SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 26, 2024
ಸಿ.ಟಿ ರವಿಯವರ ಕೇಸ್ ವಿಚಾರವಾಗಿ ಸಭಾಪತಿ ಬಸವರಾಜ್ ಹೊರಟ್ಟಿಯವರಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪತ್ರವೊಂದು ಬರೆದಿದ್ದಾರೆ. ಈ ಪತ್ರದಲ್ಲಿ ಸಿಟಿ ರವಿಯವರ ಪ್ರಕರಣವನ್ನು ನಮೂದಿಸಿರುವ ಕಿಮ್ಮನೆ ರತ್ನಾಕರ್‌ರವರು ಸಬಾಪತಿಯವರ ನಡೆಯನ್ನು ಪ್ರಶ್ನಿಸಿದ್ದಾರೆ. ಕಿಮ್ಮನೆ ರತ್ನಾಕರ್‌ರವರ ಪತ್ರದ ವಿವರ ಹೀಗಿದೆ.
ನೀವು ಭಾರತದ ವಿಧಾನ ಪರಿಷತ್ ಇತಿಹಾಸದಲ್ಲಿ ವಿಧಾನ ಪರಿಷತ್‌ಗೆ ಅತೀ ಹೆಚ್ಚು ಬಾರಿ ಸೋಲಿಲ್ಲದೆ ಗೆದ್ದು ಇತಿಹಾಸ ನಿರ್ಮಿಸಿದ್ದೀರಿ. 1980ರ ನಂತರ ಕರ್ನಾಟಕದ ಎಲ್ಲಾ ಮುಖ್ಯಮಂತ್ರಿಗಳ ಆಡಳಿತದ ವೈಖರಿಯನ್ನು ಸದನದ ಸದಸ್ಯರಾಗಿ ನೋಡಿದ್ದೀರಿ. ಅಂತಯೇ ಅಲ್ಲಿಂದ ಈವರೆಗೆ ನೀವು ಪರಿಷತ್‌ನ ಸಭಾಪತಿ ಆಗುವವರೆಗೆ, ಇತರೆ ಸಭಾಪತಿಯವರ ಕಾರ್ಯ ವೈಖರಿ ನೋಡಿದ್ದೀರಿ. ನಿಮ್ಮ ಜಾತ್ಯಾತೀತದ ನಿಲುವುಗಳು, ಪ್ರಾಮಾಣಿಕತೆ ದಕ್ಷತೆ ಬಗ್ಗೆ ನನಗೆ ಅಪಾರವಾದ ಗೌರವ. ವಿಶ್ವಾಸರ್ಹತೆ, ನಂಬಿಕೆ ಇದೆ. ಅಂತೆಯೇ ನಾನು 2008 ರಿಂದ 2018 ರವರೆಗೆ ಶಾಸಕನಾಗಿ ಮತ್ತು ಸ್ವಲ್ಪ ಸಮಯ ಮಂತ್ರಿಯಾಗಿ ಕೆಲಸ ಮಾಡುವಾಗ ನಿಮ್ಮ ಒಡನಾಟ, ನಿಮ್ಮ ಅನೋನ್ಯತೆ, ನಿಮ್ಮೊಂದಿಗಿನ ಚರ್ಚೆಗಳು ನನಗೆ ಸಾಕಷ್ಟು ಜ್ಞಾನವನ್ನು ಒದಗಿಸಿದೆ. ವಿಧಾನ ಪರಿಷತ್‌ನ ಕಲಾಪದ ನಂತರವು ಅಂದು ಪರಿಷತ್ತಿನ ಸಭಾಂಗಣದಲ್ಲಿ ನಡೆದ ಪ್ರತಿಭಟನೆ, ವಾಕ್‌ಸಮರ,ಘೋಷಣೆ ಪ್ರತಿ ಘೋಷಣೆಯನ್ನು ಸದನದ ಸದಸ್ಯರು, ಮಂತ್ರಿಗಳು, ಸಿಬ್ಬಂದಿಗಳು, ಮಾರ್ಷಲ್‌ಗಳು ಮೇಲಿಂದ ದೃಶ್ಯ ಮಾಧ್ಯಮದವರೆಲ್ಲ ನೋಡಿದ್ದಾರೆ. ಇದರ ಕುರಿತು ಅನೇಕ ವಿಷಯಗಳನ್ನು ಯಾರು ಯಾರನ್ನ ಕುರಿತು ಏನು ಹೇಳಿದ್ದಾರೆ ಎಂದು ಕೆಲವರನ್ನು ಕೇಳಿದ್ದಾರೆ. ಪರಿಷತ್ ಸಿಬ್ಬಂದಿಯವರು, ಮಾರ್ಷಲ್‌ಗಳು, ಗೌರವಾನ್ವಿತ ಸದಸ್ಯರುಗಳು ಮಂತ್ರಿಗಳು ಕೆಲವರು ನಡೆದ ಘಟನೆ, ಸಂಘರ್ಷ, ಮಾತುಕತೆ, ವಾಕ್ಸಮರವನ್ನು ನೋಡಿದ್ದಾರೆ ಕೇಳಿದ್ದಾರೆ. ಗೌರವಾನ್ವಿತ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಗೌರವಾನ್ವಿತ ಸದಸ್ಯರಾದ ಸಿ.ಟಿ. ರವಿ ರವರ ಮದ್ಯ ನಡೆದ ವಾಕ್ ಸಮರ ನಾಡಿನಾದ್ಯಂತ ರಾಜಕೀಯ ಸಂಚಲನ ಮೂಡಿಸಿದೆ.
ಸಭಾಪತಿಗಳಾದ ತಾವು ಪರಿಷತ್‌ನ ಆಡಳಿತದಾರರು. ಸಭಾಂಗಣ ಕಾರಿಡಾರ್ ನಿಮ್ಮ ಮಾರ್ಗದರ್ಶನ ಆದೇಶದ ಮೇರೆಗೆ ಕಾರ್ಯ ನಿರ್ವಹಿಸುತ್ತದೆ. ನೀವು ನೇರ ಪ್ರತ್ಯಕ್ಷದರ್ಶಿಗಳಾದರೇ ಮಾತ್ರ ಕ್ರಮ ತೆಗೆದುಕೊಳ್ಳಬಹುದು ಇಲ್ಲದಿದ್ದಲ್ಲಿ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂಬ ನಿಮ್ಮ ತೀರ್ಮಾನ ಒಪ್ಪುವಂತಿಲ್ಲ. ಮೇಲ್ಕಂಡ ಘಟನೆಯ ಕುರಿತು ನಿಮ್ಮ ಮಾರ್ಗದರ್ಶನದಲ್ಲಿ ತನಿಖೆ ನಡೆಸಬೇಕು. ಹಾಜರಿದ್ದವರ ಸಾಕ್ಷಿ ಪಡೆಯಬೇಕು. ಅಗತ್ಯ ಬಿದ್ದಲ್ಲಿ ಕಾನೂನು ಸಲಹೆ ಪಡೆಯಬೇಕು. ಹಿಂದಿನ ಸಭಾಪತಿಗಳೊಂದಿಗೆ ಚರ್ಚಿಸಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವ ಅಧಿಕಾರ ನಿಮಗಿದೆ. ಆ ಹಕ್ಕನ್ನು ನೀವು ಕಳೆದುಕೊಳ್ಳಬಾರದು. ನಿಮ್ಮ ತೀರ್ಪಿನಿಂದ ನ್ಯಾಯ ಸಿಗಲಿಲ್ಲ ಎನ್ನುವ ಅಭಿಪ್ರಾಯ ಇರುವವರು ನ್ಯಾಯಾಲಯದಲ್ಲಿ ಕಥೆ ಕಟ್ಟುವ ಅವಕಾಶ ಇದ್ದೇ ಇದೆ. ಆದರೆ ಸಂವಿಧಾನ ಬದ್ಧ ಪರಿಷತ್‌ನ ಅಧಿಕಾರವನ್ನು ನೀವು ಕೈಚೆಲ್ಲಿ ಪೊಲೀಸ್ ಇಲಾಖೆ ಅಥವಾ ಇತರರಿಗೆ ವಹಿಸುವುದು ಸರಿಯಲ್ಲ. ಸಭಾಂಗಣದಲ್ಲಿನ ಸಂಘರ್ಷ, ವಾಕ್ ಸಮರ ಎಲ್ಲವನ್ನು ಕರ್ನಾಟಕದ ಜನ ದೃಶ್ಯ ಮಾಧ್ಯಮದಲ್ಲಿ ನೋಡಿದ್ದಾರೆ. ನೀವು ಏನೂ ನಡೆದೇ ಇಲ್ಲ ಎನ್ನುವ ತಿರ್ಮಾನಕ್ಕೆ ಬರಬಾರದು ಸತ್ಯ ಏನು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಕರ್ನಾಟಕದ ಜನರಿಗೆ ಇದ್ದೇ ಇದೆ. ಮೇಲ್ಕಂಡ ಘಟನೆ ಕತ್ತಲೆಯಲ್ಲಿ ನಡೆದ ಘಟನೆಯಲ್ಲ.
ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಈ ಹಿಂದೆ ಎರಡು ಸದನದಲ್ಲಿ ನಡೆದ ಘಟನೆಗಳನ್ನು ಕಲೆ ಹಾಕಿ ಈ ಘಟನೆಯನ್ನು ಇತ್ಯರ್ಥಗೊಳಿಸುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ತೀರ್ಥಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸಿದ ದಿ. ಶಾಂತವೇರಿ ಗೋಪಾಲಗೌಡರವರು ರಾಜ್ಯಪಾಲರ ಭಾಷಣ ಮತ್ತು ಮೈಕ್ ಕಿತ್ತು ಎಸೆದ ಘಟನೆಯಲ್ಲಿ ಶಿಕ್ಷೆಗೆ ಒಳಗಾಗಿದ್ದರು. ಇತ್ತೀಚಿಗೆ ಪಕ್ಷಾಂತರ ವಿಷಯದಲ್ಲಿ ಸದಸ್ಯತ್ವ ರದ್ದುಗೊಳಿಸಿದ್ದು, ನಮ್ಮ ಕಣ್ಣು ಮುಂದೆಯೇ ಇದೆ. ಈ ವಿಷಯಗಳನ್ನು ಪರಿಶೀಲಿಸಿ ತಮ್ಮ ಹಂತದಲ್ಲಿಯೇ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ ಎಂದರು.
ಕಿಮ್ಮನೆ ರತ್ನಾಕರ್ ಸಭಾಪತಿ ಬಸವರಾಜ್ ಹೊರಟ್ಟಿಯವರಿಗೆ ಬರೆದ ಪತ್ರ ಹೀಗಿದೆ.
SUMMARY | No one can agree with your decision. Former education minister Kimmane Ratnakar has written a letter to Speaker Basavaraj Horatti, requesting him to investigate the case in a partisan manner under your guidance.
KEYWORDS | Kimmane Ratnakar, Basavaraj Horatti, ct ravi, politics,