ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಬಾಧಿಸುತ್ತಿರುವ ಎಲೆ ಚುಕ್ಕೆ ರೋಗ (LSD), ಹಳದಿ ಎಲೆ ರೋಗ (YLD) ಸೇರಿದಂತೆ ಇನ್ನಿತರ ಮಾರಕ ರೋಗಗಳು ಹಾಗೂ ನಾಲ್ಕು ತಿಂಗಳ ನಿರಂತರ ಭಾರೀ ಮಳೆಯಿಂದಾಗಿ ನಷ್ಟದ ಹಾದಿ ಹಿಡಿದಿರುವ ರೈತರ ಸಮಸ್ಯೆಗಳ ಬಗ್ಗೆ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ.

ರೋಗ ಮತ್ತು ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಅಡಿಕೆ ತೋಟಗಳಲ್ಲಿ ನಿರೀಕ್ಷೆಗೂ ಮೀರಿ ಅಪಾರ ಹಾನಿಯಾಗಿದ್ದು, ಪರಿಣಾಮವಾಗಿ ಅನೇಕ ರೈತರು ಈ ವರ್ಷ ನಿರೀಕ್ಷಿಸಿದ್ದ ಒಟ್ಟು ಫಸಲಿನ ಕೇವಲ ನಾಲ್ಕನೇ ಒಂದು ಭಾಗದಷ್ಟು ಮಾತ್ರ ಬೆಳೆ ಪಡೆಯುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಸಭೆಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ, ಸಂಸದ ರಾಘವೇಂದ್ರ ಅವರು ಬೆಳೆ ವಿಮೆ ಯೋಜನೆಯಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನದಲ್ಲಿ ಕಂಡುಬರುತ್ತಿರುವ ಗಂಭೀರ ತಾಂತ್ರಿಕ ತೊಡಕುಗಳ ಬಗ್ಗೆಯೂ ಪ್ರಸ್ತಾಪಿಸಿದರು. ಅನೇಕ ಮಳೆಮಾಪನ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು, ಬೆಳೆ ಪರಿಷ್ಕರಣೆಗಾಗಿ ತಾಂತ್ರಿಕ ಮಾನದಂಡಗಳನ್ನು ಕೇವಲ ಮೂರು ವರ್ಷಕ್ಕೊಮ್ಮೆ ಪರಿಷ್ಕರಿಸುವುದು, ಹಾಗೂ 20 ರಿಂದ 45 ಕಿಲೋಮೀಟರ್ ದೂರದಲ್ಲಿರುವ ಬ್ಯಾಕಪ್ ಮಳೆಮಾಪನ ಕೇಂದ್ರಗಳ ಮಾಹಿತಿ ತಡವಾಗಿ ಲಭ್ಯವಾಗುತ್ತಿರುವುದು – ಇಂತಹ ಹಲವಾರು ಸಮಸ್ಯೆಗಳಿಂದಾಗಿ ಪರಿಹಾರಕ್ಕೆ ಅರ್ಹರಾಗಿರುವ ಸಾಕಷ್ಟು ರೈತರು ವಾಸ್ತವಕ್ಕೆ ತಕ್ಕುದಾದ ಮತ್ತು ನ್ಯಾಯಯುತವಾದ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಈ ಹಿನ್ನೆಲೆಯಲ್ಲಿ, ಸಂಸದರು ಕೇಂದ್ರ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದರು. 2024–25ರ ಬೆಳೆ ನಷ್ಟದ ಪರಿಹಾರವನ್ನು ಹವಾಮಾನಕ್ಕೆ ತಕ್ಕಂತೆ ನಿಖರ ಮಾಹಿತಿ ನೀಡುವ ಮತ್ತು ಸಮೀಪದಲ್ಲಿರುವ ಕೇಂದ್ರಗಳ ಆಧಾರದ ಮೇಲೆ ಮರು ಲೆಕ್ಕಾಚಾರ ಮಾಡಿ ರೈತರಿಗೆ ನೀಡಬೇಕು. ಅಲ್ಲದೆ, ಬೆಳೆಗಾರರಿಗೆ ಅತ್ಯಗತ್ಯವಾಗಿರುವ ಮಳೆ ಎಸ್ಎಂಎಸ್ ಸೇವೆಯನ್ನು ಕೂಡಲೇ ಪುನರ್‌ಸ್ಥಾಪಿಸಬೇಕು. ಜೊತೆಗೆ, ಅಡಿಕೆಗೆ ತಗಲುವ ಮಾರಕ ರೋಗಗಳ ನಿಯಂತ್ರಣಕ್ಕಾಗಿ ತಜ್ಞರ ಮೂಲಕ ತಕ್ಷಣದ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅಡಿಕೆ ಬೆಳೆ ನಷ್ಟಕ್ಕೆ ಒಂದು ವಿಶೇಷ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
Arecanut Crisis MP byr Demands Special Package


