ಮಂಗಳೂರು ಬಸ್​ಲ್ಲಿ ಪ್ರಯಾಣಿಕನಿಗೆ ಹಾರ್ಟ್​ ಅಟ್ಯಾಕ್! ಅಪರಿಚಿತನ ಜೀವ ಉಳಿಸಲು ತೀರ್ಥಹಳ್ಳಿಯಲ್ಲಿ ನಿನ್ನೆ ಏನೇನೆಲ್ಲಾ ಆಯ್ತು ಗೊತ್ತಾ?

Malenadu Today

KARNATAKA NEWS/ ONLINE / Malenadu today/ Jun 24, 2023 SHIVAMOGGA NEWS

ಬಸ್​ನಲ್ಲಿ ಹಾರ್ಟ್​ ಅಟ್ಯಾಕ್​ ಆಗಿದ್ದ ವ್ಯಕ್ತಿಯ ಜೀವ ಉಳಿಸಿದ ಮಾನವೀಯ ಪ್ರಯತ್ನವೊಂದು ಶಿವಮೊಗ್ಗ-ತೀರ್ಥಹಳ್ಳಿಯ ಜನರಿಂದ ನಡೆದಿದೆ. 

ನಡೆದಿದ್ದೇನು?

ಮಲ್ನಾಡ್ ಜನದ ಮಾನವೀಯತೆಗೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ನಿನ್ನೆ ಶಿವಮೊಗ್ಗ-ಮಂಗಳೂರಿಗೆ ದುರ್ಗಾಂಬಾ ಬಸ್ ಹೊರಟಿತ್ತು. ಇನ್ನೇನು ತೀರ್ಥಹಳ್ಳಿ ತಲುಪುವ ಹೊತ್ತಿಗೆ ಬಸ್​ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದೆ. ಇದನ್ನ ಗಮನಿಸಿದ ಕಂಡೆಕ್ಟರ್​, ಡ್ರೈವರ್​ಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಚಾಲಕ ಬಸ್​ನ್ನ ತೀರ್ಥಹಳ್ಳಿ ಜೆಸಿ ಆಸ್ಪತ್ರೆ ಕಡೆಗೆ ಚಲಾಯಿಸಿದ್ದಾನೆ. ಸಮಯಕ್ಕೆ ಸರಿಯಾಗಿ ಬಸ್​ನ್ನ ಆಸ್ಪತ್ರೆಗೆ ಚಲಾಯಿಸಿದ ಡ್ರೈವರ್ ಹಾಗೂ ಕಂಡಕ್ಟರ್​, ಅಲ್ಲಿ ಪ್ರಯಾಣಿಕನನ್ನ ದಾಖಲಿಸಿ, ಮುಂದಕ್ಕೆ ಹೋಗಿದ್ದಾರೆ. 

ಆ್ಯಂಬುಲೆನ್ಸ್​ ಡ್ರೈವರ್​ಗಳ ಮಾನವೀಯತೆ

ಇನ್ನೂ ಹೃದಯಾಘಾತಕ್ಕೊಳಗಾದ ಪ್ರಯಾಣಿಕನ ಪರಿಸ್ಥಿತಿ ಗಂಭೀರವಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿದರೂ ಸಹ, ತುರ್ತಾಗಿ ಹೆಚ್ಚಿನ ಟ್ರೀಟ್ಮೆಂಟ್ ಒದಗಿಸುವ ಅಗತ್ಯವಿತ್ತು. ಆಗ ಅಲ್ಲಿದ್ದ ಆ್ಯಂಬುಲೆನ್ಸ್​ ಡ್ರೈವರ್​ ರಂಜಿತ್, ರಹಮತ್​, ಪವನ್​ರವರು ಪ್ರಯಾಣಿಕನನ್ನ ಶಿವಮೊಗ್ಗದ ಆಸ್ಪತ್ರೆಗೆ  ಶಿಫ್ಟ್ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ, ಕೆಲವೇ ಹೊತ್ತಿನಲ್ಲಿ ಶಿವಮೊಗ್ಗದ ಆಸ್ಪತ್ರೆಯೊಂದಕ್ಕೆ  ಪ್ರಯಾಣಿಕನನ್ನ ಶಿಫ್ಟ್ ಮಾಡಿ, ಆತನಿಗೆ ಸಿಗಬೇಕಿದ್ದ ತುರ್ತು ಚಿಕಿತ್ಸೆ ಕೊಡಿಸಿದ್ಧಾರೆ. 

ಕೊನೆಗೂ ಉಳಿಯಿತು ಜೀವ

ಸದ್ಯ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಯಲ್ಲಿದ್ಧಾರೆ. ಅವರು ಯಾರು? ಎಲ್ಲಿಯವರು ? ಎಂದು ಹೇಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಬಸ್​ನಲ್ಲಿ ಅವರ ಜೊತೆ ಯಾರು ಪ್ರಯಾಣಿಸುತ್ತಿರಲಿಲ್ಲ? ಡ್ರೈವರ್ , ಕಂಡಕ್ಟರ್​ , ಜೆಸಿ ಆಸ್ಪತ್ರೆಯ ಸಿಬ್ಬಂದಿ, ಆ್ಯಂಬುಲೆನ್ಸ್​ ಡ್ರೈವರ್ ಹೀಗೆ ಎಲ್ಲರೂ ಸಹ ಹಾರ್ಟ್​ ಅಟ್ಯಾಕ್​ ತುತ್ತಾದ ವ್ಯಕ್ತಿಯ ಪೂರ್ವಪರ ಕೇಳುವ ಗೋಜಿಗೂ ಹೋಗಲಿಲ್ಲ. ಬದಲಾಗಿ ಹೇಗಾದರೂ ಸರಿಯೇ ಜೀವ ಉಳಿಸಬೇಕು ಎಂದು ಪ್ರಯತ್ನ ಪಟ್ಟರು. ಅದರ ಫಲವಾಗಿ ಪ್ರಯಾಣಿಕನ ಜೀವ ಉಳಿದಿದೆ. 


ಶಿವಮೊಗ್ಗದಲ್ಲಿ ಮಹತ್ವದ ಸಭೆ ನಡೆಸಿ ಆರು ಸೂಚನೆಗಳನ್ನು ನೀಡಿದ ಎಸ್​ಪಿ ಮಿಥುನ್ ಕುಮಾರ್

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್ ಸಾಲು ಸಾಲು ಸಭೆಗಳನ್ನು ನಡೆಸ್ತಿದ್ಧಾರೆ. ಭದ್ರಾವತಿಯಲ್ಲಿ ಶಾಂತಿ ಸಭೆ ನಡೆಸಿದ್ದ ಎಸ್​ಪಿ , ಇದೀಗ ಶಿವಮೊಗ್ಗದಲ್ಲಿಯು ಶಾಂತಿ ಸಭೆ ನಡೆಸಿದ್ದಾರೆ.  23-06-2023  ರಂದು ಸಂಜೆ  ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಶಾಂತಿ ಸಮಿತಿ ಸಭೆಯನ್ನು ನಡೆಸಿ ಈ ಕೆಳಕಂಡ ಸೂಚನೆಗಳನ್ನು ನೀಡಿದ್ದಾರೆ. 

  • 1) ಸಮಾಜದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿಯು ಪೊಲೀಸ್ ಇಲಾಖೆಯ ಜೊತೆಗೆ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿರುತ್ತದೆ. ಪೊಲೀಸ್ ಇಲಾಖೆಯು ಸಮಾಜದ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತದೆ ಎಂಬ ಮನೋಭಾವ ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. 
  • 2) ಸಮಾಜದಲ್ಲಿ ಎಲ್ಲಾ ಧರ್ಮದ ಹಬ್ಬ ಮತ್ತು ಆಚರಣೆಗಳಿಗೆ ಅದರದೇ ಆದ ಪ್ರಾಮುಖ್ಯತೆ ಇದ್ದು, ಅದನ್ನು ತಿಳಿದುಕೊಂಡು ಅರ್ಥಪೂರ್ಣವಾಗಿ, ಶಾಂತಿಯುತವಾಗಿ ಮತ್ತು ಸಮನ್ವಯತೆಯಿಂದ ಹಬ್ಬವನ್ನು ಆಚರಣೆ ಮಾಡುವುದು. 
  • 3) ಸಾಮಾಜಿಕ ಜಾಲ ತಾಣಗಳಲ್ಲಿ ಯಾವುದೇ ಆಕ್ಷೇಪಾರ್ಹ ವೀಡಿಯೋ / ಫೋಟೋಗಳನ್ನು ಅಪ್ ಲೋಡ್ ಮಾಡುವುದು, ಹರಿಬಿಡುವುದು ಶಿಕ್ಷಾರ್ಹ  ಅಪರಾಧವಾಗಿದ್ದು, ಈ ರೀತಿಯ ಕೃತ್ಯಗಳನ್ನು ಎಸಗುವವರ ವಿರುದ್ದ ಕ್ರಮ ಜರುಗಿಸಲಾಗುವುದು.
  • 4) ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮುಖಾಂತರ ಸೌಹಾರ್ದತೆಗೆ ಭಂಗತಂದು ಸಮಸ್ಯೆಗಳನ್ನುಂಟು ಮಾಡುವಂತಹ ಯಾವುದೇ ಘಟನೆಗಳು ಕಂಡುಬಂದಲ್ಲಿ, ಕೂಡಲೇ ಹತ್ತಿರದ ಪೊಲೀಸ್ ಠಾಣೆ /  ತುರ್ತು ಸಹಾಯವಾಣಿ –ERSS – 112 ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳುವುದು.  
  • 5) ಸಮಾಜದಲ್ಲಿ ಶಾಂತಿ ಕಾಪಾಡುವುದೇ ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯವಾಗಿದ್ದು, ಸಮಾಜದ ಸ್ವಾಸ್ಥ್ಯ ಮತ್ತು ಸೌಹಾರ್ದತೆಗೆ ಭಂಗ ತರುವಂತಹ ಯಾವುದೇ ಕೃತ್ಯವೆಸಗುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. 
  • 6) ಹಬ್ಬದ ಆಚರಣೆ ಮತ್ತು ಪ್ರಾರ್ಥನೆಯ ಸಂದರ್ಭದಲ್ಲಿ  ಪೊಲೀಸ್ ಇಲಾಖಾ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಿದ್ದು, ಎಲ್ಲರೂ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡುವಂತೆ ಸೂಚಿಸಿದರು.


 

Share This Article