ಶಿವಮೊಗ್ಗ, ಡಿಸೆಂಬರ್ 9, 2025 ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗ ನಗರದಲ್ಲಿ ಇದೇ ಮೊದಲ ಬಾರಿಗೆ ಜಾಗತಿಕ ಉನ್ನತ ಶಿಕ್ಷಣ, ಇಂಟರ್ನ್‌ಶಿಪ್ ಮತ್ತು ಉದ್ಯೋಗ ಮೇಳ- 2025 ಅನ್ನು ಆಯೋಜಿಸಲಾಗಿದೆ. ವಿಸ್ತಂ ಇಡಿ ಸಂಸ್ಥೆಯು ಪ್ರತಿಷ್ಠಿತ ಪಿಇಎಸ್ ಟ್ರಸ್ಟ್‌ನ ಸಹಯೋಗದೊಂದಿಗೆ ಆಯೋಜಿಸಿರುವ ಈ ಬೃಹತ್ ಕಾರ್ಯಕ್ರಮವು ಡಿಸೆಂಬರ್ 11, 2025 ರಂದು ಸಾಗರ ರಸ್ತೆಯಲ್ಲಿರುವ ಪ್ರೇರಣಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದೆ. ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಇಂತಹ ಅಂತರರಾಷ್ಟ್ರೀಯ ಮಟ್ಟದ ಮೇಳವು ಶಿವಮೊಗ್ಗದಲ್ಲಿ ನಡೆಯುತ್ತಿರುವುದು ನಗರದ ವಿದ್ಯಾರ್ಥಿ ಸಮುದಾಯಕ್ಕೆ ಒಂದು ಅತ್ಯುತ್ತಮ ಅವಕಾಶ ಎಂದು ಪಿಇಎಸ್ ಐಟಿಎಂಎಸ್ ಕಾಲೇಜಿನ ರಿಜಿಸ್ಟ್ರಾರ್ ಡಾ. ನಾಗರಾಜ್ ಆರ್. ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಮೇಳವು ಯುರೋಪ್ ಮತ್ತು ಏಷ್ಯಾ ಖಂಡಗಳ 15ಕ್ಕೂ ಹೆಚ್ಚು ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳನ್ನು ಒಳಗೊಂಡಿದೆ. ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಫ್ರಾನ್ಸ್, ಹಂಗೇರಿ, ಸ್ವಿಟ್ಜರ್‌ಲ್ಯಾಂಡ್, ಮತ್ತು ಯುಎಇ ಸೇರಿದಂತೆ ವಿವಿಧ ದೇಶಗಳ ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಲಿವೆ. ಇಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಸಂಶೋಧನಾ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿವೇತನ, ಪ್ರವೇಶ ಪ್ರಕ್ರಿಯೆ, ವೀಸಾ ಮಾಹಿತಿ ಮತ್ತು ಜಾಗತಿಕ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ನೇರವಾಗಿ ಮಾಹಿತಿ ಪಡೆಯಬಹುದು. ನಂಜಪ್ಪ ಟ್ರಸ್ಟ್‌ನ ಡಿ.ಜಿ. ಬೆನಕಪ್ಪ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪ್ರವೇಶವು ಉಚಿತವಾಗಿದೆ. ವೈಯಕ್ತಿಕ ಮಾರ್ಗದರ್ಶನ ಬಯಸುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳನ್ನು ತರುವಂತೆ ಸೂಚಿಸಲಾಗಿದೆ ಎಂದರು
Global Education and Job Fair 20ಕ್ಕೂ ಹೆಚ್ಚು ಕಂಪನಿಗಳಿಂದ ಉದ್ಯೋಗಾವಕಾಶ
ಶಿಕ್ಷಣ ಮೇಳದ ಜೊತೆಗೇ, ಅದೇ ಸ್ಥಳದಲ್ಲಿ ಇಂಟರ್ನ್‌ಶಿಪ್ ಮತ್ತು ಉದ್ಯೋಗ ಮೇಳ ಕೂಡ ನಡೆಯಲಿದೆ. ಸುಮಾರು 20ಕ್ಕೂ ಹೆಚ್ಚು ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದು, ಐಟಿ, ಉತ್ಪಾದನೆ, ಬ್ಯಾಂಕಿಂಗ್, ಆರೋಗ್ಯಪಾಲನೆ ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ಇಂಟರ್ನ್‌ಶಿಪ್ ಅವಕಾಶಗಳನ್ನು ಸ್ಥಳೀಯ ಆಕಾಂಕ್ಷಿಗಳಿಗೆ ನೀಡಲು ಸಿದ್ಧವಾಗಿವೆ. ಅನುಭವಿ ವೃತ್ತಿಪರರು ಮತ್ತು ಹೊಸ ಪದವೀಧರರು ಉಚಿತವಾಗಿ ಈ ಮೇಳದಲ್ಲಿ ಭಾಗವಹಿಸಿ, ಸ್ಥಳದಲ್ಲೇ ನಡೆಯುವ ಸಂದರ್ಶನಗಳಲ್ಲಿ ಹಾಜರಾಗಬಹುದು ಮತ್ತು ನೇಮಕಾತಿ ತಂಡಗಳೊಂದಿಗೆ ನೇರವಾಗಿ ಸಂವಹನ ನಡೆಸಬಹುದು. ಉದ್ಯೋಗಾಕಾಂಕ್ಷಿಗಳು ತಮ್ಮ ರೆಸ್ಯೂಮೆ ಮತ್ತು ಶೈಕ್ಷಣಿಕ ದಾಖಲೆಗಳ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
Global Education and Job Fair in Shivamogga

