SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 27, 2025
ಶಿವಮೊಗ್ಗ | ವಸತಿ ಸಚಿವ ಜಮೀರ್ ಅಹಮದ್‌ರವರು ಶಿವಮೊಗ್ಗಕ್ಕೆ ಬಂದಿದ್ದು ಗೋವಿಂದ ಪುರದ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಆರೋಪಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಸತಿ ಸಚಿವ ಜಮೀರ್ ಅವರು ಶಿವಮೊಗ್ಗಕ್ಕೆ ಬಂದು 652 ಮನೆಗಳನ್ನು ಕೊಟ್ಟು ನಮ್ಮ ಸರ್ಕಾರ ಕೊಟ್ಟಿದೆ ಎಂಬ ಹೆಸರಿನೊಂದಿಗೆ ಬರಿಗೈಲಿ ವಾಪಸ್ ಹೋಗಿದ್ದಾರೆ. ಗೋವಿಂದಾಪುರದಲ್ಲಿ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 12 ಕೋಟಿ ರೂಪಾಯಿ ಅಗತ್ಯವಿದೆ. ಈ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ವಸತಿ ಸಚಿವ ಜಮೀರ್ ಅಹಮದ್‌ರವರು ಶಿವಮೊಗ್ಗಕ್ಕೆ ಬಂದು ಮನೆ ಹಂಚುವ ಸಂದರ್ಭದಲ್ಲಿ 12 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ ಜಮೀರ್ ಅಹಮದ್ ಅವರು ಆ ಹಣವನ್ನು ಬಿಡುಗಡೆ ಮಾಡಲಿಲ್ಲ. ಸುಮ್ಮನೆ ಸರ್ಕಾರ ಅವರಿಗೆ ನೀಡುವ ಟಿಎ ಡಿಎ ಅನ್ನು ಖರ್ಚು ಮಾಡಲಷ್ಟೇ ಅವರು ಶಿವಮೊಗ್ಗಕ್ಕೆ ಬಂದಿದ್ದು. ಹೀಗೆ ಮಾಡುವುದಿದ್ದರೆ ಈ ಆಶ್ರಯ ಯೋಜನೆಯ ಮನೆಯನ್ನು ಜಮೀರ್ ಅಹಮದ್‌ರವರೆ ಉದ್ಘಾಟನೆ ಮಾಡಬೇಕೆಂದಿರಲ್ಲಿ. ಒಬ್ಬ ಅಧಿಕಾರಿ ಉದ್ಘಾಟನೆ ಮಾಡಬಹುದಿತ್ತು ಎಂದು ಗುಡುಗಿದರು.
ಗೋವಿಂದರಾಜಪುರದ ಆಶ್ರಯ ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಯಾವಾಗ? ವಿದ್ಯುತ್ ಸಂಪರ್ಕಕ್ಕೆ 12 ಕೋಟಿ ರೂ. ಬೇಕು. ಅದನ್ನು ಬಿಡುಗಡೆ ಮಾಡಲು ಸಚಿವ ಸಂಪುಟದ ಒಪ್ಪಿಗೆ ಬೇಕೆ? 3 ಸಾವಿರ ಮನೆಗಳಲ್ಲಿ ನನ್ನ ಕಾಲದ ವಿತರಣೆಯೂ ಸೇರಿದಂತೆ 1272 ಮನೆಗಳ ವಿತರಣೆಯಾಗಿದೆ. ಇನ್ನೂ 1728 ಮನೆಗಳ ನಿರ್ಮಾಣ ಬಾಕಿ ಇದೆ. ಇವುಗಳನ್ನು ಕಟ್ಟುವುದು ಮತ್ತು ವಿತರಿಸುವುದು ಯಾವಾಗ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ಗೋವಿಂದಾಪುರದಲ್ಲಿ ಮನೆ ಕಟ್ಟಿದ ಗುತ್ತಿಗೆದಾರನಿಗೆ 24 ಕೋಟಿ ರೂ. ಬಾಕಿ ಬರಬೇಕಾಗಿದೆ. ಇದನ್ನು ಕೊಡದ ಹೊರತೂ ಆತ ಉಳಿದ ಮನೆಗಳನ್ನು ಹೇಗೆ ಕಟ್ಟಲು ಸಾಧ್ಯ? ನಾನು ಶಾಸಕನಾಗಿದ್ದಾಗ ಪ್ರಯತ್ನಪಟ್ಟು 3 ಸಾವಿರ ಮನೆಗಳ ನಿರ್ಮಾಣಕ್ಕೆ ನಾಂದಿ ಹಾಡಿದ್ದೆ. ಉಳಿದವರು ಕೂಡ ಈಗಾಗಲೇ ಹಣ ಕಟ್ಟಿದ್ದಾರೆ. ಅವರಿಗೆ ಸೂರು ಯಾವಾಗ ಸಿಗುತ್ತದೋ ಬಡವರಿಗೆ ಯಾವಾಗ ಮನೆ ಕೊಡುತ್ತಾರೋ ಗೊತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೂಡ ಬಡವರಿಗೆ ಮನೆ ಕೊಡುವಲ್ಲಿ ವಿಫಲವಾಗಿವೆ ಎಂದರು.
ಗೋವಿಂದಾಪುರದ್ದು ಒಂದು ಕತೆಯಾದರೆ ಗೋಪಿಶೆಟ್ಟಿಕೊಪ್ಪದ್ದು ಮತ್ತೊಂದು ಕತೆ. ಇಲ್ಲಿ 1836 ಮನೆಗಳು ನಿರ್ಮಾಣವಾಗಬೇಕಾಗಿದೆ. ಸುಮಾರು 500ಕ್ಕೂ ಹೆಚ್ಚು ಮಂದಿ ಪೂರ್ಣ ಹಣ ಪಾವತಿಸಿದ್ದಾರೆ. ಗುತ್ತಿಗೆದಾರ ಸುಮಾರು 3 ಕೋಟಿ ಕೆಲಸ ಮಾಡಿ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದಾರೆ. ಈಗ ಸೂರಿಗಾಗಿ ಹಣ ಕಟ್ಟಿದವರ ಗತಿಯೇನು? ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇದ್ದರೆ ಮನೆ ಕಟ್ಟಿಕೊಡಲಿ. ಇಲ್ಲದಿದ್ದರೆ ಬಡವರ ಹಣವನ್ನು ವಾಪಸ್ ಕೊಡಲಿ. ಸಿ ಎಂ ಸಿದ್ದರಾಮಯ್ಯರವರೆ ಒಮ್ಮೆ ನೀವು ಶಿವಮೊಗ್ಗಕ್ಕೆ ಬಂದು ಇಲ್ಲಿನ ಆಶ್ರಯ ಮನೆಗಳ ಪರಿಸ್ಥಿತಿ ನೋಡಿ. ಜಮೀರ್ ಅಹಮದ್‌ರಂದು ಈ ಹದ್ದೆಯನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
SUMMARY | Former Deputy CM KS Eshwarappa alleged that the beneficiaries of the ashraya scheme in Govindapura did not get any benefit.
KEYWORDS | KS Eshwarappa, ashraya scheme, Govindapura, zameer ahamd,