ಶಿವಮೊಗ್ಗ : ಶಿವಮೊಗ್ಗದಲ್ಲಿ ಜನವರಿ 24 ರಿಂದ 27 ರವರೆಗೆ ನಾಲ್ಕು ದಿನಗಳ ಕಾಲ ನಗರದ ಅಲ್ಲಮ ಪ್ರಭು ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಮಲೆನಾಡು ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ’63ನೇ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಬೆಳ್ಳಿ 3 ಲಕ್ಷ! ಬಂಗಾರ 1.5 ಲಕ್ಷ! ಬಾನಿಗೇರಿದ ಬೆಲೆ, ಬಸವಳಿದ ಗ್ರಾಹಕ!
ಜನವರಿ 24 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಈ ಬೃಹತ್ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಂಸದರು ಹಾಗೂ ಹಲವು ಗಣ್ಯರು ಭಾಗವಹಿಸಲಿದ್ದಾರೆ. ವಿಶೇಷವಾಗಿ, ಮಲೆನಾಡಿನ ಕರಕುಶಲ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಿದ್ಧಪಡಿಸಲಾದ ಇ-ಕಾಮರ್ಸ್ ವೆಬ್‌ಸೈಟ್‌ಗೆ ಇದೇ ವೇಳೆ ಚಾಲನೆ ಸಿಗಲಿದೆ.
ಈ ಬಾರಿಯ ಪುಷ್ಪ ಪ್ರದರ್ಶನದಲ್ಲಿ 2 ಲಕ್ಷಕ್ಕೂ ಹೆಚ್ಚು ವಿವಿಧ ಬಣ್ಣದ ಹೂವುಗಳನ್ನು ಬಳಸಲಾಗುತ್ತಿದೆ. ವಿಶೇಷ ಆಕರ್ಷಣೆಯಾಗಿ ಹೂವುಗಳಿಂದ ನಿರ್ಮಿತವಾದ 16 ಅಡಿ ಎತ್ತರದ ಕೆಳದಿ ಶಿವಪ್ಪ ನಾಯಕನ ಪ್ರತಿಮೆ, 15 ಅಡಿ ಎತ್ತರದ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ ಮತ್ತು 60 ಅಡಿ ಅಗಲದ ಜೋಗ ಜಲಪಾತದ ಕಲಾಕೃತಿಗಳು ಪ್ರವಾಸಿಗರ ಕಣ್ಮನ ಸೆಳೆಯಲಿವೆ. ಐ ಲವ್ ಶಿವಮೊಗ್ಗ ಸೆಲ್ಫಿ ಪಾಯಿಂಟ್ ಕೂಡ ಯುವಜನರ ಆಕರ್ಷಣೆಯ ಕೇಂದ್ರವಾಗಲಿದೆ.
Malnad Crafts Festival ಸಂಜೀವಿನಿ ಯೋಜನೆಯಡಿ ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ‘ಕ್ರಾಫ್ಟ್ಸ್ ಆಫ್ ಮಲ್ನಾಡ್’ ಬ್ರಾಂಡ್ ಅಡಿ ಮಾರುಕಟ್ಟೆ ಕಲ್ಪಿಸಲಾಗಿದೆ. ಈ ಮೇಳದಲ್ಲಿ ಮಣ್ಣಿನ ಅಲಂಕಾರಿಕ ವಸ್ತುಗಳು, ಹಸೆ ಚಿತ್ತಾರ, ಭತ್ತದ ತೋರಣ, ಕಿನ್ನಾಳ ಕಲೆ, ಹಾಗೂ ವಿವಿಧ ರಾಜ್ಯಗಳ 19 ಜಿಐ ಟ್ಯಾಗ್ ಹೊಂದಿರುವ ವಿಶಿಷ್ಟ ಸೀರೆಗಳು ಮತ್ತು ಕೈಮಗ್ಗದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವಿರುತ್ತದೆ.
ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಪೂರ್ವಭಾವಿಯಾಗಿ ಸಿರಿಧಾನ್ಯಗಳ ಮಹತ್ವ ಸಾರಲು ಪ್ರತ್ಯೇಕ ಮೇಳ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ರೈತರಿಗಾಗಿ ವಿವಿಧ ಸ್ಪರ್ಧೆಗಳು ಮತ್ತು ಮಹಿಳೆಯರಿಗಾಗಿ ಹೂವು-ತರಕಾರಿಗಳನ್ನು ಬಳಸಿ ಮಾಡುವ ವಿಶಿಷ್ಟ ಹೂ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಳೆದ ಬಾರಿ 20 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿದ್ದ ಈ ಮೇಳಕ್ಕೆ ಈ ಬಾರಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

