. ರಾಜ್ಯದ ಒಂದು ಕೋಟಿ ಐವತ್ತು ಲಕ್ಷ ಕುಟುಂಬಗಳು ಒಂದಲ್ಲ ಒಂದು ಯೋಜನೆ ಮೂಲಕ ಐದರಿಂದ ಆರು ಸಾವಿರ ರೂಪಾಯಿ ಪಡೆಯುತ್ತಿದೆ. 



ಇದನ್ನ ಯುರೋಪ್​ ದೇಶದಲ್ಲಿ ಯುನಿವರ್ಸಲ್ ಬೇಸಿಂಗ್ ಇನ್​ ಕಮ್ ಎಂದು ಕರೆಯುತ್ತಾರೆ. ಆ ಪ್ರಿನ್ಸಿಪಲ್​ಗಳನ್ನು ನಮ್ಮ ರಾಜ್ಯದಲ್ಲಿಯು ಅಳವಡಿಸಿಕೊಂಡಿದ್ದೇವೆ. ಸಮಾಜದಲ್ಲಿ ನಾವು ಬರೀ ಭಾಷಣ ಹೊಡೆದರೆ ಆಗೋದಿಲ್ಲ. ಸಮ ಸಮಾಜ ಆಗಬೇಕು. ವರ್ಗರಹಿತ ಸಮಾಜ ಆಗಬೇಕು , ಜಾತಿ ರಹಿತ ಸಮಾಜವಾಗಬೇಕು ಎಲ್ಲರೂ ಮುಖ್ಯವಾಹಿನಿಗೆ ಆದಾಗ ಮಾತ್ರ ಇದು ಸಾಧ್ಯ ಎಂದು ಸಿದ್ದರಾಮಯ್ಯರವರು ಹೇಳಿದ್ರು. 

ಅಂಬೇಡ್ಕರ್​ರವರು ದೇಶಕ್ಕೆ ಬರೀ ರಾಜಕೀಯ ಸ್ವಾತಂತ್ರ್ಯ ಸಿಕ್ಕರೇ ಸಾಲದು ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದಿದ್ದರು. ಅದರಲ್ಲಿ ನಂಬಿಕೆ ಇಟ್ಟಿದ್ದೇವೆ. ದೇಶದ ಪ್ರಜಾಪಭುತ್ವದ ದೇಶದ ಆರ್ಥಿಕ ಹಾಗೂ ಸಾಮಾಜಿಕ ತಳಹದಿ ಮೇಲೆ ನಿಂತಾಗ ಮಾತ್ರ ಅದು ಉಳಿಯುತ್ತದೆ ಎಂದಿದ್ದರು. ಅದರ ಮೇಲೆ ನಂಬಿಕೆ ಇಟ್ಟುಕೊಂಡವರು ನಾವು. ಸಾಮಾಜಿಕ , ಆರ್ಥಿಕ ಪ್ರಜಾಪ್ರಭುತ್ವ ಬಲಗೊಳ್ಳಬೇಕು. ಇಲ್ಲವಾದರೆ ಅಸಮಾನತೆಗೊಂಡ ಜನ ಒಂದು ದಿನ ರಾಜಕೀಯ ಸ್ವಾತಂತ್ರ್ಯವನ್ನ ದ್ವಂಸಗೊಳಿಸುತ್ತಾರೆ ಎಂದು ಅಂಬೇಡ್ಕರ್​ ರವರು ಹೇಳಿದ್ದರು. ಕುವೆಂಪುರವರು ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದಿದ್ದರು. ಅದು ಬರಬೇಕು ಎಂದ ಸಮಾನತೆ ಬರಬೇಕು. ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಬದುಕುವ ವ್ಯವಸ್ಥೆ ನಿರ್ಮಾಣವಾಗದೇ ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯವಿಲ್ಲ. ಈ ಜಿಲ್ಲೆಯಲ್ಲಿ ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ. ಇದು ಹೋರಾಟದ ಹಿನ್ನೆಲೆ ಇರುವ ಜಿಲ್ಲೆ ಇಲ್ಲಿಂದಲೇ ಸರ್ವ ಜನಾಂಗದ ಶಾಂತಿಯ ತೋಟ ಈ ಜಿಲ್ಲೆಯಿಂದಲೇ ನಿರ್ಮಾಣವಾಗಲಿ ಎಂದು ನಾನು ಬಯಸುತ್ತೇವೆ ಎಂದಿದ್ದೇವೆ. 

ಸಂವಿಧಾನದ ಆಶಯಗಳನ್ನು ದ್ಯೆಯೋದ್ದೇಶಗಳನ್ನ ಜಾರಿಗೆ ತರುವುದೇ ನಮ್ಮ ಉದ್ದೇಶ, ಅವುಗಳನ್ನ ಜಾರಿಗೆ ತರುತ್ತೇವೆ ಎಂದ ಸಿದ್ದರಾಮಯ್ಯರವರು ಭದ್ರಾವತಿ ಶಾಸಕ ಎಂಪಿಎಂ ಬಗ್ಗೆ ಬಿ.ಕೆ.ಸಂಗಮೇಶ್ವರ್​ ರವರು ಮಾತನಾಡಿ ಎನ್ನುತ್ತಿದ್ದಾರೆ.  ಅದನ್ನ ಇನ್ನೊಂದು ಸಲ ಮಾತನಾಡುತ್ತೇನೆ ಎಂದರು. 

ಫ್ರೀಡಂಪಾರ್ಕ್​ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯರವರು ಹಳೇ ಜೈಲ್​ನ್ನ ಫ್ರೀಡಂಪಾರ್ಕ್​ ಆಗಿ ಶಿಫ್ಟ್ ಮಾಡಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ. ಮಧು ಬಂಗಾರಪ್ಪನವರು ಹೇಳಿದ್ದಾರೆ. ಫ್ರೀಡಂಪಾರ್ಕ್​ಗೆ ಅಲ್ಲಮಪ್ರಭುರವರ ಹೆಸರು ಇಡಬೇಕು ಎಂದಿದ್ದಾರೆ. ಚನ್ನಬಸಪ್ಪನವರೇ ಅಲ್ಲಮಪ್ರಭುರವರು 12 ಶತಮಾನದವರು, ನಿಮ್ಮ ಊರಿನವರು. ಇವತ್ತು ಏನಾದರೂ ಅನುಭವ ಮಂಟಪ ಇದೆಯಲ್ಲಾ, ಇವತ್ತಿನ ಪಾರ್ಲಿಮೆಂಟ್, ವಿಧಾನಸಭೆ ಅಲ್ಲಿಂದಲೇ ಆರಂಭವಾಗಿದ್ದು. ಅದರ ಅಧ್ಯಕ್ಷರಾಗಿದ್ದವರು ಅಲ್ಲಮಪ್ರಭುರವರು. ಹಾಗಾಗಿ ಫ್ರೀಡಂಪಾರ್ಕ್​ಗೆ ಅವರ ಹೆಸರು ಇಡುವುದು ಸೂಕ್ತ ಎಂದು ಭಾವಿಸುತ್ತೇನೆ ಎಂದರು. 

ಬಹಳ ಜನ ಟೀಕೆ ಮಾಡುತ್ತಾರೆ. ಐದು ಗ್ಯಾರಂಟಿಗಳು ಎಲ್ಲಿ ಜಾರಿಯಾದವು , ನೀವೆ ಸಾಕ್ಷಿ ನಾನು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ನೀವು ಪರಿಶೀಲಿಸಿ ಇವತ್ತು ಜಾರಿಯಾಗಿದ್ದು ಐದು ಗ್ಯಾರಂಟಿಗಳಲ್ಲಿ ಒಂದು ಎಂದು ಸಿದ್ದರಾಮಯ್ಯರವರು ಜೈ ಕರ್ನಾಟಕ ಎಂದು ಘೋಷಿಸಿ ತಮ್ಮ ಭಾಷಣ ಮುಗಿಸಿದರು