ಶಿವಮೊಗ್ಗ : ಕಲಾವಿದರ ಬದುಕು ಮೂರಬಟ್ಟೆ ಎನ್ನುವುದಕ್ಕೆ ಈ ನಿರ್ದೇಶಕನ ಸಾವು ಅಕ್ಷರ ಸಹ ಸಾಕ್ಷಿಯಾಗಿದೆ. ಬದುಕಿದ್ದಾಗ ನೆಮ್ಮದಿಯನ್ನು ಕಾಣದ ಆತ ಸಾವಿನ ನಂತರವೂ ಸುಖಾಂತ್ಯ ಕಾಣಲಿಲ್ಲ. ಆಸ್ಪತ್ರೆಯವರು ಹಣ ನೀಡಿ, ಹೆಣ ತೆಗೆದುಕೊಂಡು ಹೋಗಿ ಎಂದಾಗ, ಅಲ್ಲಿದ್ದ ಸಹ ಕಲಾವಿದರೇ ತಮ್ಮ ಬಳಿಯಿದ್ದ ಅಲ್ಪಸ್ವಲ್ಪ ಹಣವನ್ನು ಹೊಂದಿಸಿದರು. ಆದರೆ ಅದು ಕೂಡ ಸಾಕಾಗದೆ ಇರುವಾಗ ಆಗಸದತ್ತ ಮುಖ ಮಾಡಿದರು. ನೈಜ ಹೆಣವಾಗಿ ಪಾತ್ರವಹಿಸಿದ ನಿಜವಾದ ಪಾತ್ರಧಾರಿಯ ದುರಂತ ಕಥೆಯಿದು.

Kannada Film Director ಇದು ಪಾತ್ರದಾರಿ ಕನ್ನಡ ಚಲನಚಿತ್ರದ ನಿರ್ದೇಶಕ ಸಂಗೀತ್ ಸಾಗರ್ ಅವರ ದುರಂತ ಅಂತ್ಯ ಕಂಡ ನೋವಿನ ಕಥೆಯಿದು. ಕಳೆದ ಎರಡು ತಿಂಗಳಿಂದ ಸಂಗೀತ್ ಸಾಗರ್ ಅವರ ತಂಡವು ತೀರ್ಥಹಳ್ಳಿ ಮತ್ತು ಕೊಪ್ಪ ತಾಲೂಕಿನ ವಿವಿಧ ಸ್ಥಳಗಳಲ್ಲಿ ಪಾತ್ರದಾರಿ ಚಿತ್ರದ ಚಿತ್ರೀಕರಣವನ್ನು ನಡೆಸುತ್ತಿತ್ತು. ಈ ಸಿನಿಮಾಕ್ಕೆ ನಾಲ್ಕೈದು ಮಂದಿ ಯುವಕರು ನಿರ್ಮಾಪಕರಿದ್ದು, ಲೋ ಬಜೇಟ್ ಸಿನಿಮಾವಾಗಿದೆ. 04-12-25 ರ ಬೆಳಗ್ಗೆ ಸಿನಿಮಾದ ಕೊನೆಯ ಶಾಟ್ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಸಿನಿಮಾ ಮುಗಿಯುವ ಮುನ್ನವೇ ಬಾಳ ಪಯಣ ಮುಗಿಸಿದ್ದಾರೆ.
ಹರಿಹರಪುರದಲ್ಲಿ ನೆನ್ನೆ 03-12-25 ಹಾಸ್ಯ ಕಲಾವಿದ ಸಂಜು ಬಸಯ್ಯರಿಗೆ ಆಕ್ಷನ್ ಕಟ್ ಹೇಳುತ್ತಿದ್ದಂತೆ ಸಂಗೀತ್ ಸಾಗರ್ ಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಚಿತ್ರತಂಡದ ಸದಸ್ಯರು ಅವರನ್ನು ಕೊಪ್ಪ ತಾಲೂಕಿನ ಆಸ್ಪತ್ರೆಗೆ ದಾಖಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ತಕ್ಷಣಕ್ಕೆ ಆಂಜಿಯೋಗ್ರಾಂ ಮಾಡಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಸಂಗೀತ್ ಸಾಗರ್ ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣದಲ್ಲಿ ಆದ ಚಿಕಿತ್ಸೆಗೆ ಎರಡು ಲಕ್ಷದ ಮೂವತ್ತೆರೆಡು ಸಾವಿರ ಹಣವನ್ನು ಚಿತ್ರತಂಡ ಭರಿಸಬೇಕಾಯಿತು. ಹೇಳಿ ಕೇಳಿ ಸ್ನೇಹಿತರೇ ಒಟ್ಟು ಗೂಡಿ ಮಾಡುತ್ತಿರುವ ಕಡಿಮೆ ಖರ್ಚಿನ ಸಿನಿಮಾ, ತಕ್ಷಣಕ್ಕೆ ಎರಡುವರೆ ಲಕ್ಷ ರೂಪಾಯಿ ಹೊಂದಿಸಲು ಸಾಧ್ಯವಾಗಲಿಲ್ಲ. ಆಗ ಚಿತ್ರತಂಡದವರು ನಿರ್ಮಾಪಕರು ಸೇರಿ ಆಸ್ಪತ್ರೆ ಆಡಳಿತ ಮಂಡಳಿಯವರಿಗೆ ಹಣ ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. ಆಸ್ಪತ್ರೆಯವರು ಒಂದು ಲಕ್ಷ ರೂಪಾಯಿ ಹಣ ಕಡಿಮೆ ಮಾಡಿದರೂ ಕೂಡ ಚಿತ್ರತಂಡ ಇನ್ನುಳಿದ ಹಣವನ್ನು ಭರಿಸಲು ಪರದಾಡಿತು. ಸ್ನೇಹಿತರು ಸಂಬಂಧಿಕರ ಬಳಿ ಹಣ ಕೇಳಿದರು. ಆದರೂ ಹಣ ಹೊಂದಿಸಲು ಸಾಧ್ಯವಾಗಲಿಲ್ಲ.
Kannada Film Director ಚಿಕಿತ್ಸಾ ಶುಲ್ಕಕ್ಕೆ ಚಿತ್ರತಂಡ ಬೇಸರ
ಸಂಗೀತ್ ಸಾಗರ್ ರವರನ್ನು ಕೊಪ್ಪದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತಂದ ಕೆಲವೇ ನಿಮಿಷಗಳಲ್ಲಿ ಅವರು ಸಾವನ್ನಪ್ಪಿದ್ದಾರೆ. ಚಿತ್ರತಂಡದವರು ಹೇಳುವ ಪ್ರಕಾರ ಆಸ್ಪತ್ರೆಗೆ ಸೇರಿದ ತಕ್ಷಣ ಆಂಜಿಯೋಗ್ರಾಫ್ ಮಾಡಿದರು. ನಂತರ ಹತ್ತು ನಿಮಿಷವೂ ಆಗಿಲ್ಲ. ಆಂಜಿಯೋಗ್ರಾಮ್ ಮಾಡಿದ್ದಾಗಿ ಆಸ್ಪತ್ರೆಯವರು ಹೇಳುತ್ತಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಆಂಜಿಯೋಗ್ರಾಮ್ ಮಾಡಲು ಸಾಧ್ಯನಾ..ಬೇಕಿದ್ದರೇ ಸಿಸಿ ಟಿವಿ ಫೂಟೇಜ್ ಇದೆ. ಚೆಕ್ ಮಾಡಿ ನೋಡಿ ಎಂದು ಹೇಳಿದ್ದಾರೆ. ನಮಗೆ ಆಸ್ಪತ್ರೆಯವರು ಒಂದುವರೆ ಲಕ್ಷ ರೂಪಾಯಿ ಹಣ ನೀಡುವಂತೆ ಹೇಳುತ್ತಿದ್ದಾರೆ. ನಮ್ಮ ತಂಡ ಐವತ್ತು ಸಾವಿರ ಹಣ ನೀಡಲು ಸಿದ್ದರಿದ್ದೇವೆ. ಆಸ್ಪತ್ರೆಯವರು ಅವಕಾಶ ಮಾಡಿಕೊಡಬೇಕು ಎಂದು ಚಿತ್ರ ತಂಡ ಮನವಿ ಮಾಡಿದೆ.
ಸಂಗೀತ್ ಸಾಗರ ಸಕಲೇಶಪುರದವರಾಗಿದ್ದು, ಮದುವೆಯಾಗಿ 23 ವರ್ಷಗಳಾಗಿದೆ. ಮೂಲತಃ ಅವರು ಸಂಗೀತ ನಿರ್ದೇಶಕರಾಗಿದ್ದು, ನಂತರದಲ್ಲಿ ಸಿನಿಮಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಪಾತ್ರಧಾರಿ ಸಿನಿಮಾದ ಹಾಡಿಗೆ ಸಂಗೀತ ನೀಡಿದ್ದಾರೆ. ಏಳಕ್ಕೂ ಹೆಚ್ಚು ಸಿನಿಮಾ ನಿರ್ದೇಶಿಸಿರುವ ಸಂಗೀತ್ ಸಾಗರ್ ಸಿನಿಮಾವನ್ನೇ ಬದುಕಾಗಿಸಿಕೊಂಡಿದ್ದರು. ಒಬ್ಬ ಕಲಾವಿದನ ಸಾವಿಗೆ ಆಸ್ಪತ್ರೆಯವರು ತಕ್ಷಣಕ್ಕೆ ಸ್ಪಂಧಿಸಬಹುದಿತ್ತು.ಆದರೆ ಅರ್ಧ ದಿನ ಹಣಕ್ಕಾಗಿ ಹೆಣವನ್ನು ಕಾಯ್ದಿರಿಸಿಕೊಂಡಿದ್ದು ಯಾವ ನ್ಯಾಯ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ..


