SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 18, 2025
ಶಿವಮೊಗ್ಗ : ರಾಜ್ಯ ಸರ್ಕಾರ ಹಿಂದುಳಿದ ಜಿಲ್ಲೆಗಳ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿದೆ. ಇದು ಖಂಡನಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು ರಾಜ್ಯದ ನಾಲ್ಕು ಲಕ್ಷ ಕೋಟಿ ಬಜೆಟಿನ ಶೇಕಡಾ ಒಂದರಷ್ಟು ಹಣವನ್ನು ಸಹ ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಮೀಸಲಿಡದೆ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಉನ್ನತ ಶಿಕ್ಷಣ ಸಚಿವರು ಯಾವುದೇ ವಿವಿಗಳಿಗೆ ಭೇಟಿಕೊಡುತ್ತಿಲ್ಲ. ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. ವಿಶ್ವವಿದ್ಯಾಲಯಗಳಿಗೆ ಒಂದು ನಯಾ ಪೈಸೆ ಅನುದಾನ ನೀಡುತ್ತಿಲ್ಲ. ಈ ಸರ್ಕಾರ ಉನ್ನತ ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ. ಇದು ವಿಷಾದನೀಯ ಎಂದರು.
ಈ ಸರ್ಕಾರಕ್ಕೆ ಉನ್ನತ ಶಿಕ್ಷಣ ಬೇಕಾಗಿಲ್ಲ. ಶೀತ ಬಂದರೆ ಮೂಗನ್ನೇ ಕೊಯ್ಯುವ ರೀತಿಯಲ್ಲಿ ಸರ್ಕಾರ ವರ್ತಿಸುತ್ತಿದ್ದು ರಾಜ್ಯದ ಒಂಬತ್ತು ವಿವಿಗಳನ್ನು ಮುಚ್ಚಲು ಸಮಿತಿ ಮಾಡಿದೆ. 2016 -17 ರಲ್ಲಿ ಉನ್ನತ ಶಿಕ್ಷಣಕ್ಕೆ ಒಟ್ಟಾರೆ ಬಜೆಟ್ ನ ಶೇ.6 ಎಷ್ಟು ಹಣವನ್ನು ಮೀಸಲಿರಿಸಲಾಗಿತ್ತು. ಸಿದ್ದರಾಮಯ್ಯನವರ ಎರಡನೇ ಅವಧಿಯಲ್ಲಿ ಕೇವಲ 1.6 ಶೇಕಡ ಮೀಸಲಿಟ್ಟಿದೆ. ಸರ್ಕಾರ ಬಂದು 21 ತಿಂಗಳಾಯಿತು. ನಯಾಪೈಸೆ ಹೆಚ್ಚುವರಿ ಅನುದಾನ ನೀಡಿಲ್ಲ. ವಿಶ್ವವಿದ್ಯಾಲಯಗಳ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡುವುದಿಲ್ಲ. ವಿವಿಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸರ್ಕಾರದ ಈ ನಿಲುವಿನ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
SUMMARY | MLC D S Arun said the state government’s move to close down nine universities in backward districts was condemnable.
KEYWORDS | D S Arun, state government, universities,