SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 21, 2024
ಶಿವಮೊಗ್ಗ| ಸೂಡಾ ವತಿಯಿಂದ ಸೋಗಾನೆಯಲ್ಲಿ ಅಭಿವೃದ್ದಿಪಡಿಸಲು ಉದ್ದೇಶಿಸಿರುವ ಲೇಔಟ್ ಕುರಿತು ರೈತರಲ್ಲಿ ತಪ್ಪು ತಿಳುವಳಿಕೆ ಇದೆ ಅದು ನಿವಾರಣೆ ಆಗಬೇಕು. ಹಾಗೆಯೇ ಅಲ್ಲಿರುವ ಯಾವುದೇ ಬಗರ್ ಹುಕುಂ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರೈತರಿಗೆ ಭರವಸೆ ನೀಡಿದರು.
ಸೋಗಾನೆ ಗ್ರಾಮದ ಸ.ನಂ 156 ರ ಪ್ರದೇಶದಲ್ಲಿ ಸೂಡಾ ಲೇಔಟ್ ನಿರ್ಮಿಸುವ ಕುರಿತು ರೈತರೊಂದಿಗೆ ಚರ್ಚಿಸಲು ಇಂದು ಸೂಡಾ ಕಚೇರಿಯಲ್ಲಿ ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸೋಗಾನೆಯಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಸೂಡಾ ವತಿಯಿಂದ ನಿವೇಶನ ನಿರ್ಮಿಸಲು ಜಿಲ್ಲಾಧಿಕಾರಿಗಳು ಮತ್ತು ಎಸಿ ಯವರಿಗೆ ಪತ್ರ ಬರೆದು 200 ಎಕರೆ ಜಾಗ ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು. ಅದರೆಂತೆ ನಿವೇಶನ ನಿರ್ಮಿಸಲು ಸರ್ವೇ ನಂ.156 ರ 96 ಎಕರೆ ಜಾಗ ಮಂಜೂರಾಗಿದೆ. ಈಗಾಗಲೇ ಅಲ್ಲಿ 600 ಎಕರೆ ಕೆಐಎಡಿಬಿ ವಶದಲ್ಲಿದೆ.
ಉದ್ದೇಶಿತ ಪ್ರದೇಶದಲ್ಲಿ ಪ್ರಸ್ತುತ 49 ಎಕರೆ ಜಾಗದಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. 2 ಎಕರೆ ಸ್ಮಶಾನ ಜಾಗವಿದೆ. ಮತ್ತೆ ಕೆಲ ರೈತರು ಕೋರ್ಟ್‌ನಲ್ಲಿ ಬಗರ್‌ಹುಕುಂ ಅರ್ಜಿಗಳನ್ನು ಅರ್ಜಿಗಳನ್ನು ಸಲ್ಲಿಸಿದ್ದಾರೆ, ತೋಟ, ಗದ್ದೆ ಎಷ್ಟಿದೆ ಎಂದು ಸರ್ವೇ ಕಾರ್ಯ ಮಾಡಿದ ನಂತರವೇ ಹಾಗೂ ಸಾಧಕ ಬಾಧಕಗಳನ್ನು ನೋಡಿ, ಅಗತ್ಯ ಕ್ರಮ ಕೈಗೊಂಡು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮ ವಹಿಸಲಾಗುವುದು.
ಹಾಗೂ ರೈತರ ಬೇಡಿಕೆಯಂತೆ ರೈತರಿಗೆ ಬಗರ್ ಹುಕುಂ ಸಮಿತಿಯಿಂದ ಹಕ್ಕು ಪತ್ರ ಕೊಡಿಸಲು ಸಹ ಸಹಕರಿಸುವುದಾಗಿ ರೈತರಿಗೆ ಭರವಸೆ ನೀಡಿದ ಅವರು, ಹಕ್ಕುಪತ್ರ ಪಡೆದ ನಂತರ ಸದರಿ ಭೂಮಿಯನ್ನು ಖಾಸಗಿಯಾಗಿ ಯಾರಿಗೇ ಆಗಲಿ 20 ವರ್ಷ ಪರಭಾರೆ ಮಾಡಲು ಬರುವುದಿಲ್ಲ. ಆದರೆ ಸರ್ಕಾರಿ ಉದ್ದೇಶಕ್ಕೆ ನೀಡಬಹುದಾಗಿದ್ದು, ಹಾಗೆ ರೈತರು ನೀಡಿದ ಭೂಮಿಯನ್ನು 50:50 ಅನುಪಾತದಲ್ಲಿ ಪಡೆಯಲಾಗುವುದು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ರೈತರು ಮಾತನಾಡಿ, ಈ ಹಿಂದೆ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಸರಿಯಾದ ನ್ಯಾಯ ಒದಗಿಲ್ಲ. ಇದೀಗ ಸೂಡಾ ಲೇಔಟ್ ಮಾಡಲು ಇಲ್ಲಿ ಭೂಮಿ ಪಡೆಯಲು ಮುಂದಾಗಿದ್ದಾರೆ. ಮೊದಲು ಅರ್ಜಿ ಸಲ್ಲಿಸಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿ, ನಂತರ ಭೂಮಿ ಪಡೆಯುವ ಪ್ರಕ್ರಿಯೆ ಮಾಡುವಂತೆ ಮನವಿ ಮಾಡಿದರು.
ಜಾಗದ ಹಕ್ಕುಪತ್ರ ಪಡೆದವರು ಜಾಗವನ್ನು ಬೇರೆಯವರಿಗೆ ಪರಭಾರೆ ಮಾಡಿದರೆ ಹಕ್ಕುಪತ್ರವನ್ನು ರದ್ದುಪಡಿಸಲಾಗುವುದು | ಶಾರದ ಪೂರ್ಯಾನಾಯ್ಕ್
ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ಎಷ್ಟು ಜನ ರೈತರು ಅಲ್ಲಿ ಸಾಗುವಳಿ ಮಾಡುತ್ತಿದ್ದಾರೆ, ಬಗರ್ ಹುಕುಂ ಅಡಿಯಲ್ಲಿ ಎಷ್ಟು ಜನ ರೈತರು ಅರ್ಜಿ ಸಲ್ಲಿಸಿದ್ದಾರೆ ಎಂಬ ನಿಖರ ಮಾಹಿತಿಯೊಂದಿಗೆ ಸಮಿತಿಗೆ ಮಂಡಿಸಿರಿ. ಬಡವರು, ಎಸ್‌ಸಿ/ಎಸ್‌ಟಿ ಸೇರಿದಂತೆ ಅರ್ಹರಿಗೆ ಮಾತ್ರ ಹಕ್ಕುಪತ್ರ ನೀಡಲಾಗುವುದು. ಹೀಗೆ ಹಕ್ಕುಪತ್ರ ಪಡೆದವರು ಬೇರೆಯವರಿಗೆ ಪರಭಾರೆ ಮಾಡುವಂತಿಲ್ಲ. ಒಂದು ವೇಳೆ ಮಾಡಿದಲ್ಲಿ ಹಕ್ಕುಪತ್ರವನ್ನು ರದ್ದುಪಡಿಸಲಾಗುವುದು. ಸರ್ಕಾರಿ ಉದ್ದೇಶಕ್ಕೆ ನೀಡಬಹುದು. ಮುಂದಿನ ಸಮಿತಿ ಸಭೆಯಲ್ಲಿ ಸೋಗಾನೆ ಭಾಗದ ರೈತರ ಅರ್ಜಿಯನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದರು.
SUMMARY | There is a misconception among the farmers about the layout proposed to be developed by SUDA at Sogane which should be removed. SUDA president H S Sundaresh assured the farmers that no bagar hukum farmers will be evicted.
KEYWORDS | H S Sundaresh, bagar hukum, SUDA, layout,