ಸೊರಬದ ಕಾನಹಳ್ಳಿಯಲ್ಲಿ 6 ಕಾಡಾನೆಗಳ ಹಿಂಡು ಪತ್ತೆ: ರೈತರ ಬೆಳೆ,ತೋಟಕ್ಕೆ ಹಾನಿ

prathapa thirthahalli
Prathapa thirthahalli - content producer

ಸೊರಬ: ಸೊರಬ ತಾಲೂಕಿನ ಕಾನಹಳ್ಳಿ-ಕೈಸೋಡಿ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಸುಮಾರು ಆರು ಕಾಡಾನೆಗಳ ಹಿಂಡು ಪತ್ತೆಯಾಗಿದ್ದು, ಇವು ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳಿಗೆ ನುಗ್ಗಿ ಹಾನಿ ಮಾಡಿ ಆತಂಕ ಸೃಷ್ಟಿಸಿವೆ.

wild Elephants Damage Crops & Areca Plantations
wild Elephants Damage Crops & Areca Plantations

ತಾಲೂಕಿನ ಉಳವಿ ಹೋಬಳಿಯ ಕಾನಹಳ್ಳಿ, ಮೈಸಾವಿ, ಕಣ್ಣೂರು ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಕಾಡಾನೆಗಳು ಸಂಚರಿಸುತ್ತಿರುವ ಮಾಹಿತಿ ಮೇರೆಗೆ ಡಿ. 2 ರಂದು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದರು. ಡ್ರೋಣ್ ಕ್ಯಾಮೆರಾ ಕಣ್ಗಾವಲಿನಲ್ಲಿ ಸುಮಾರು 6 ಆನೆಗಳ ಹಿಂಡು ಸೆರೆಯಾಗಿದೆ ಎಂದು ತಿಳಿದುಬಂದಿದೆ. ಎಸಿಎಫ್ ಸುರೇಶ್ ಕಲ್ಲಳ್ಳಿ, ಆರ್‌ಎಫ್‌ಒ ಶ್ರೀಪಾದ ನಾಯ್ಕ ಸೇರಿದಂತೆ ಸಕ್ರೆಬೈಲು ಬಿಡಾರದ ಮಾವುತರು ಆನೆಗಳ ಹಿಂಡನ್ನು ಕಾಡಿನೊಳಗೆ ಓಡಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಈ ಪ್ರದೇಶಗಳಲ್ಲಿ ಆನೆಗಳು ಸಂಚರಿಸಿರುವ ಹೆಜ್ಜೆ ಗುರುತುಗಳು ಮತ್ತು ಲದ್ದಿ ಲಭ್ಯವಾಗಿದ್ದು, ಗ್ರಾಮ ಪಂಚಾಯ್ತಿ ಸಿಬ್ಬಂದಿ ಮೈಕ್ ಮೂಲಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆಗಳ ಸಂಚಾರದ ಕುರಿತು ಪ್ರಕಟಿಸಿ, ವಾಹನಗಳಲ್ಲಿ ತೆರಳುವವರು ಹಾಗೂ ಹೊಲದಲ್ಲಿ ಕೆಲಸ ಮಾಡುವವರು ಎಚ್ಚರದಿಂದ ಇರುವಂತೆ ಸೂಚಿಸಿದ್ದರು.

ಇದರ ನಡುವೆಯೇ ಡಿ. 2ರ ರಾತ್ರಿ ಕಾನಹಳ್ಳಿ, ಕೈಸೋಡಿ ಗ್ರಾಮಗಳ ರೈತರ ಜಮೀನುಗಳಿಗೆ ದಾಳಿ ನಡೆಸಿರುವ ಆನೆಗಳ ಹಿಂಡು ಭಾರಿ ಹಾನಿ ಉಂಟುಮಾಡಿದೆ. ಕಾನಹಳ್ಳಿ ಗ್ರಾಮದ ಚೌಡಪ್ಪ ಕೆರೋಡಿ ಎನ್ನುವವರ ಜಮೀನಿನಲ್ಲಿ ಕಟಾವು ಮಾಡಿ ತೂರಿಟ್ಟಿದ್ದ ಸುಮಾರು 4 ಕ್ವಿಂಟಾಲ್ ಭತ್ತವನ್ನು ಸಂಪೂರ್ಣ ಹಾಳು ಮಾಡಿವೆ. ಅಯ್ಯಯ್ಯೋ ಸತ್ತೇ ಹೊಗ್ಯವಲ್ಲೋ ಅವ್ ಮನೆ ಹಾಳಾಗ ಪೂರ ತಿಂದ್ ಹೊಗ್ಯಾವಲ್ಲೋ ಎಂದು ರೈತ ಚೌಡಪ್ಪ ತಮ್ಮ ಸುಮಾರು 4 ಕ್ವಿಂಟಾಲ್ ಬೆಳೆ ಹಾನಿಗೊಳಗಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಕುಸಗೋಡು ಮಂಜುಪ್ಪ ಮತ್ತು ಕುಸಗೋಡು ನಾರಾಯಣ ಅವರ ಅಡಿಕೆ ತೋಟಕ್ಕೆ ನುಗ್ಗಿ 30 ಅಡಿಕೆ ಗಿಡಗಳನ್ನು ಮತ್ತು ಹನಿ ನೀರಿಗಾಗಿ ಅಳವಡಿಸಿದ್ದ ಸುಮಾರು ₹45,000 ಮೌಲ್ಯದ ಜಟ್ ಪೈಪ್‌ಗಳನ್ನು ತುಳಿದು ಹಾನಿಗೊಳಿಸಿವೆ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ. ಕಳೆದ 2-3 ದಿನಗಳಿಂದ ಉಳವಿ ಹೋಬಳಿಯ ಪತ್ರೆಸಾಲು, ಕರ್ಜಿಕೊಪ್ಪ, ಕಣ್ಣೂರು, ಕಾನಹಳ್ಳಿ, ಕೈಸೋಡಿ, ಮೈಸಾವಿ ಗ್ರಾಮಗಳಲ್ಲಿ ಸಂಚರಿಸುತ್ತಿರುವ ಈ ಆನೆಗಳು ಗ್ರಾಮಗಳ ಕೂಗಳತೆಯ ದೂರದಲ್ಲಿ ಬೀಡು ಬಿಟ್ಟಿದ್ದು, ಹೊಲ-ಗದ್ದೆ, ತೋಟಗಳ ಮೇಲೆ ದಾಳಿ ನಡೆಸಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.

wild Elephants Damage Crops & Areca Plantations

wild Elephants Damage Crops & Areca Plantations
wild Elephants Damage Crops & Areca Plantations

 

Share This Article