SHIVAMOGGA | MALENADUTODAY NEWS | Aug 14, 2024 ಮಲೆನಾಡು ಟುಡೆ
ಶಿವಮೊಗ್ಗ ಪಾಲಿಕೆ ಚುನಾವಣೆ ಬಗ್ಗೆ ಈಗಾಗಲೇ ರಾಜ್ಯ ಚುನಾವಣಾ ಆಯೋಗ ಅಂತಿಮ ಹಂತದ ತೀರ್ಮಾನ ಕೈಗೊಳ್ಳುತ್ತಿದೆ. ಈ ಸಂಬಂಧ ಅಧಿಕೃತ ಹೇಳಿಕೆ ನೀಡಿರುವ ಚುನಾವಣೆ ಆಯೋಗ ಈ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ಸುಳಿವು ನೀಡಿತ್ತು. ಈ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆ (Shivamogga City Corporation ) ಚುನಾವಣೆ ಬಗ್ಗೆ ಭಿನ್ನ ರಾಗ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಒಂದು ಕಡೆ ಕಾಂಗ್ರೆಸ್ನ ನಿಯೋಗವೊಂದು ರಾಜ್ಯ ಸರ್ಕಾರಕ್ಕೆ ಪಾಲಿಕೆ ಚುನಾವಣೆ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಮಾಡಿ ಎಂದು ಮನವಿ ಮಾಡಿದೆ.
ಕೆಎಸ್ ಈಶ್ವರಪ್ಪ ಹೇಳಿದ್ದೇನು?
ಇನ್ನೊಂದೆಡೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಚುನಾವಣೆಯನ್ನು ಬೇಗ ಪೂರ್ಣಗೊಳಿಸಿ ಎಂದು ಆಗ್ರಹಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಹೆಚ್ಚುತ್ತಿರುವ ಕಲುಷಿತ ಕುಡಿಯುವ ನೀರಿನ ಸರಬರಾಜು, ಹದಗೆಟ್ಟ ರಸ್ತೆ, ಕಸವಿಲೇವಾರಿಯಲ್ಲಿನ ವಿಳಂಬ ಹಾಗೂ ಕುಂಠಿತಗೊಂಡಿರುವ ಪಾಲಿಕೆಯ ಅಭಿವೃದ್ಧಿ ಕಾರ್ಯಗಳಿಗೆ ಮರುಜೀವ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಪಾಲಿಕೆ ಚುನಾವಣೆಯನ್ನು ನಡೆಸಿ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪಾಲಿಕೆ ಪುನರ್ವಿಂಗಡನೆ
ಇನ್ನೊಂದೆಡೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಹಾಗೂ ವಾರ್ಡ್ಗಳ ಪುನರ್ ವಿಂಗಡಣೆ ನಂತರವಷ್ಟೆ ಚುನಾವಣೆ ನಡೆಸಬೇಕೆಂದು ಶಿವಮೊಗ್ಗ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್ ಕಾಶಿ, ಹೆಚ್.ಸಿ.ಯೋಗೇಶ್, ಎಂ.ಎಸ್.ಶಿವಕುಮಾರ್ ನೇತೃತ್ವದ ತಂಡ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿಲ್ಲ
ಶಿವಮೊಗ್ಗ ನಗರವು ಸಾಕಷ್ಟು ಅಭಿವೃದ್ಧಿಯಾಗಿದೆ. ಜನಸಂಖ್ಯೆ ಹೆಚ್ಚಾಗಿದೆ. ಹೊರವಲಯದ ಪ್ರದೇಶಗಳಲ್ಲಿ ಬಡಾವಣೆಗಳು ಅಭಿವೃದ್ಧಿಯಾಗಿವೆ. ವಿಮಾನ ನಿಲ್ದಾಣ ಸೇರಿದಂತೆ ಹಲವು ಕೈಗಾರಿಕಾ ಪ್ರದೇಶಗಳು ಪಾಲಿಕೆ ವ್ಯಾಪ್ತಿಯಿಂದ ಹೊರಗಿವೆ. ಸಮರ್ಪಕ ಮೂಲಸೌಕರ್ಯ ಕಲ್ಪಿಸಲು ಆಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
35 ವಾರ್ಡ್
ಸದ್ಯ ಶಿವಮೊಗ್ಗ ನಗರ ಪಾಲಿಕೆಯಲ್ಲಿ ಕೇವಲ 35 ವಾರ್ಡ್ ಗಳಿವೆ ಕೆಲವಾರ್ಡ್ ಗಳಲ್ಲಿ 12 ಸಾವಿರಕ್ಕೂ ಅಧಿಕ ಮತದಾರ ರಿದ್ದಾರೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ವೈಜ್ಞಾನಿಕವಾಗಿ ವಾರ್ಡ್ಗಳ ಪುನರ್ ವಿಂಗಡಣೆಯಾ ಗಬೇಕಾಗಿದೆ ಎಂದು ಮುಖಂಡರು ಒತ್ತಾಯಿಸಿದ್ದಾರೆ. ಹೀಗೆ ಎರಡು ಭಿನ್ನ ಅಭಿಪ್ರಾಯಗಳ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಇದೀಗ ಗೊಂದಲ ಗೂಡಾಡುವ ಸಾಧ್ಯತೆ ಇದೆ.