ಶಿವಮೊಗ್ಗ : ಶಿವಮೊಗ್ಗ ನಗರದ ಟಿಪ್ಪುನಗರದಲ್ಲಿ ಕಳ್ಳರು ಕೈಚಳಕ ತೋರಿದ್ದು, ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಲಾಗಿದ್ದ ಬರೋಬ್ಬರಿ 18 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಮಹಿಂದ್ರಾ ಎಕ್ಸ್‌ಯುವಿ 700 (Mahindra XUV 700) ಕಾರನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ವಿವರ
ದೂರುದಾರರ ಪ್ರಕಾರ ಈ ಕಾರನ್ನು ದೂರುದಾರರು ಉಡುಪಿಯ ಮೂಲದ ವ್ಯಕ್ತಿಯೊಬ್ಬರಿಂದ ಶಿವಮೊಗ್ಗದ ವ್ಯಕ್ತಿಯೊಬ್ಬರ ಮಧ್ಯಸ್ಥಿಕೆಯಲ್ಲಿ ಖರೀದಿಸಿದ್ದರು. ಕಾರಿನ ಒಟ್ಟು ಮೊತ್ತ 18 ಲಕ್ಷ ರೂಪಾಯಿ ಎಂದು ನಿಗದಿಯಾಗಿತ್ತು. ವಾಹನದ ಮೇಲೆ ಬ್ಯಾಂಕ್ ಸಾಲ (Loan) ಇದ್ದ ಕಾರಣ, ದೂರುದಾರರು ಮುಂಗಡವಾಗಿ 6.50 ಲಕ್ಷ ರೂಪಾಯಿ ಪಾವತಿಸಿ, ಅಸಲಿ ದಾಖಲೆಗಳೊಂದಿಗೆ ಕಾರನ್ನು ವಶಕ್ಕೆ ಪಡೆದಿದ್ದರು. ಉಳಿದ ಹಣವನ್ನು ಸಾಲದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೀಡಲು ನಿರ್ಧರಿಸಲಾಗಿತ್ತು.
ಅಕ್ಟೋಬರ್ 18ರಂದು ರಾತ್ರಿ 8 ಗಂಟೆ ಸುಮಾರಿಗೆ ಟಿಪ್ಪುನಗರದ 4ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಯ ಎದುರಿನ ಕಾಂಪೌಂಡ್ ಹಾಕಿದ ಖಾಲಿ ಜಾಗದಲ್ಲಿ ಬಿಳಿ ಬಣ್ಣದ 2023ರ ಮಾಡೆಲ್‌ನ ಈ ಕಾರನ್ನು ನಿಲ್ಲಿಸಲಾಗಿತ್ತು. ಆದರೆ ಮರುದಿನ ಅಕ್ಟೋಬರ್ 19ರ ಬೆಳಿಗ್ಗೆ 6 ಗಂಟೆಗೆ ನೋಡಿದಾಗ ಕಾರು ಸ್ಥಳದಲ್ಲಿ ಇರಲಿಲ್ಲ. ಕಿಡಿಗೇಡಿಗಳು ಕಾಂಪೌಂಡ್ ಒಳಗೆ ನುಗ್ಗಿ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ದೂರುದಾರರು ನಾಪತ್ತೆಯಾದ ಕಾರಿಗಾಗಿ ಎಲ್ಲಾ ಕಡೆ ತೀವ್ರ ಹುಡುಕಾಟ ನಡೆಸಿದ್ದು, ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಡಿಸೆಂಬರ್ 24ರಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Mahindra XUV 700 Stolen from Tippu Nagar
