ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಪುತ್ರನನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡಲು ಕೆ.ಎಸ್.ಈಶ್ವರಪ್ಪ ಪ್ರಯತ್ನ ನಡೆಸುತ್ತಿರುವಾಗಲೇ ಮಾಜಿ ಸಂಸದ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಆಯನೂರು ಮಂಜುನಾಥ್ 2023ರ ಚುನಾವಣೆಗೆ ತಾವು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸದ್ದಿಲ್ಲದೆ ಸಿದ್ದತೆ ನಡೆಸಿದ್ದಾರೆ.

ವಿದ್ಯಾರ್ಥಿ ಜೀವನದಿಂದಲೂ ಸಂಘ ಪರಿವಾರದಲ್ಲಿದ್ದು ಕಳೆದ 5 ದಶಕಗಳಿಂದ ವಿವಿಧ ವರ್ಗದ ಶ್ರಮಿಕರ ಪರ ಹೋರಾಟದ ನೇತೃತ್ವ ವಹಿಸಿಕೊಂಡು ಬಂದಿರುವ ಅವರು ಶಿವಮೊಗ್ಗ ನಗರದ ಜನರ ಶಾಂತಿಯುತ ಬದುಕಿಗೆ ಅವಕಾಶ ಕಲ್ಪಿಸುವುದೇ ಪ್ರಥಮ ಆದ್ಯತೆಯಂತೆ.
1994ರಲ್ಲಿ ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಲಿ ಪಕ್ಷಕ್ಕೆ ಮೊದಲ ಜಯ ದಾಖಲಿಸಿ ಶಾಸನ ಸಭೆ ಪ್ರವೇಶಿಸಿದ್ದ ಅವರು 1998ರಲ್ಲಿ ಎಸ್.ಬಂಗಾರಪ್ಪರನ್ನು 1.59 ಲಕ್ಷ ಮತಗಳಿಂದ ಮಣಿಸಿ ಲೋಕಸಭಾ ಸದಸ್ಯರಾದರು.
ಬಳಿಕ 2010ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಗೊಂಡು, 2018ರಲ್ಲಿ ನೈಋತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದರು. ಮೊದಲು ವಿದ್ಯಾರ್ಥಿ ಸಂಘಟನೆ ಎಬಿವಿಪಿಯಲ್ಲಿ ನಂತರ ಭಾರತೀಯ ಮಜ್ದೂರ್ ಸಂಘಟನೆಯ ನೇತೃತ್ವವಹಿಸಿ ವಿವಿಧ ಸ್ತರದ ಶ್ರಮಿಕರ ಪರವಾದ ಹೋರಾಟ ನಡೆಸಿ ಆ ವರ್ಗಕ್ಕೆ ನ್ಯಾಯ ದೊರಕಿಸಲು ಶ್ರಮಿಸಿದ್ದಾರೆ. ಮೀಸಾ ಕಾಯ್ದೆಯಡಿ ಬಂಧಿತರಾಗಿ ವಾಜಪೇಯಿ ರಂತ ನಾಯಕರೊಂದಿಗೆ ಜೈಲು ವಾಸ ಸಹ ಅನುಭವಿಸಿದ್ದರು.

ಶಿವಮೊಗ್ಗ ನಗರದ ನಿವಾಸಿಯಾಗಿದ್ದರೂ ಜಿಲ್ಲಾ ಕೇಂದ್ರದ ಶಾಸಕನಾಗಿಲ್ಲ ಎಂಬ ಕೊರಗನ್ನು ನಿವಾರಿಸಲು ಈಗ ಆಯನೂರು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಯಡಿಯೂರಪ್ಪನವರಿಂದಾಗಿ ಶಿವಮೊಗ್ಗ ನಗರ ಅಭಿವೃದ್ಧಿಗೊಂಡು ವಿಮಾನ ನಿಲ್ದಾಣ ಕೂಡ ನಿರ್ಮಾಣವಾಗುತ್ತಿದ್ದರೂ ಇಲ್ಲಿ ಕೈಗಾರಿಕೆ ಆರಂಭಿಸಲು ಉದ್ಯಮಿಗಳು ಕೋಮು ಗಲಭೆ ಕಾರಣದಿಂದ ಹಿಂದೇಟು ಹಾಕುವಂತೆ ಆಗಿದೆ. ವ್ಯಾಪಾರಿಗಳು ಸಹ ಆತಂಕದಲ್ಲಿಯೇ ವ್ಯಾಪಾರ ಮಾಡುವ ಸ್ಥಿತಿ ಇದೆ. ಇದನ್ನು ನಿವಾರಿಸಿ ಜನ ಮತ್ತು ಉದ್ಯಮ ಸ್ನೇಹಿ ಪರಿಸ್ಥಿತಿಯನ್ನು ಸೃಷ್ಟಿಸಲು ಶತಾಯ ಗತಾಯ ಈ ಬಾರಿ ಎಲೆಕ್ಷನ್ ಗೆ ಸ್ಪರ್ಧಿಸಲೇಬೇಕೆಂಬ ಅಭಿಲಾಷೆಯನ್ನು ತಮ್ಮ ಹಿತೈಷಿಗಳೆದುರು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಈಶ್ವರಪ್ಪ ಕಳೆದ 32 ವರ್ಷ ಗಳಿಂದ ಸ್ಪರ್ಧಿಸಿ ಅಧಿಕಾರ ಅನುಭವಿಸಿದ್ದಾರೆ. ಈಗವರು ಕುಟುಂಬ ರಾಜಕಾರಣ ಮತ್ತು ಪುತ್ರ ವ್ಯಾಮೋಹ ಕೈಬಿಟ್ಟು ಬೇರೆಯವರು ಸ್ಪರ್ಧಿಸಲು ಅವಕಾಶ ಮಾಡಿಕೊಡುವುದು ಒಳಿತು ಎನ್ನುವ ಆಯನೂರು ಮಂಜುನಾಥ್ ಬಿಜೆಪಿ ಸಾಂಪ್ರದಾಯಿಕ ಮತಗಳ ಜೊತೆಗೆ ಶ್ರಮಿಕ ವರ್ಗದ ಕನಿಷ್ಠ 15-20 ಸಾವಿರ ಮತಗಳನ್ನು ಪಡೆಯುತ್ತೇನೆಂಬುದನ್ನು ಬಿಜೆಪಿ ನಾಯಕತ್ವಕ್ಕೆ ಮನವರಿಕೆ ಮಾಡಿಕೊಡಲು ಸಜ್ಜಾಗುತ್ತಿದ್ದಾರೆ. ಸದ್ಯದಲ್ಲಿಯೇ ತಮ್ಮ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನವರನ್ನು ಭೇಟಿಮಾಡಿ ತಮಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಡಿಸಬೇಕೆಂದು ಕೋರಲಿದ್ದಾರಂತೆ.
ಮತ್ತೊಂದೆಡೆ ಇವರಿಗೆ ಮೇಲ್ಮನೆ ಸದಸ್ಯರಾದ ಎಸ್.ರುದ್ರೇಗೌಡರು ಸಹ ಬೆಂಬಲ ಸೂಚಿಸುತ್ತಿದ್ದಾರೆಂಬುದು ಮೂಲಗಳಿಂದ ತಿಳಿದು ಬಂದಿದೆ. ಒಟ್ಟಾರೆ ಆಯನೂರು ಮಂಜುನಾಥ್ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಧುಮುಕುತ್ತಿರುವುದು ಮೊದಲೇ ಸಚಿವ ಸ್ಥಾನ ಸಿಗದಿದ್ದರಿಂದ ವಿಚಲಿತರಾಗಿರುವ ಈಶ್ವರಪ್ಪನವರಿಗೆ ಮತ್ತಷ್ಟು ಆತಂಕ ಮೂಡಿಸಬಹುದೇನೋ?
